ಬಿಡದಿ ಟೌನ್ ಶಿಪ್ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಠ ಹಿಡಿದಂತೆ ತೋರುತ್ತಿದೆ. ಯಾವುದೇ ಕಾರಣಕ್ಕೂ ಟೌನ್ ಶಿಪ್ ಯೋಜನೆಯಿಂದ ಹಿಂದೆ ಸರಿಯುತ್ತಿಲ್ಲ. ಸಾವಿರಾರು ರೈತರು ವಿರೋಧ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳೂ ಧ್ವನಿ ಎತ್ತಿವೆ. ಆದರೆ, ಡೋಂಟ್ ಕೇರ್ ಎಂದುಕೊಂಡು ಮುಂದುವರೆದಿರುವ ರಾಜ್ಯ ಸರ್ಕಾರ ಆರಂಭದ ಹಂತದಲ್ಲಿ 500 ಎಕರೆ ಭೂಮಿ ವಶಕ್ಕೆ ನೋಟಿಫಿಕೇಷನ್ ಕೂಡಾ ಹೊರಡಿಸಿದೆ. 500 ಎಂದರೆ ಐನೂರು ಅಲ್ಲ. ಒಂದು ಎಕರೆ ಕಡಿಮೆ, 499 ಎಕರೆಗೆ ನೋಟಿಫಿಕೇಷನ್ ಆಗಿದೆ. 3 ಹಳ್ಳಿಗಳ 499 ಎಕರೆ ಭೂಮಿಯ ನೋಟಿಫಿಕೇಷನ್, ಮೊದಲ ಹಂತ ಅಷ್ಟೇ. ರೈತರ ಮುಂದೆ ಸರ್ಕಾರಕ್ಕೆ ಭೂಮಿ ಕೊಡುವುದು ಬಿಟ್ಟರೆ ಬೇರೆ ಆಯ್ಕೆ ಉಳಿದಿಲ್ಲ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕು, ಹಾರೋಹಳ್ಳಿ ತಾಲೂಕಿನ 3 ಹಳ್ಳಿಗಳ 500 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ನೀಡುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಬಿಡದಿ ಟೌನ್ ಶಿಪ್ ನಿರ್ಮಾಣ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ. ಶಿವಕುಮಾರ್ ಅವರ ಪ್ರಕಾರ ಬಿಡದಿ ಸಮೀಪ ಕೃಷಿಯೇ ನಡೆಯುತ್ತಿಲ್ಲ. ಪ್ರತಿಭಟನೆ ಮಾಡುತ್ತಿರುವ ರೈತರು ರೈತರೇ ಅಲ್ಲ. ಆದರೆ ಬಿಡದಿಯಲ್ಲಿರುವ ರೈತರು, ಹೋರಾಟಗಾರರು ಬಂದು ಜಮೀನು ನೋಡಿ ಎಂದು ಚಾಲೆಂಜ್ ಹಾಕುತ್ತಿದ್ದಾರೆ. ಆದರೆ, ವಿರೋಧಗಳೆಲ್ಲ ಲೆಕ್ಕಕ್ಕೆ ಬಂದಿಲ್ಲ. ಈಗ 3 ಹಳ್ಳಿಗಳ 500 ಎಕರೆ ಜಮೀನು ಸರ್ಕಾರದ ವಶಕ್ಕೆ ಎಂದು ಅಧಿಸೂಚನೆ ಬಂದಾಗಿದೆ. ಇದು ಮೊದಲ ಹಂತ.
ಬಿಡದಿ ನಗರ ಭಾರತದ ಮೊದಲ ಎಐ ಸಿಟಿ ಎಂಬ ಕಲ್ಪನೆಯೊಂದಿಗೆ ನಿರ್ಮಾಣವಾಗುತ್ತಿದ್ದು, ಒಟ್ಟು 7,481 ಎಕರೆ ಭೂಮಿಯಲ್ಲಿ ಟೌನ್ ಶಿಪ್ ತಲೆ ಎತ್ತಲಿದೆ. ಒಟ್ಟು 20 ಸಾವಿರ ಕೋಟಿಯ ದೊಡ್ ಪ್ರಾಜೆಕ್ಟ್. 9 ಹಳ್ಳಿಗಳು ಸರ್ಕಾರದ ವಶವಾಗಲಿದೆ. ಅವುಗಳಲ್ಲಿನ 3 ಹಳ್ಳಿಗಳ 500 ಎಕರೆ ಭೂಮಿಯ ಕುರಿತು ನೋಟಿಫಿಕೇಷನ್ ಹೊರಬಿದ್ದಿದೆ.
ಬಿಡದಿ ಹೋಬಳಿಯಲ್ಲಿ ಬರುವ ಕೆಂಪಯ್ಯನ ಪಾಳ್ಯ, ಮಾದನಹಳ್ಳಿ ಹಾಗೂ ಹಾರೋಹಳ್ಳಿ ವ್ಯಾಪ್ತಿಯಲ್ಲಿ ಬರುವ ವಡೇರಹಳ್ಳಿಯ ಒಟ್ಟು 499 ಎಕರೆ ಭೂಮಿ ನೋಟಿಫಿಕೇಷನ್ ಆಗಿದೆ. ನೋಟಿಫಿಕೇಷನ್ ಪ್ರಕಾರ ಕೆಂಪಯ್ಯನ ಪಾಳ್ಯದ 367 ಎಕರೆ, ಮಾದನಹಳ್ಳಿಯ 70 ಎಕರೆ ಹಾಗೂ ವಡೇರಹಳ್ಳಿಯ 61 ಎಕರೆ ಭೂಮಿ ವಶಕ್ಕೆ ಅಧಿಸೂಚನೆ ಮಾಡಲಾಗಿದೆ.
2025ರ ಫೆಬ್ರವರಿಯಲ್ಲಿ ಗ್ರೇಟ್ ಬೆಂಗಳೂರು ಪ್ರಾಧಿಕಾರಕ್ಕೆ ಅನುಮೋದನೆ ಪಡೆದ ನಂತರ ಮಾರ್ಚ್ ತಿಂಗಳಲ್ಲೇ ಬಿಡದಿ ಟೌನ್ ಶಿಪ್ ಯೋಜನೆಗೆ ಅಧಿಸೂಚನೆ ಹೊರಬಿದ್ದಿತ್ತು. ಅಂದಹಾಗೆ 3 ಹಳ್ಳಿಗಳಲ್ಲಿ ಸರ್ಕಾರ ಹೊರಡಿಸಿರುವ 499 ಎಕರೆ ಭೂಮಿ ವಶದ ಅಧಿಸೂಚನೆ ಅಂತಿಮವೇನೂ ಅಲ್ಲ. ಇದು ಕೇವಲ ಆರಂಭ.
ರಾಮನಗರ ಹಾಗೂ ಹಾರೋಹಳ್ಳಿಯ ಭೈರಮಂಗಲ, ಬನ್ನಿಗಿರಿ, ಹೊಸೂರು, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನ ಪಾಳ್ಯ, ಕೆಜಿ ಗೊಲ್ಲರ ಪಾಳ್ಯ, ಮಾದಹನಹಳ್ಳಿ, ಅರಳುಸಂದ್ರ.. ಹೀಗೆ ಒಟ್ಟು ಹಳ್ಳಿಗಳು ಬಿಡದಿ ಟೌನ್ ಶಿಪ್ ಒಳಕ್ಕೆ ಸೇರಲಿವೆ. ನೋಟಿಫಿಕೇಷನ್ ಪ್ರಕಾರ ರೈತರು ಸರ್ಕಾರಕ್ಕೆ ಭೂಮಿ ಕೊಡಬೇಕು. ಎಕರೆಗೆ 2.07 ಕೋಟಿಯಿಂದ 2.5 ಕೋಟಿಯವರೆಗೆ ಹಣ ಕೊಡುತ್ತೆ. ಹಣ ಪಡೆದುಕೊಂಡರೆ ಭೂಮಿ ನಿಮ್ಮದಲ್ಲ. ಇಲ್ಲದೇ ಹೋದರೆ ಅಭಿವೃದ್ಧಿಯಾದ ಭೂಮಿಯಲ್ಲಿ ಶೇ.50ರಷ್ಟು ಭೂಮಿಯಲ್ಲಿ ಶೇರ್ ಕೊಡ್ತಾರೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ರೈತರ ಮುಂದೆ ಸರ್ಕಾರಕ್ಕೆ ಭೂಮಿ ಕೊಡುವುದು ಬಿಟ್ಟರೆ ಬೇರೆ ಆಯ್ಕೆ ಉಳಿದಿಲ್ಲ.



