ಛತ್ರಪತಿ ಶಿವಾಜಿ ಕಥೆಯಲ್ಲಿ ಬೆಳವಡಿ ಮಲ್ಲಮ್ಮ ಪಾತ್ರ ಬರುತ್ತದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೆಳವಡಿ ಸಂಸ್ಥಾನದ ವೀರ ರಾಣಿ ಇಡೀ ವಿಶ್ವದಲ್ಲೇ ಮೊದಲ ಮಹಿಳಾ ಸೈನ್ಯವನ್ನು ಕಟ್ಟದ್ದ ಮಹಿಳೆ. 4,000 ಮಹಿಳಾ ಸೈನಿಕರ ಪಡೆಯೊಂದಿಗೆ ಮರಾಠಿ ಸೈನ್ಯದ ವಿರುದ್ಧ ವೀರಾವೇಶದಿಂದ ಕಾದಾಡಿ, ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ್ದ ಬೆಳವಡಿ ಮಲ್ಲಮ್ಮ, ಆನಂತರ ಶಿವಾಜಿಯೊಂದಿಗೆ ಸಂಧಾನ ಮಾಡಿಕೊಳ್ಳುತ್ತಾಳೆ. ಈ ವೇಳೆ ಅಪಾರ್ಥದಿಂದ ಯುದ್ಧವಾಗಿದೆ ಎಂದು ಅರಿವಾಗಿ ಮಲ್ಲಮ್ಮನ ಪತಿಯ ಹತ್ಯೆ ಹಾಗೂ ಯುದ್ಧ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಾನೆ. ಈ ಬಾರಿ ಕನ್ನಡಿಗ ರಿಷಬ್ ಶೆಟ್ಟಿಯವರೇ ಶಿವಾಜಿ ಪಾತ್ರ ಮಾಡ್ತಿರೋದ್ರಿಂದ ಬೇರೆಯವರು ಟಚ್ ಮಾಡದ ಬೆಳವಡಿ ಮಲ್ಲಮ್ಮನ ಕಥೆ ಶಿವಾಜಿ ಚಿತ್ರದಲ್ಲಿದೆ. ಈ ಪಾತ್ರಕ್ಕೆ ಆಯ್ಕೆಯಾಗಿರುವುದು ಭೂಮಿ ಪಡ್ನೇಕರ್. ಅಂದಹಾಗೆ ಎಷ್ಟು ಜನಕ್ಕೆ ಬೆಳವಡಿ ಮಲ್ಲಮ್ಮನ ಕಥೆ ಗೊತ್ತು..?
ಸಂದೀಪ್ ಸಿಂಗ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಮಹಾರಾಷ್ಟ್ರ ಹಾಗೂ ಕರ್ನಾಟಕದ ಇತಿಹಾಸದ ಮಹತ್ವದ ಘಟನೆಗಳನ್ನು ಆಧರಿಸಿರುವ ಸಿನಿಮಾ. ರಿಷಬ್ ಶೆಟ್ಟಿ ಅವರು ಶಿವಾಜಿ ಮಹಾರಾಜರಾಗಿ ಮಿಂಚಲಿದ್ದು, ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ʻದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಚಿತ್ರದಲ್ಲಿ ಮಲ್ಲಮ್ಮನಾಗುತ್ತಿರುವುದು ಭೂಮಿ ಪಡ್ನೇಕರ್. ಕರ್ನಾಟಕದ ಶೌರ್ಯದ ಪ್ರತೀಕವಾದ ಬೆಳವಡಿ ಮಲ್ಲಮ್ಮನಂತಹ ಧೀರ ಮಹಿಳೆಯ ಪಾತ್ರವನ್ನು ತೆರೆಮೇಲೆ ತರುತ್ತಿರುವುದು ನನ್ನ ಸೌಭಾಗ್ಯ ಮತ್ತು ಹೆಮ್ಮೆಯ ಸಂಗತಿ ಎಂದು ಖುಷಿ ಪಟ್ಟಿದ್ದಾರೆ ಭೂಮಿ.
ಬೆಳವಡಿ ಮಲ್ಲಮ್ಮನ ಕಥೆ : ಬೆಳವಡಿ ಮಲ್ಲಮ್ಮ 1624 ರಲ್ಲಿ ಇಂದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ (ಸ್ವಾದಿ) ಪ್ರಾಂತ್ಯದ ರಾಜಮನೆತನದಲ್ಲಿ ಜನಿಸಿದವರು. ತಂದೆ ಸೋದೆ ರಾಜ ಮಧುಲಿಂಗ ನಾಯಕ ಮತ್ತು ತಾಯಿ ರಾಣಿ ವೀರಮ್ಮಾಜಿ. ಕನ್ನಡ, ಮರಾಠಿ, ಸಂಸ್ಕೃತ, ಮತ್ತು ಉರ್ದು ಭಾಷೆಗಳನ್ನು ಕಲಿತಿದ್ದ ಮಲ್ಲಮ್ಮ ಕತ್ತಿ ವರಸೆ, ಬಿಲ್ಲುಗಾರಿಕೆ, ಕುದುರೆ ಸವಾರಿ ಮತ್ತು ಈಟಿ ಎಸೆತದಲ್ಲಿ ಅಪ್ರತಿಮ ಪಾಂಡಿತ್ಯ ಹೊಂದಿದ್ದರು. ನಿಗದಿತ ಸಮಯದಲ್ಲಿ ಅತೀ ಹೆಚ್ಚು ಹುಲಿಗಳನ್ನು ಬೇಟೆಯಾಡಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಸಂಸ್ಥಾನದ 28ನೇ ದೊರೆ ರಾಜ ಈಶಪ್ರಭು ದೇಸಾಯಿ ಅವರನ್ನು ಮಲ್ಲಮ್ಮ ವರಿಸಿದ್ದರು. ಮಲ್ಲಮ್ಮ ಕೇವಲ ಅಂತಃಪುರದ ರಾಣಿಯಾಗಿ ಉಳಿಯಲಿಲ್ಲ. ಮಲ್ಲಮ್ಮನವರ ಪತಿ ಈಶಪ್ರಭು ದೇಸಾಯಿ, ಛತ್ರಪತಿ ಶಿವಾಜಿ ನೇತೃತ್ವದ ಮರಾಠ ಪಡೆಯ ವಿರುದ್ಧ ಸತತ 27 ದಿನ ಯುದ್ಧ ಮಾಡಿ ವೀರಮರಣ ಅಪ್ಪುತ್ತಾನೆ. ಅದೂ ಕೂಡಾ ಮೋಸದಿಂದ. ಮರಾಠ ಸೈನಿಕನೊಬ್ಬ ಬೆನ್ನಿಗೆ ಕತಿ ಇರಿದು ಸಾಯುತ್ತಾನೆ. ಪತಿಯ ಮರಣದ ನಂತರವೂ ಸುಮಾರು 40 ವರ್ಷಗಳ ಕಾಲ ಬೆಳವಡಿ ಸಂಸ್ಥಾನವನ್ನು ಮಲ್ಲಮ್ಮ ಅವರೇ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ದಾಖಲೆ ಮಲ್ಲಮ್ಮನವರದ್ದು. ಕನ್ನಡದವರಂತೂ ಮರೆತು ಹೋಗಿರುವ ಬೆಳವಡಿ ಮಲ್ಲಮ್ಮನ ಇತಿಹಾಸ ಈ ರೀತಿಯಲ್ಲಾದರೂ ಪರದೆ ಮೇಲೆ ಮೂಡುತ್ತಿದೆಯಲ್ಲ.. ಅದೇ ಸಂತಸದ ವಿಷಯ.



