ಮೂವರು ಅಕ್ಕ ತಂಗಿಯರು. ಒಬ್ಬರನ್ನೊಬ್ಬರು ಬಿಟ್ಟು ಇರುವುದಕ್ಕೆ ಆಗುವುದಿಲ್ಲ ಎಂದು ಮೂವರೂ ಒಬ್ಬನನ್ನೇ ಮದುವೆಯಾದರು. ಇದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಫ್ಯಾಕ್ಟ್ ಚೆಕ್ ಮಾಡಿದರೆ ಈ ಮದುವೆಯೇ ಸುಳ್ಳು ಎಂದು ಬಯಲಾಗಿದೆ. ಇದೊಂದು ಡ್ರಾಮಾ ಎನ್ನುವುದೂ ಗೊತ್ತಾಗಿದೆ. ಹಾಗಾದರೆ ಫೋಟೋ, ವಿಡಿಯೋ ಸುಳ್ಳಾ ಎಂದರೆ.. ಹೊರಬರುವ ಕಥೆಯೇ ಬೇರೆ.
ಮೂವರು ಸಹೋದರಿಯರು ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಕೇವಲ ಸಾಮಾಜಿಕ ಜಾಲತಾಣದ ಒಂದು ನಾಟಕ (Prank Reel). ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಈ ಇನ್‌ಫ್ಲುಯೆನ್ಸರ್‌ಗಳು ಕೇವಲ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ಸುಳ್ಳು ಮದುವೆ ಕಟ್ಟುಕಥೆ ಸೃಷ್ಟಿಸಿದ್ದರು.
ವೈರಲ್ ಆಗಿದ್ದ ವಿಡಿಯೋದಲ್ಲಿ ಏನಿತ್ತು?
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರದ ದೇವಾಲಯವೊಂದರಲ್ಲಿ ಇಬ್ಬರು ಸೋದರಿಯರು ಹಾಗೂ ಅವರ ಸೋದರ ಸಂಬಂಧಿ ಯುವತಿ ಮದುವೆಯಾಗಿದ್ದರು. ಮೂವರೂ ಕೂಡಾ ವಿಡಿಯೋಗಳನ್ನು ಚಿತ್ರೀಕರಿಸತುತಿದ್ದ ಕ್ಯಾಮೆರಾಮನ್ ವಿಕಾಸ್ ಎಂಬಾತನಿಂದ ತಾಳಿ ಕಟ್ಟಿಸಿಕೊಂಡಿದ್ದರು. ವೈರಲ್ ಆದ ವಿಡಿಯೋದಲ್ಲಿ ಒಟ್ಟಿಗೆ ಹಾರ ಹಾಕಿ, ಹಣೆಗೆ ಸಿಂಧೂರ ಇಡಿಸಿಕೊಂಡಿದ್ದರು. “ನಾವು ಬಾಲ್ಯದಿಂದ ಒಟ್ಟಿಗೆ ಬೆಳೆದಿದ್ದು, ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲದ ಕಾರಣ ಒಬ್ಬನನ್ನೇ ಮದುವೆಯಾಗಿದ್ದೇವೆ” ಎಂದು ಯುವತಿಯರು ಮದುವೆಯ ಬಗ್ಗೆ ಹೇಳಿಕೊಂಡಿದ್ದರು. ಈ ವಿಡಿಯೋ ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ತಂದಿದೆ ಎಂದು ಹಲವು ಸಂಘಟನೆಗಳು ಆಕ್ರೋಶ ಹೊರಹಾಕಿ ಪೊಲೀಸರಿಗೆ ದೂರು ನೀಡಿದ್ದವು.
ಅಂದಹಾಗೆ ವಿಡಿಯೋದಲ್ಲಿದ್ದ ಒಬ್ಬ ಯುವತಿ ಅಪ್ರಾಪ್ತೆಯಾಗಿದ್ದಳು. ಅಂದರೆ 18 ವರ್ಷ ತುಂಬಿರಲಿಲ್ಲ. ವಿಷಯ ಗಂಭೀರವಾಯ್ತು. ಕಾನೂನು ಕ್ರಮ ಜರುಗಿಸುವ ಹಂತಕ್ಕೆ ತಲುಪಿದಾಗ ಯುವತಿಯರು ಬಾಲ ವಿಕಾಸ ಸಮಿತಿ (CWC) ಮುಂದೆ ಹಾಜರಾಗಿ ಅಸಲಿ ಸತ್ಯ ಒಪ್ಪಿಕೊಂಡಿದ್ದಾರೆ.
ವೈರಲ್ ಸುದ್ದಿಯ ಹೈಲೈಟ್ಸ್ ಇಷ್ಟೇ..
ಕೇವಲ ನಾಟಕ: ಕೇವಲ ಪಬ್ಲಿಸಿಟಿ ಮತ್ತು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಗಳಿಸಲು ಈ ಮದುವೆ ನಾಟಕ ಆಡಿದ್ದಾಗಿ ಯುವತಿಯರು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
ಮೈನರ್ ಯುವತಿ: ತನಿಖೆಯ ವೇಳೆ ಮದುವೆ ನಾಟಕವಾಡಿದ ಮೂವರು ಯುವತಿಯರಲ್ಲಿ ಒಬ್ಬಳು ಅಪ್ರಾಪ್ತ ವಯಸ್ಕಳು (Minor) ಎಂದು ತಿಳಿದುಬಂದಿದೆ.
ಅಧಿಕೃತ ಮದುವೆ ಅಲ್ಲ: ಯಾವುದೇ ನಿಜವಾದ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಈ ಮದುವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಸುಳ್ಳು ಸುದ್ದಿ ಹರಡುವವರಿಗೆ ಕಾನೂನು ಗೊತ್ತಿರಲಿ. ಭಾರತದಲ್ಲಿ ಕೇವಲ ಲೈಕ್ಸ್ ಮತ್ತು ಫಾಲೋವರ್ಸ್‌ಗಳಿಗಾಗಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ಸಮಾಜದಲ್ಲಿ ಶಾಂತಿ ಕದಡುವ ಇಂತಹ ಸುಳ್ಳು ಪ್ರಾಂಕ್ (Prank) ವಿಡಿಯೋಗಳನ್ನು ನಿಯಂತ್ರಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಕಾನೂನುಗಳಿವೆ. ಜೈಲು, ದಂಡದ ಶಿಕ್ಷೆಗಳೂ ಇವೆ. ಪ್ರಾಂಕ್ ವಿಡಿಯೋಗಳಲ್ಲಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡರೆ ಪೊಕ್ಸೋ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿಯೂ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

