ಕಾಕ್ರೋಚ್ ಮೇಲಿನ ಕೇಸ್ ವಾಪಸ್ ತಗೊಳ್ಳೋದಾಗಿ ಕೇಂದ್ರ ಸರ್ಕಾರ ಮತ್ತೆ ಘೋಷಣೆ ಮಾಡಿದೆ. ಪ್ರತಿಭಟನಾಕಾರರ ಮೇಲಿನ ಕೇಸುಗಳನ್ನು ಹಿಂಪಡೆಯದೆ ಇದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಬಿಹಾರದ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಈ ಕೇಸುಗಳಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ, ಪೊಲೀಸ್ ವಾಹನಗಳನ್ನು ಹೊತ್ತೊಯ್ದ, ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದ ಕೇಸುಗಳನ್ನೂ ವಾಪಸ್ ತೆಗೆದುಕೊಳ್ತಾರೆಯೇ.. ಹಾಗೇನಾದರೂ ಆದರೆ ಕ್ರಿಮಿನಲ್ಸ್‌ಗೆ ಸಿಜೆಪಿ ಸ್ಟೇಜ್ ಕೊಟ್ಟಂತಾಗುವುದಿಲ್ಲವೇ.. ಅದಕ್ಕಿಂತ ಗಂಭೀರ ಏನು ಗೊತ್ತೇ.. ಪೊಲೀಸರಿಗೆ ಸಿಕ್ಕಿರುವ ಅಧಿಕೃತ ಸಾಕ್ಷಿಗಳ ಪ್ರಕಾರ 2,873 ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದ್ದವರು ಭಾಗಿಯಾಗಿದ್ಧಾರೆ. ಇವರ ಕಥೆ ಏನು..?
ಪರೀಕ್ಷೆಯ ಅಕ್ರಮಗಳು ಮತ್ತು ಇತರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಲಾಗುವುದು ಎಂದು ಬಿಹಾರ ಸರ್ಕಾರ ಘೋಷಿಸಿದೆ. ಪ್ರತಿಭಟನೆಯ ವೇಳೆ ವಶಕ್ಕೆ ಪಡೆಯಲಾದ ಅಥವಾ ಬಂಧಿಸಲಾದ ವ್ಯಕ್ತಿಗಳನ್ನು ರಿಲೀಸ್ ಮಾಡಲಾಗಿದೆ. ನೀಟ್ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್ ಜಾರಿಗೆ ತರಲು ಯತ್ನಿಸಿದ 694 ಜನರನ್ನು ಕಳೆದ ವಾರ ವಶಕ್ಕೆ ಪಡೆಯಲಾಗಿತ್ತು. ಇದು ಬಿಹಾರದ ವರದಿ ಮಾತ್ರ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳನ್ನು ಮತ್ತೆ ಬಂಧಿಸಲಾಗುತ್ತಿದ್ದು, ದೆಹಲಿಯಲ್ಲಿ ಕಣ್ಗಾವಲು ಇಡಲಾಗುತ್ತಿದೆ.
ಸಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ರ್ಕಾರವು ತಕ್ಷಣವೇ ಕೇಸ್‌ಗಳನ್ನು ವಾಪಸ್ ಪಡೆದು ಲಿಖಿತ ಗ್ಯಾರಂಟಿ ನೀಡದಿದ್ದರೆ ಮತ್ತೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ನೆನಪಿರಲಿ.. ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿಯೇನೂ ನಡೆದಿಲ್ಲ. ಅವಾಚ್ಯ ಶಬ್ಧಗಳಲ್ಲಿ ಬೈದಿದ್ದನ್ನು ಸೈಡಿಗೆ ಇಟ್ಟು ನೋಡಿದರೂ.. ಕ್ರಿಮಿನಲ್ ಕೆಲಸವನ್ನೇ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.
ಹಿಂಸಾಚಾರ ಮತ್ತು ಹಲ್ಲೆ: ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು, ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ 118ಕ್ಕೂ ಹೆಚ್ಚು ಪೊಲೀಸರು ಮತ್ತು 60ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಸಾರ್ವಜನಿಕ ಆಸ್ತಿಗೆ ಹಾನಿ: ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದೆ. ವಾಹನಗಳ ಒಳಗೆ ಕುಳಿತಿದ್ದ ಪೊಲೀಸರ ಮೇಲೂ ಗುಂಪು ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಪೊಲೀಸ್ ವಾಹನಗಳು, ಸಿಸಿಟಿವಿ ಕ್ಯಾಮೆರಾಗಳನ್ನೇ ಕದ್ದು ಒಯ್ಯಲಾಗಿದೆ.
ಪ್ರತಿಭಟನೆಯಲ್ಲಿ ಕ್ರಿಮಿನಲ್ಸ್‌ಗೆ ಏನು ಕೆಲಸ..?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Protest) ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯಲ್ಲಿ ವಿವಿಧ ಅಪರಾಧ ಹಿನ್ನೆಲೆ ಹೊಂದಿರುವ ಸುಮಾರು 2,873 ವ್ಯಕ್ತಿಗಳು ಭಾಗಿಯಾಗಿದ್ದರು. ‘ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (FRS) ಕ್ಯಾಮೆರಾಗಳ ಮೂಲಕ ಗುರುತಿಸಲಾದ ಈ ಪೈಕಿ ಹೆಚ್ಚಿನವರು ಈ ಹಿಂದೆ ಕೊಲೆ, ದರೋಡೆ, ಅತ್ಯಾಚಾರ, ಅಪಹರಣ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಮಾದಕದ್ರವ್ಯ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಈಶಾನ್ಯ ದೆಹಲಿಯ ಜಾಫರಾಬಾದ್, ಚಂದ್ ಬಾಗ್ ಮತ್ತು ಸೀಲಂಪುರ ಹಾಗೂ ಆಗ್ನೇಯ ದೆಹಲಿಯ ಜಾಮಿಯಾ ನಗರ, ಶಾಹೀನ್ ಬಾಗ್ ಮತ್ತು ಓಖ್ಲಾ ಪ್ರದೇಶಗಳಲ್ಲಿ ಕಂಡುಬಂದಿದ್ದವರೇ ಹೆಚ್ಚು. ಮರ್ಡರ್, ರೇಪ್, ದರೋಡೆಯಂತ ಕ್ರಿಮಿನಲ್ ಆರೋಪ ಹೊತ್ತವರಿಗೆ ಪ್ರತಿಭಟನೆಯಲ್ಲೇನು ಕೆಲಸ..? ಅಲ್ಲದೆ, ಪೋಲಿಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ವಾಹನಗಳಿಗೆ ಹಾನಿ ಮಾಡಲಾಗಿದೆ. ಕೆಲವು ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಶೂಗಳನ್ನೂ ಕಿತ್ತುಕೊಂಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಎಲ್ಲವೂ ನಡೆದಿವೆ.
ಪೊಲೀಸರು ತಪ್ಪು ಮಾಡಿದ್ದಾರೆ. ಪೆಲೆಟ್ ಗನ್ ಬಳಕೆ, ಎಕೆ-47 ಹಿಡಿದು ಬೆದರಿಕೆ, ಡ್ರಗ್ಸ್ ತುಂಬಿ ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದ ಪ್ರಕರಣಗಳೂ ವರದಿಯಾಗಿವೆ. ಅವುಗಳೂ ತಪ್ಪೇ. ಹಾಗಂತ ಕ್ರಿಮಿನಲ್ ಕೇಸುಗಳನ್ನು ವಾಪಸ್ ತೆಗೆದುಕೊಳ್ಳೋದು ಒಳ್ಳೆಯ ನಡೆಯಂತೂ ಖಂಡಿತಾ ಅಲ್ಲ.



