ಶಾಸಕ ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಧರ್ಮನಿಂದನೆ ಕೇಸ್ ದಾಖಲಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಿಟಿ ರವಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದ್ದು, ಸಿಟಿ ರವಿ ಅವರಿಗೆ ಬಂಧನದ ಭೀತಿಯಂತೂ ಇಲ್ಲ. ಅಂದಹಾಗೆ ಈ ಪ್ರಕರಣದಲ್ಲಿ ಸಿಟಿ ರವಿ ಅವರ ವಿರುದ್ಧ ಪೊಲೀಸರು ಎಡವಿದ್ಧಾರೆ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ.
ಇವುಗಳನ್ನೇ ಎತ್ತಿ ತೋರಿಸಿರುವ ಶಾಸಕ ಸಿಟಿ ರವಿ, ಕೋರ್ಟಿನಲ್ಲೂ ಅವುಗಳನ್ನೇ ಮಂಡಿಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದರ ಕುರಿತು ನೀಡಿದ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಿ.ಟಿ.ರವಿ ವಿರುದ್ಧ ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮುದಾಸೀರ್ ಎಂಬುವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮನೆಗೆ ತೆರಳಿ ನೋಟಿಸ್ ನೀಡಲು ಮುಂದಾಗಿದ್ದರು. ಆದರೆ ಸಿ.ಟಿ ರವಿ ಅವರು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅವರ ಮನೆಯ ಕಾಂಪೌಂಡ್ಗೆ ಪೊಲೀಸರು ನೋಟಿಸ್ ಅಂಟಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಿ.ಟಿ. ರವಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪೊಲೀಸರು ಎಡವಿದ್ದು ಎಲ್ಲಿ..?
FIR ಪ್ರತಿ ನೀಡಿಲ್ಲ : ಪೊಲೀಸರು ವಿಚಾರಣಾ ನೋಟಿಸ್ ನೀಡಲು ಮನೆಗೆ ಬಂದಾಗ, ಸಿ.ಟಿ. ರವಿ ಅವರು ಮೊದಲು ನನಗೆ ಎಫ್‌ಐಆರ್ ಪ್ರತಿ ನೀಡಿ ಎಂದು ಪಟ್ಟು ಹಿಡಿದರು. FIR ಪ್ರತಿ ಒದಗಿಸದ ಕಾರಣ ಅವರು ನೋಟಿಸ್ ಸ್ವೀಕರಿಸಲು ನಿರಾಕರಿಸಿದರು. ಕಾನೂನು ಪ್ರಕಾರ FIR ಪ್ರತಿಯನ್ನೇ ನೀಡದೆ ನೇರವಾಗಿ ವಿಚಾರಣೆಗೆ ಬನ್ನಿ ಎಂದು ಕರೆಯುವಂತಿಲ್ಲ. ಕ್ರಿಮಿನಲ್ ಕೇಸುಗಳಾದರೆ ಬೇರೆ..
ಪೂರ್ವಾಪರ ಪರಿಶೀಲನೆ ನಡೆಸಿಲ್ಲ : ಯಾವುದೇ ದೂರು ಬಂದ ತಕ್ಷಣ ಅದರ ಗುಣಾವಗುಣ ಹಾಗೂ ವಾಸ್ತವವನ್ನು ಪರಿಶೀಲಿಸದೆ ಪೊಲೀಸರು ಏಕಾಏಕಿ ಪ್ರಕರಣ ದಾಖಲಿಸಿದ್ದಾರೆ ಎಂದು ರವಿ ಆರೋಪಿಸಿದ್ದಾರೆ. ಯಾರಾದರೂ ದೂರು ಕೊಟ್ಟ ತಕ್ಷಣ ನೇರವಾಗಿ ಪೊಲೀಸರು ನೋಟಿಸ್ ಕೊಡುವುದಿಲ್ಲ. ದೂರು ಕೊಟ್ಟ ವ್ಯಕ್ತಿಯ ಹಿನ್ನೆಲೆ, ಘಟನೆಯ ಬಗ್ಗೆ ಸತ್ಯಾಸತ್ಯತೆ ವಿಚಾರಣೆ ಮಾಡುತ್ತಾರೆ.
ಸಂಬಂಧ ಪಡದ ವ್ಯಕ್ತಿಯಿಂದ ದೂರು : ಸಿ .ಟಿ. ರವಿ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸುವಾಗ, ದೂರು ನೀಡಿರುವ ವ್ಯಕ್ತಿ (ಚಿಕ್ಕಮಗಳೂರು ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ) ಘಟನೆಯ ನೇರ ಸಂತ್ರಸ್ತರಲ್ಲ, ಬದಲಿಗೆ ಕೇವಲ 3ನೇ ವ್ಯಕ್ತಿ (Third Party) ಎಂದು ಪ್ರಮುಖವಾಗಿ ಆಕ್ಷೇಪಿಸಿದ್ದಾರೆ. ದ್ವೇಷ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರರು ಯಾವುದೇ ರೀತಿಯಲ್ಲಿ ನೇರವಾಗಿ ಬಾಧಿತರಾಗಿಲ್ಲ ಪೊಲೀಸರು ಕೇವಲ 3ನೇ ವ್ಯಕ್ತಿಯು ನೀಡಿದ ದೂರಿನ ಆಧಾರದ ಮೇಲೆ, ಭಾಷಣದ ಪೂರ್ವಾಪರ ಅಥವಾ ಸತ್ಯಾಸತ್ಯತೆಯನ್ನು ಪ್ರಾಥಮಿಕವಾಗಿ ತನಿಖೆ ಮಾಡದೆ ಆತುರವಾಗಿ ಬಿಎನ್‌ಎಸ್ (BNS) ಸೆಕ್ಷನ್ 353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ..
ಇದೆಲ್ಲವನ್ನೂ ಹೈಕೋರ್ಟ್ ಗಮನಿಸಿದೆ. ಪ್ರಕರಣದ ಎಫ್‌ಐಆರ್ ಗಮನಿಸಿದ ನ್ಯಾಯಾಲಯ, ಏಕೆ ಬೇಕು? ಯಾಕೆ ಈ ರೀತಿ ಹೇಳಿದಿರಿ? ಎದೆ ಸೀಳಿದರೆ ಎರಡಕ್ಷರ ಇಲ್ಲ? ಇದೆಲ್ಲ ಏಕೆ ಬೇಕು ಎಂದು ಸಿ. ಟಿ. ರವಿ ಪರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಯಾರ ಭಾವನೆಗೂ ಧಕ್ಕೆ ತರುವ ಕೆಲಸವಾಗಿಲ್ಲ. ಮೂರನೇ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಅರ್ಜಿದಾರರು ಸರಿಯಾಗಿ ಸ್ಪಂದಿಸಿಲ್ಲ. ತಮ್ಮ ಬೆಂಬಲಿಗರ ಜತೆ ಕುಳಿತು ಕಾಂಗರೂ ಕೋರ್ಟ್ ನಡೆಸಿ, ನೋಟಿಸ್ ನೀಡಲು ತೆರಳಿದ್ದ ಅಧಿಕಾರಿಗಳನ್ನೇ ನಿಂದಿಸಿ, ಬೆದರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ನಮ್ಮ ಬಳಿ ಇದೆ ಎಂದರು.
ಇದನ್ನು ನಿರಾಕರಿಸಿದ ಅರುಣ್ ಶ್ಯಾಮ್, ಪೊಲೀಸರು ಎಫ್‌ಐಆರ್ ಪ್ರತಿ ಒದಗಿಸದೆಯೇ ನೋಟಿಸ್ ನೀಡಲು ತೆರಳಿದ್ದರು. ಇದರಿಂದ ಅರ್ಜಿದಾರರು ಎಫ್‌ಐಆರ್ ಎಲ್ಲಿ, ಯಾವ ಪ್ರಕರಣ, ಏಕೆ ಇಲ್ಲಿಗೆ ಬಂದಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ತಮ್ಮ ಹಕ್ಕಿನ ಭಾಗವಾಗಿ ಎಫ್ಐಆರ್ ಪ್ರತಿಯನ್ನು ಕೇಳಿದ್ದಾರೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಜುಲೈ 31ಕ್ಕೆ ವಿಚಾರಣೆ ಮುಂದೂಡಿತು. ಅಲ್ಲಿವರೆಗೂ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಸೂಚಿಸಿತು.



