ವಿನೋದ್ ರಾಜ್ ಕುಮಾರ್ ಅವರ ತಂದೆ ಯಾರು..? ಈ ಪ್ರಶ್ನೆಗೆ ಲೀಲಾವತಿ ಅವರು ʻಇದೇ ನನ್ನ ಉತ್ತರʼ ಎಂದು ಸ್ಪಷ್ಟ ಉತ್ತರ ಹೇಳಿಲ್ಲ. ಆದರೆ ಪ್ರತಿ ಬಾರಿ ಪ್ರಶ್ನೆ ಮಾಡಿದಾಗಲೂ ಒಂದು ಅನುಮಾನ ಸೃಷ್ಟಿಯಾಗುವಂತೆ ಮಾತನಾಡುತ್ತಿದ್ದರೇ ಹೊರತು, ಅವರು ಬದುಕಿರುವವರೆಗೂ ಸತ್ಯ ಹೇಳಲೇ ಇಲ್ಲ. ಡೌಟ್ ಬರುವಂತೆ ಮಾತನಾಡುವುದನ್ನೂ ನಿಲ್ಲಿಸಲಿಲ್ಲ. ಈ ಮಧ್ಯೆ ರವಿ ಬೆಳಗೆರೆ ಅವರು ರಾಜ್ ಲೀಲಾ ವಿನೋದ ಎಂಬ ಪುಸ್ತಕ ಬರೆದು ಅವರೂ ಕೂಡಾ ಪರೋಕ್ಷವಾಗಿ ಡಾ.ರಾಜ್ ಕುಮಾರ್ ಅವರ ಮೇಲೆ ಅನುಮಾನ ಬರುವಂತೆ ಮಾಡಿದರು. ಕಾನೂನು ಪ್ರಕಾರ ರವಿ ಬೆಳಗೆರೆ ಅವರ ವಿರುದ್ಧ ಕೇಸು ಹಾಕುವಂತೆ ಇರಲಿಲ್ಲ. ಈಗ ಅದೆಲ್ಲದಕ್ಕೂ ಉತ್ತರವಾಗಿ ʻಲೀಲಮ್ಮ ನಿನ್ನ ಗಂಡ ಯಾರಮ್ಮʼ ಎಂಬ ಪುಸ್ತಕ ಬಂದಿದೆ. ಈ ಪುಸ್ತಕದಲ್ಲಿ ಲೀಲಾವತಿ ಅವರ ಪತಿ, ವಿನೋದ್ ರಾಜ್ ಅವರ ತಂದೆ ಯಾರು ಎಂಬ ಬಗ್ಗೆ ದಾಖಲೆಗಳ ಸಮೇತ ಹೇಳಲಾಗಿದೆ.
ಈ ಪುಸ್ತಕದ ಪ್ರಕಾರ ಲೀಲಾವತಿ ಅವರ ಪತಿ ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ಮಹಾಲಿಂಗ ಭಾಗವತರ್. ವಿನೋದ್ ರಾಜ್ ಅವರ ಅಧಿಕೃತ ತಂದೆಯೂ ಅವರೇ. ತಮಿಳುನಾಡಿನ ಚೆನ್ನೈ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಚಂಗಲ್ ಪಟ್ಟು ಜಿಲ್ಲೆಗಳಲ್ಲಿ ಮಹಾಲಿಂಗ ಭಾಗವತರ್, ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರ ಮಾಲೀಕತ್ವದ ಸ್ವತ್ತುಗಳಿದ್ದವು. ಮಹಾಲಿಂಗ ಭಾಗವತರ್ ಮೃತರಾದ ನಂತರ ಆ ಸ್ವತ್ತುಗಳಿಗೆ ಸಂಬಂಧಿಸಿದ ತೀರುವಳಿ ಪತ್ರ, ಕ್ರಯಪತ್ರ, ದಾನಪತ್ರ, ಪಹಣಿ, ಪಟ್ಟಾ ದಾಖಲೆಗಳು ಹಾಗೂ ಆಧಾರ್‌ಕಾರ್ಡ್ ಎಲ್ಲವುಗಳ ದಾಖಲೆಯೂ ಈ ಪುಸ್ತಕದಲ್ಲಿದೆ.
ಪುಸ್ತಕ ಬರೆದಿರುವುದು ಎನ್ ಆರ್ ರಮೇಶ್. ಡಾ.ರಾಜ್ ಕುಮಾರ್ ಅವರ ಅಭಿಮಾನಿ. ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿ ಮುಖಂಡ. ದಾಖಲೆಗಳನ್ನು ಹುಡುಕಿ ಹುಡುಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದ್ರಲ್ಲಿ ಫೇಮಸ್ ಆಗಿರುವ ಎನ್ ಆರ್ ರಮೇಶ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಮಾಜಿ ಆಡಳಿತ ಪಕ್ಷದ ನಾಯಕರಾಗಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದವರು.
ಎನ್ ಆರ್ ರಮೇಶ್ ಅವರಿಗೆ ಜೊತೆ ನೀಡಿರುವುದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಸಿ ಸೋಮಶೇಖರ್, ಪತ್ರಕರ್ತ ಬಿ ಗಣಪತಿ, ಲೇಖಕರಾದ ದೊಡ್ಡ ಹುಲ್ಲೂರು ರುಕ್ಕೋಜಿ, ಜಗನ್ನಾಥ್ ಬಹುಳೆ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ಪ್ರವೀಣ್ ನಾಯಕ್ ಮೊದಲಾದವರು.
ಡಾ. ರಾಜ್‌ಕುಮಾರ್ ಅವರ ಚಾರಿತ್ರ್ಯವಧೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಪತ್ರಕರ್ತರು ಲೀಲಾವತಿಯವರನ್ನು ಹೇಗೆ ಅಸ್ತ್ರವಾಗಿ ಬಳಸಿಕೊಂಡರು ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ವಿನೋದ್ ರಾಜ್ ಅವರ ತಂದೆ ಯಾರು? ಅವರ ಮೂಲ ಕುಟುಂಬ ಯಾವುದು? ಹಾಗೂ ವಿನೋದ್ ರಾಜ್ ಅವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ದಶಕಗಳಿಂದ ಇದ್ದ ನಿಗೂಢ ಪ್ರಶ್ನೆಗಳಿಗೆ ಎನ್ ಆರ್ ರಮೇಶ್ ಆಧಾರಗಳೊಂದಿಗೆ ಉತ್ತರಿಸಿದ್ದಾರೆ.



