ಕಡುಬಡವರಿಗೆ ಉಚಿತ ಆಂಬುಲೆನ್ಸ್ ಸೇವೆ, ಅನಾಥ ಶವಗಳ ಸಂಸ್ಕಾರಕ್ಕೆ ನೆರವಾಗುವ ಮೂಲಕ ದೊಡ್ಡ ಹೀರೋ ಎಂದು ಬಿಂಬಿಸಿಕೊಂಡಿದ್ದ, ಸಮಾಜ ಸೇವಕ ಎಂದೇ ಫೇಮಸ್ ಆಗಿದ್ದ ಜಲೀಲ್ ಈಗ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆತ ಡ್ರಗ್ಸ್ ಸಪ್ಲೈ ಮಾಡ್ತಾ ಇದ್ದದ್ದು ಕೂಡಾ ಆಂಬುಲೆನ್ಸ್‌ನಲ್ಲೇ ಎನ್ನುವುದು ವಿಶೇಷ. ಜೀವ ಉಳಿಸಬೇಕಿದ್ದ ಆಂಬುಲೆನ್ಸ್‌ನಲ್ಲೇ ಜೀವ ತೆಗೆಯುವ ಡ್ರಗ್ಸ್ ಸರಬರಾಜು ಮಾಡ್ತಿದ್ದ ಈ ಬೆಳ್ತಂಗಡಿ ಹೀರೋ.
ಬೆಳ್ತಂಗಡಿಯಲ್ಲಿ ಸಮಾಜ ಸೇವಕ ಮತ್ತು ಆಂಬುಲೆನ್ಸ್ ಚಾಲಕನಾಗಿ ಗುರುತಿಸಿಕೊಂಡಿದ್ದ ಜಲೀಲ್ ಬಾನಾನನ್ನು ಆತನನ್ನು ಸ್ಥಳೀಯವಾಗಿ “ಬೆಳ್ತಂಗಡಿಯ ಹೀರೊ” ಎಂದು ಕರೆಯಲಾಗುತ್ತಿತ್ತು. ಆತನ ಹೆಸರು ಜಲೀಲ್ ಆದರೂ ಯಾರೂ ಕೂಡಾ ಕೇವಲ ಜಲೀಲ್ ಎನ್ನುತ್ತಿರಲಿಲ್ಲ. ಬದಲಿಗೆ ಜಲೀಲ್ ಬಾಬಾ ಎನ್ನುತ್ತಿದ್ಧರು. ತುರ್ತು ಸಂದರ್ಭಗಳಲ್ಲಿ ಮತ್ತು ಅಪಘಾತಗಳಾದಾಗ ಜನರಿಗೆ ತಕ್ಷಣ ಸ್ಪಂದಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುತ್ತಿದ್ದ. ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದ. ಕಡುಬಡವರು ಹಾಗೂ ಅನಾಥ ಶವಗಳ ಸಂಸ್ಕಾರಕ್ಕೆ ನೆರವಾಗುತ್ತಿದ್ದ.
ಆದರೆ, ಇತ್ತೀಚೆಗೆ ಆಂಬುಲೆನ್ಸ್ ಬಳಸಿಕೊಂಡೇ ಆತ ₹5.50 ಕೋಟಿ ಮೌಲ್ಯದ ಎಂಡಿಎಂಎ (MDMA) ಡ್ರಗ್ಸ್ ದಂಧೆ ನಡೆಸುತ್ತಿರುವುದು ಮಂಗಳೂರು ಸಿಸಿಬಿ ಪೊಲೀಸರಿಂದ ಬಯಲಾಗಿದೆ. ಸದ್ಯ ಈತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ತನ್ನ ಆಂಬುಲೆನ್ಸ್ ಮೂಲಕವೇ ಜನರಿಗೆ ಹತ್ತಿರವಾಗಿದ್ದ ಜಲೀಲ್ ಬಾಬಾನ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಜೀವ ಉಳಿಸೋ ಆಂಬುಲೆನ್ಸ್ನ್ನೇ ತನ್ನ ಡ್ರಗ್ಸ್ ಜಾಲದ ಅಡ್ಡೆ ಮಾಡಿಕೊಂಡಿರೋದು ಬಯಲಾಗಿದೆ.
ಈ ಘಟನೆಯ ಬೇಸ್ ಶುರುವಾಗೋದು ಬಾಗಲಕೋಟೆಯಲ್ಲಿ. ಬಾಗಲಕೋಟೆಯಲ್ಲಿ ಸಿಕ್ಕಿಬಿದ್ದ ಬರೋಬ್ಬರಿ ಐದೂವರೆ ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ನೆಟ್‌ವರ್ಕ್‌ನಲ್ಲಿ ಇದೆ ಜಲೀಲ್ ಬಾಬಾ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಕಳೆದ ಜೂನ್ 25ರಂದು ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ಕುಳಾಯಿಗುಡ್ಡೆ ಬಳಿ ದಾಳಿ ನಡೆಸಿ, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬುವನಿಂದ 1.50 ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈತನನ್ನು ವಿಚಾರಣೆ ನಡೆಸಿದಾಗ ದೆಹಲಿಯಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ಬೆಂಗಳೂರು ಮೂಲಕ ಕರಾವಳಿಗೆ ತರುತ್ತಿದ್ದ ಜಾಲದ ಬಗ್ಗೆ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ಜುಲೈ 15ರಂದು ಬಾಗಲಕೋಟೆಯ ಹುನಗುಂದದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು, 5.196 ಕೆಜಿ ತೂಕದ, 5.50 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದರು. ಮುಖ್ಯ ಡೀಲರ್ಗಳಾದ ಬೆಳ್ತಂಗಡಿಯ ಇಂದಬೆಟ್ಟುವಿನ ಮೊಹಮ್ಮದ್ ಅಲ್ತಾಫ್, ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ ಹಾಗೂ ಅಲ್ಫಾಜ್ ಎಂಬುವರನ್ನು ಸೆರೆಹಿಡಿದಿದ್ದರು. ಬಂಧಿತ ಆರೋಪಿಗಳನ್ನು ಇನ್ನಷ್ಟು ಡ್ರಿಲ್ ಮಾಡಿದಾಗ ಬೆಳ್ತಂಗಡಿಯ ಜಲೀಲ್ ಬಾಬಾ ಕೈವಾಡದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಆಂಬುಲೆನ್ಸ್ ಮೂಲಕವೇ ಡ್ರಗ್ಸ್ ಡೀಲ್ : ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ, ತುರ್ತು ಸೇವೆಯ ನೆಪದಲ್ಲಿ ತನ್ನ ಆಂಬುಲೆನ್ಸ್‌ನಲ್ಲೇ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ, ಡಾಕ್ಟರ್‌ಗಳಿಗೆ ಹಾಗೂ ಯುವಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನಂತೆ. ಸಿಸಿಬಿ ಪೊಲೀಸರು ಮಂಗಳೂರಿನ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಜಲೀಲ್ ಬಾಬಾನನ್ನು 4ನೇ ಆರೋಪಿಯನ್ನಾಗಿ ಉಲ್ಲೇಖಿಸಿದ್ದಾರೆ.
ಆಂಬುಲೆನ್ಸ್ “ತುರ್ತು ಸೇವೆ” (Emergency Service) ವ್ಯಾಪ್ತಿಗೆ ಬರುವುದರಿಂದ ಪೊಲೀಸರು ಸಾಮಾನ್ಯವಾಗಿ ನಾಕಾಬಂಧಿ ಅಥವಾ ಚೆಕ್‌ಪೋಸ್ಟ್‌ಗಳಲ್ಲಿ ಇದನ್ನು ತಡೆದು ತಪಾಸಣೆ ನಡೆಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಈತ ಯಾರೂ ಸಂಶಯ ಪಡದಂತೆ ಡ್ರಗ್ಸ್ ಸಾಗಿಸುತ್ತಿದ್ದ. ದೆಹಲಿಯಿಂದ ಕಾರುಗಳ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಬೃಹತ್ ಡ್ರಗ್ಸ್ ಸಂಗ್ರಹವನ್ನು ಈತನ ಸಹಚರರು ಪಡೆದುಕೊಳ್ಳುತ್ತಿದ್ದರು. ಅವರಿಂದ ಜಲೀಲ್ ಬಾಬಾ ಎಂಡಿಎಂಎ (MDMA) ಮಾದಕ ವಸ್ತುವನ್ನು ಸ್ವೀಕರಿಸುತ್ತಿದ್ದ. ತನ್ನ ಆಂಬುಲೆನ್ಸ್‌ನಲ್ಲೇ ಡ್ರಗ್ಸ್ ಇಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಸಾಗಿಸುತ್ತಿದ್ದ. ಅಲ್ಲಿನ ಕಾಲೇಜು ವಿದ್ಯಾರ್ಥಿಗಳು, ವೈದ್ಯರು ಮತ್ತು ಸ್ಥಳೀಯ ಯುವಕರಿಗೆ ಯಾರಿಗೂ ತಿಳಿಯದಂತೆ ಗುಟ್ಟಾಗಿ ಸರಬರಾಜು ಮಾಡುತ್ತಿದ್ದ.



