ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುವುದು ಹೊಸದಲ್ಲ. ವಾರಕ್ಕೆ ಮೂರ್ನಾಲ್ಕು ಬಾರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕಾ ಪ್ರಹಾರ ಇದ್ದೇ ಇರುತ್ತದೆ. ಆದರೆ ಇವುಗಳಿಗೆ ವಿಜಯೇಂದ್ರ ರಿಯಾಕ್ಟ್ ಮಾಡಿದ್ದು ಕಡಿಮೆ. ತಮ್ಮ ವಿರುದ್ಧ ನಡೆಯುತ್ತಿರುವ ಈ ರೀತಿಯ ಆರೋಪಗಳಿಗೆಲ್ಲ ವಿಜಯೇಂದ್ರ ಇದೇ ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. ಯತ್ನಾಳ್ ಅವರಷ್ಟೇ ಅಲ್ಲ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಸಿದ್ದೇಶ್ವರ್.. ಹೀಗೆ ಎಲ್ಲರ ವಿಷಯದಲ್ಲೂ ವಿಜಯೇಂದ್ರ ಸ್ಪಷ್ಟವಾಗಿ ಮಾತನಾಡಿದ್ದಾರೆ. ಅವರ ಪ್ರಕಾರ ಯತ್ನಾಳ್ & ಟೀಂ ಹಿಂದೆ ಇರುವುದು ಇನ್ನೊಬ್ಬ ನಾಯಕ.
ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಜಯೇಂದ್ರ ʻʻಕಾಂಗ್ರೆಸ್ಸಿಗರಿಂದ ಅಧಿಕಾರ ಗಳಿಸಿಕೊಳ್ಳುವುದು ಹೇಗೆ ಎಂದು ಕಲಿಯಬೇಕು ಹಾಗೂ ಬಿಜೆಪಿಯವರಿಂದ ಅಧಿಕಾರ ಕಳೆದುಕೊಳ್ಳುವುದು ಹೇಗೆ ಎಂದು ಕಲಿಯಬೇಕಿದೆʼʼ ಎಂಬ ಮಾತಿನಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಭಿನ್ನಮತ, ಕಚ್ಚಾಟಗಳನ್ನು ಒಪ್ಪಿಕೊಂಡಿದ್ಧಾರೆ. ಬಿಜೆಪಿ 2 ಬಾರಿ ಅಧಿಕಾರ ಗಳಿಸಿದ್ದರೂ, ಒಮ್ಮೆ 110, ಇನ್ನೊಮ್ಮೆ 104 ಸ್ಥಾನಗಳನ್ನು ಗೆದ್ದಿತ್ತು. ಆಗಲೂ ಅಷ್ಟೇ, ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದಾಗಿಯೇ ಸರಳ ಬಹುಮತ ಗಳಿಸೋಕೆ ಆಗಿರಲಿಲ್ಲ ಎಂದಿದ್ದಾರೆ ವಿಜಯೇಂದ್ರ. ವಿಜಯೇಂದ್ರ ಪ್ರಕಾರ ರಾಜ್ಯ ಬಿಜೆಪಿಯಲ್ಲಿ ಇದು ಹೊಸದಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ಕಾಲದಿಂದಲೂ ಇದ್ದೇ ಇದೆ.
ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿರುವ ವಿಜಯೇಂದ್ರ ʻʻಯತ್ನಾಳ್ ಅವರಿಗೆ ನಮ್ಮ ಬಗ್ಗೆ ಅದೇನು ಸಿಟ್ಟಿದೆಯೋ ಗೊತ್ತಿಲ್ಲ. ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಯತ್ನಾಳ್ ಅವರಿಗೆ ಯಾರೋ ಒಬ್ಬರು ಹೇಳಿಕೊಟ್ಟಿದ್ದಾರೆ. ಅವರ ಪ್ರಕಾರ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗುವ ಪಟ್ಟಿಯಲ್ಲಿ ಯತ್ನಾಳ್ ಅವರ ಹೆಸರಿತ್ತು. ಆದರೆ ವಿಜಯೇಂದ್ರ ಆ ಹೆಸರನ್ನು ತೆಗೆಸಿದರು ಎಂದು ನಂಬಿಸಿದ್ದಾರೆ. ಬಿಜೆಪಿಯಲ್ಲಿಯೇ ಇರುವ ಮಹಾನ್ ನಾಯಕರೊಬ್ಬರ ಮಾತನ್ನು ಯತ್ನಾಳ್ ನಂಬಿದ್ದಾರೆ. ದೆಹಲಿಯ ವರಿಷ್ಠರು ಕಳಿಸಿದ ಪಟ್ಟಿಯನ್ನು ಬದಲಿಸುವ ಶಕ್ತಿ ವಿಜಯೇಂದ್ರ ಅವರಿಗೆ ಇದೆಯೇ.. ಇಲ್ಲವೇ ಎಂಬ ಸಾಮಾನ್ಯ ಪ್ರಶ್ನೆಯನ್ನೂ ಯತ್ನಾಳ್ ಕೇಳಿಕೊಂಡಿಲ್ಲ. ಮಾಧ್ಯಮಗಳಲ್ಲಿಯೂ ಕೂಡಾ ಈ ಬಗ್ಗೆ ಸುದ್ದಿಯನ್ನು ಹೇಳಿ ಹಾಕಿಸಲಾಗುತ್ತಿದೆ. ಯತ್ನಾಳ್ ಅವರು ತಮ್ಮ ಅವಕಾಶವನ್ನು ತಮ್ಮ ಹರಕು ಬಾಯಿಯಿಂದಲೇ ಕಳೆದುಕೊಂಡಿದ್ದಾರೆಯೇ ಹೊರತು, ಬೇರೇನಲ್ಲ. ಯತ್ನಾಳ್ ಅವರಿಗೆ ಕಿವಿ ಕಚ್ಚುತ್ತಿರುವ ಆ ಮಹಾನ್ ನಾಯಕರು ಈಗಲೂ ಉನ್ನತ ಸ್ಥಾನದಲ್ಲಿದ್ಧಾರೆ. ನೆಮ್ಮದಿಯಾಗಿಯೇ ಇದ್ಧಾರೆ. ಯತ್ನಾಳ್ ಮಾತ್ರ ಪಕ್ಷದಿಂದ ಹೊರದಬ್ಬಿಸಿಕೊಂಡಿದ್ದಾರೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಬಂಡಾಯದ ಬಗ್ಗೆಯೂ ಮಾತನಾಡಿದ ವಿಜಯೇಂದ್ರ ʻʻರಮೇಶ್ ಜಾರಕಿಹೊಳಿ ದಡ್ಡರಲ್ಲ. ಆದರೆ ಮುಗ್ಧ. ಯಾರು ಏನೇ ಹೇಳಿದರೂ ಅದನ್ನು ತಕ್ಷಣ ನಂಬಿಬಿಡುತ್ತಾರೆ. ಅವರ ಆ ಮುಗ್ಧತೆಯನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ನನಗೆ ಗೌರವ ಇದೆʼʼ ಎಂದಿದ್ದಾರೆ.
ಈಶ್ವರಪ್ಪ ಅವರು ಬಂಡಾಯವಾಗಿ ಸ್ಪರ್ಧೆ ಮಾಡಿದಾಗ ವಿಜಯೇಂದ್ರ ಅವರು ಮನವೊಲಿಸಲು ಭಾರೀ ಪ್ರಯತ್ನ ಪಟ್ಟರಂತೆ. ಲೋಕಸಭೆ ಟಿಕೆಟ್ ಕುರಿತಂತೆಯೂ ನಾನು ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿದ್ದೆ. ಆದರೆ ಆಗಲಿಲ್ಲ. ರಾಜ್ಯಸಭೆಗೆ ಕಳಿಸಿಕೊಡುತ್ತೇವೆ. ನನ್ನ ಮೇಲೆ ನಂಬಿಕೆ ಇಡಿ ಎಂದು ಕೇಳಿಕೊಂಡರೂ ಈಶ್ವರಪ್ಪನವರು ಕೇಳಲಿಲ್ಲ ಎಂದಿದ್ದಾರೆ ವಿಜಯೇಂದ್ರ.
ಇನ್ನು ಕುಮಾರ್ ಬಂಗಾರಪ್ಪ ಅವರದ್ದೂ ಅಷ್ಟೇ. ಅವರಿಗೆ ಹೊಸ ಶಕ್ತಿ ತುಂಬಿದವರು ಯಡಿಯೂರಪ್ಪ ಮತ್ತು ನಾನು. ಹೀಗಿದ್ದರೂ ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಜಿಎಂ ಸಿದ್ದೇಶ್ವರ ಅವರ ಬಗ್ಗೆಯೂ ಮಾತನಾಡಿರುವ ವಿಜಯೇಂದ್ರ ʻʻಅವರು ಕೇಂದ್ರದಲ್ಲಿ ಸಚಿವರಾಗುವುದಕ್ಕೆ ಯಡಿಯೂರಪ್ಪ ಹಠ ಹಿಡಿದು ಕುಳಿತಿದ್ದರು. ಅದು ಅವರಿಗೂ ಗೊತ್ತಿದೆ. ಒಂದು ಸೋಲಿಗೆ ಹೀಗಾಗುತ್ತಾರೆ ಎಂದುಕೊಂಡಿರಲಿಲ್ಲʼʼ ಎಂದೂ ಹೇಳಿದ್ದಾರೆ.
ಅಂದಹಾಗೆ ತಮ್ಮ ಈ ಮಾತಿನಲ್ಲಿ ʻಒಬ್ಬ ಮಹಾನ್ ನಾಯಕʼ ಎಂದು ವಿಜಯೇಂದ್ರ ಅವರೇನೋ ಹೇಳುತ್ತಾರೆ. ಅವರು ಬಿಜೆಪಿಯಲ್ಲೇ ಇದ್ದಾರೆ. ಉನ್ನತ ಸ್ಥಾನದಲ್ಲಿದ್ಧಾರೆ ಎಂದು ಹೇಳುತ್ತಾರೆ. ಆದರೆ ಆ ಮಹಾನ್ ನಾಯಕ ಯಾರು ಎಂದು ಮಾತ್ರ ಹೇಳೋದಿಲ್ಲ. ಆದರೆ ಒಂದಂತೂ ಸತ್ಯ. ವಿಜಯೇಂದ್ರ ಮೌನ ಮುರಿಯುತ್ತಿದ್ದಾರೆ.



