ಜಮೀರ್ ಅಹ್ಮದ್ ಮತ್ತು ಸಿದ್ದರಾಮಯ್ಯ ನಡುವಿನ ಬಾಂಧವ್ಯ ಇಂದು ನಿನ್ನೆಯದ್ದಲ್ಲ. ರಾಜಕೀಯದಲ್ಲಿ ಗುರು-ಶಿಷ್ಯರಂತಿದ್ದ ಸ್ನೇಹ ಸಂಬಂಧದಲ್ಲಿ ಈಗ ಬಿರುಕು ಮೂಡಿದೆಯೇ.. ಅನುಮಾನವೇ ಇಲ್ಲ. ಅದು ಬಹಿರಂಗವಾಗಿಯೇ ನಡೆದು ಹೋಗಿದೆ. ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಕೊಡಿಸಿ ಎಂದು ಕೇಳೋಕೆ ಬಂದಿದ್ದ ಆಪ್ತರಿಗೆ ʻತಮ್ಮ ವಿರುದ್ಧವೇ ಜಮೀರ್ ಕೆಲಸ ಮಾಡಿದ್ದಾನೆʼ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಸಾಮಾನ್ಯವಾಗಿ ಇಂತಹ ವಿಷಯಗಳನ್ನು ನೇರವಾಗಿ ಹೇಳದ ಸಿದ್ದರಾಮಯ್ಯ, ಪ್ರತಿಭಟಿಸೋಕೆ ಬಂದಿದ್ದ ಸಾಮಾನ್ಯ ಕಾರ್ಯಕರ್ತರ ಎದುರು ಹೇಳಿರುವುದು ಜಮೀರ್ ಮಾಡಿರುವ ಮೋಸ ಎಂಥದ್ದು ಎನ್ನುವುದಕ್ಕೆ ಸಾಕ್ಷಿ.
ದಾವಣಗೆರೆಯಲ್ಲಿ ಕೈ ಕೊಟ್ಟಿದ್ದರ ಪರಿಣಾಮ ಸಿದ್ದರಾಮಯ್ಯ ಅವರಿಗೆ ಕಾಡುತ್ತಲೇ ಇದೆ. ಏಪ್ರಿಲ್ 2026 ರಲ್ಲಿ ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಜಮೀರ್ ಆಂತರಿಕವಾಗಿ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಾಗ, ಇದು ಆರೋಪ ಅಷ್ಟೇ ಎನ್ನಲಾಗಿತ್ತು. ಆದರೆ ಆಮೇಲೆ ಬಂದಂತಹ ಆಡಿಯೋಗಳು ಜಮೀರ್ ಪಾತ್ರವನ್ನು ಸಾರಿದವು. ಕಾಂಗ್ರೆಸ್ ಪಕ್ಷದಲ್ಲಿದ್ದ ಮುಸ್ಲಿಂ ಮುಖಂಡರಿಗೆ ಅಂದರೆ ಮೂಲ ಕಾಂಗ್ರೆಸ್ಸಿಗರಿಗೆ ಜಮೀರ್ ಅವರಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಅಸಮಾಧಾನ ಹುಟ್ಟುಹಾಕಿತ್ತು. ಏಕೆಂದರೆ ಜಮೀರ್ ಕೂಡಾ ಕಾಂಗ್ರೆಸ್ಸಿಗರಲ್ಲ. 2018ರಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿ ಕಾಂಗ್ರೆಸ್ ಸೇರಿದ್ದವರು. ಕಾಂಗ್ರೆಸ್ ಅಭ್ಯರ್ಥಿಗೆ ರಾಜ್ಯಸಭೆಯಲ್ಲಿ ಅಡ್ಡ-ಮತದಾನ ಮಾಡಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದವರು. ಅದಾದ ನಂತರ ಕಾಂಗ್ರೆಸ್ ಸೇರುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ.
ಜಮೀರ್ ಅವರಷ್ಟೇ ಅಲ್ಲದೆ, ಜಮೀರ್ ಜೊತೆಗಿದ್ದವರನ್ನೆಲ್ಲ ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು, ಪಕ್ಷದಲ್ಲಿ ಸ್ಥಾನ ಮಾನ ಸಿಗುವಂತೆ ನೋಡಿಕೊಂಡಿದ್ದವರು ಸಿದ್ದರಾಮಯ್ಯ. 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಸಂಪುಟದಲ್ಲಿಯೂ ಜಮೀರ್ ಅಹ್ಮದ್ ಸಚಿವರಾಗುವಂತೆ ನೋಡಿಕೊಂಡಿದ್ದರು. ಅದೇ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದರೂ, ಜಮೀರ್ ಅವರನ್ನು ಮಂತ್ರಿಯಾಗಿ ಸೇರಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದವರು ಸಿದ್ದರಾಮಯ್ಯ. ಅಷ್ಟೇ ಅಲ್ಲ, 2023ರಲ್ಲಿ ಹೈಕಮಾಂಡ್ ಹೇಳಿದ್ದರೂ ಹಠ ಹಿಡಿದು ವಸತಿ ಖಾತೆಯಂತ ಪ್ರಬಲ ಖಾತೆ ಕೊಟ್ಟಿದ್ದರು. ಇದರ ನಡುವೆ ಜಮೀರ್ ವಿರುದ್ಧ ಅದೇನೇ ಆರೋಪ ಬಂದರೂ ತಡೆಗೋಡೆಯಂತೆ ನಿಂತಿದ್ದವರು ಸಿದ್ದರಾಮಯ್ಯ. ಇಷ್ಟೆಲ್ಲ ಇದ್ದರೂ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಜಮೀರ್ ಅವರು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರೂ, ಪಕ್ಷದ ಅಭ್ಯರ್ಥಿಯನ್ನೇ ಸೋಲಿಸೋಕೆ ಹೊರಟುಬಿಟ್ಟರು. ಅಷ್ಟೇ ಅಲ್ಲ, ಅದಕ್ಕೆ ಸಾಕ್ಷಿಗಳೂ ಸಿಕ್ಕಿಬಿಟ್ಟವು.
ಇದೆಲ್ಲದರ ಪರಿಣಾಮವೇ ಈಗ ಕಾಣುತ್ತಿದೆ. ಜೂನ್ 2026 ರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾದಾಗ, ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಸಿದ್ದರಾಮಯ್ಯ ಅವರ ವಿರೋಧವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ಗೆ ತೆರಳಿ ಮನವಿ ಮಾಡಿದ್ದರು. ಈ ವೇಳೆ ತೀವ್ರವಾಗಿ ಸಿಟ್ಟಾದ ಸಿದ್ದರಾಮಯ್ಯ, “ಅವನು ನನ್ನ ಪರಮಾಪ್ತ ಅಂತ ನೀವೆಲ್ಲ ಹೇಳ್ತೀರಾ, ಆದರೆ ಅವನು ಚುನಾವಣೆಯಲ್ಲಿ ನನ್ನ ಮತ್ತು ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾನೆ” ಎಂದು ಬೆಂಬಲಿಗರ ಎದುರೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಜೂನ್ 11, 2026 ರಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಹಿಂದೆ ದೆಹಲಿ ಪ್ರವಾಸದ ವೇಳೆಯೂ ಸಿದ್ದರಾಮಯ್ಯ ಅವರು ಜಮೀರ್‌ಗೆ “ಡೋಂಟ್ ಕಮ್ ಟು ಡೆಲ್ಲಿ” (ದೆಹಲಿಗೆ ಬರುವುದು ಬೇಡ) ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಬಲಗೈ ಬಂಟನಂತಿದ್ದ ಜಮೀರ್ ಅಹ್ಮದ್ ಖಾನ್, ಪಕ್ಷ ವಿರೋಧಿ ಚಟುವಟಿಕೆ ಮತ್ತು ದ್ರೋಹದ ಆರೋಪದ ಹಿನ್ನೆಲೆಯಲ್ಲಿ ಸದ್ಯ ಸಿದ್ದರಾಮಯ್ಯ ಅವರ ಸಂಪೂರ್ಣ ವಿಶ್ವಾಸ ಹಾಗೂ ರಾಜಕೀಯ ಬೆಂಬಲವನ್ನು ಕಳೆದುಕೊಂಡಿದ್ದಾರೆ.



