ಬೆಂಗಳೂರಿನ ಕಾಡುಗೋಡಿಯಲ್ಲಿ ಇತ್ತೀಚೆಗೆ 6 ವರ್ಷದ ಪುಟ್ಟ ಮಗು ವೆನ್ನೆಲಾ (ವೆನ್ನಿಲಾ) ಕೊಲೆ ಆಗಿತ್ತು. ಆರಂಭದಲ್ಲಿ ಇದು ಅಸಹಜ ಸಾವು ಎಂದೇ ಅಂದುಕೊಂಡಿದ್ದರು. ಆದರೆ ತಂದೆಯ ಅನುಮಾನದಿಂದ ಹೊರಬಂದ ಪ್ರಕರಣದಲ್ಲಿ ತಾಯಿಯೇ ಮಗುವನ್ನು ಕೊಂದ ಆರೋಪ ಎದುರಿಸುತ್ತಿದ್ದಾಳೆ. ಪೊಲೀಸರ ತನಿಖೆಯಲ್ಲಿ ಬಗೆದಷ್ಟೂ ವಿಚಿತ್ರ ಮಾಹಿತಿಗಳು ಹೊರಬರುತ್ತಿವೆ. ಪೋಸ್ಟ್ ಮಾರ್ಟಂನಿಂದ ಹೊರಬಂದ ಕೇಸಿನಲ್ಲಿ ಈಗ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಮೋಹನ್ ಇಬ್ಬರೂ ಅರೆಸ್ಟ್ ಆಗಿದ್ದಾರೆ. ಈ ವೇಳೆ ಮಗುವನ್ನು ಕೊಂದ ನಂತರ.. ಆ ಮಗುವಿನ ಮೃತದೇಹಕ್ಕೇ ಸ್ನಾನ ಮಾಡಿಸಿ ಡ್ರೆಸ್ ಮಾಡಿದ್ದ ಪ್ರಿಯಾಂಕಾ, ಪ್ರಿಯಕರನ ಜೊತೆ ಬರ್ತ್ ಡೇ ಸೆಲಬ್ರೇಟ್ ಮಾಡಿದ್ದಳಂತೆ. ಸಾಮಾನ್ಯವಾಗಿ ಅಸಹಜ ಸಾವುಗಳಾದಾಗ ಪೊಲೀಸರು UDR ದಾಖಲಿಸಿಕೊಳ್ತಾರೆ. UDR ಎಂದರೆ ಅನ್-ನ್ಯಾಚುರಲ್-ಡೆತ್ ಎಂದರ್ಥ. ಆದರೆ ಯುಡಿಆರ್ ದಾಖಲಾಗುತ್ತಿದ್ದಂತೆಯೇ ಅರ್ಚನಾ ಮತ್ತು ಮೋಹನ್ ಇಬ್ಬರೂ ನಿರೀಕ್ಷಣಾ ಜಾಮೀನು ಪಡೆಯೋಕೆ ಅರ್ಜಿ ಹಾಕಿದ್ದರಂತೆ.
ವಿಚಿತ್ರ ಎಂದರೆ ಪ್ರಿಯಾಂಕಾ ವೃತ್ತಿಯಲ್ಲಿ ಲಾಯರ್ ಆಗಿದ್ದರು. ಅಡ್ವೋಕೇಟ್ ಆಗಿ ಕೆಲಸ ಮಾಡುತ್ತಿರಲಿಲ್ಲವಾದರೂ ಲಾಯರ್ ಓದಿದ್ದರಂತೆ. ಆಕೆಯ ಪ್ರಿಯಕರ ಮೋಹನ್ ರಿಯಲ್ ಎಸ್ಟೇಟ್ ಏಜೆಂಟ್. ಉದ್ಯಮಿಯಲ್ಲ, ಏಜೆಂಟ್. ತನಿಖೆಯಲ್ಲಿ ಗೊತ್ತಾಗಿದ್ದೇನೆಂದರೆ ಮೋಹನ್ ಮತ್ತು ಪ್ರಿಯಾಂಕಾ ಪಿಯುಸಿಯಿಂದ ಲವ್ ಮಾಡ್ತಾ ಇದ್ರು. ಆದರೆ ಪ್ರಿಯಾಂಕಾ ಪ್ರವೀಣ್ ಎಂಬುವವರ ಜೊತೆ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಎಲ್ಲವೂ ಅನ್ಯೋನ್ಯವಾಗಿತ್ತು. ದಂಪತಿಗೆ 17 ವರ್ಷದ ಹಾಗೂ 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಪ್ರಿಯಾಂಕಾಳಿಗೆ ತನ್ನ ಕಾಲೇಜು ಗೆಳೆಯ ಮೋಹನ್ ಸಿಕ್ಕಿದ್ದ. ಇಬ್ಬರ ನಡುವೆ ಹೆಚ್ಚು ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಅದಕ್ಕಿಂತ ವಿಚಿತ್ರ ಎಂದರೆ ಇದು ಗಂಡ ಪ್ರವೀಣ್‌ಗೆ ಗೊತ್ತೇ ಇರಲಿಲ್ಲ. ಹೆಂಡತಿ ಡಿವೋರ್ಸ್ ಪೇಪರ್ ಮುಂದಿಟ್ಟು ಸೈನ್ ಮಾಡು ಎಂದಾಗಲೇ ಆತನಿಗೆ ಗೊತ್ತಾಯ್ತಂತೆ. ಇದಾದ ಬಳಿಕ ದಂಪತಿ ಜೊತೆಗೆ ಮೃತಪಟ್ಟಿರುವ ಮಗುವಿನೊಂದಿಗೆ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಮಾ.24 ರಂದು ಮಗು ಏಕಾಏಕಿ ಮೃತಪಟ್ಟಿದೆ ಅಂತ ನಂಬಿಸಿದ್ದಾಳೆ. ಏನಾಯ್ತು ಎಂದು ಕೇಳಿದಾಗ ಮಗುವಿಗೆ ಬಿರಿಯಾನಿ ತಿನ್ನಲು ಕೊಟ್ಟಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ ಎಂದಿದ್ದಾಳೆ. ಮತ್ತೊಮ್ಮೆ ಐಸ್‌ಕ್ರೀಮ್ ಕೊಟ್ಟು ಎಸಿ ಹಾಕಿ ಕಾರಿನಲ್ಲಿ ಮಲಗಿಸಿದ್ದೆ, ಆದರೆ ಮನೆಗೆ ಬಂದು ನೋಡಿದಾಗ ಮಗು ಸತ್ತುಹೋಗಿತ್ತು ಎಂದು ಕಥೆ ಹೆಣೆದಿದ್ದಾಳೆ.
ವಾಸ್ತವವಾಗಿ ಏನಾಯ್ತು..?
ಇಂದಿರಾನಗರದ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಮಗುವಿಗೆ ಐಸ್‌ಕ್ರೀಂ ಕೊಡಿಸಲಾಗಿತ್ತು. ಮಗು ಮತ್ತಷ್ಟು ಐಸ್‌ಕ್ರೀಂ ಬೇಕೆಂದು ಹಠ ಹಿಡಿದು ಕಾರಿನಲ್ಲಿ ಚೆಲ್ಲಿದ್ದಕ್ಕೆ ಸಿಟ್ಟಾದ ಪ್ರಿಯಕರ ಮೋಹನ್ ಮಗುವಿನ ಹೊಟ್ಟೆಗೆ ಬಲವಾಗಿ ಒದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಮಗುವಿನ ಶವಕ್ಕೇ ಸ್ನಾನ ಮಾಡಿಸಿದ ಪ್ರಿಯಾಂಕಾ, ಮಗುವಿಗೆ ಡ್ರೆಸ್ ಕೂಡಾ ಮಾಡಿದ್ದಾಳೆ. ನಂತರ ಅದೇ ಮಗುವನ್ನು ಕಾರಿನಲ್ಲಿ ಕರೆತಂದಿದ್ದಾರೆ. ಮಗು ಶವವಾಗಿ ಬಿದ್ದಿದ್ದರೂ, ಅದೇ ದಿನ ರಾತ್ರಿ ತಾಯಿ ಪ್ರಿಯಾಂಕಾ ಹಾಗೂ ಪ್ರಿಯಕರ ಕೋಲಾರದ ಕೆಫೆಯೊಂದರಲ್ಲಿ ಅತ್ಯಂತ ಸಡಗರದಿಂದ ಪ್ರಿಯಾಂಕಾಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ತಂದೆಯ ಅನುಮಾನ : ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡ ತಂದೆ ಪ್ರವೀಣ್, ಮರಣೋತ್ತರ ಪರೀಕ್ಷೆಯ ವರದಿಯನ್ನು ಲಂಡನ್‌ನಲ್ಲಿರುವ ತನ್ನ ಅಕ್ಕನಿಗೆ ಕಳಿಸಿಕೊಟ್ಟಿದ್ದಾರೆ. ಅಕ್ಕ ಇದು ಉಸಿರುಗಟ್ಟಿಸಿ ಮಾಡಿದ ಕೊಲೆ ಎಂದು ಅವರು ಸುಳಿವು ನೀಡಿದ್ದಾರೆ. ತಕ್ಷಣ ಸೀರಿಯಸ್ ಆದ ಪ್ರವೀಣ್, ಮಗಳ ಸಾವಿನ ತನಿಖೆಗೆ ಬೆನ್ನು ಹತ್ತಿದ್ದಾರೆ. ಆರಂಭದ ತನಿಖೆಯಲ್ಲಿ ಮಗು ತಿಂದಿರುವ ಐಸ್ ಕ್ರೀಂನಲ್ಲಿ ಯಾವುದೇ ವಿಷದ ಅಂಶ ಇರಲಿಲ್ಲ ಎಂದು ಬಯಲಾಗಿದೆ. ನಂತರ ಮತ್ತೆ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಆ ರಿಪೋರ್ಟ್ ಏಪ್ರಿಲ್ ತಿಂಗಳ ಅಂತ್ಯಕ್ಕೆ ಬಂದಿದೆ. ಒಟ್ಟಿನಲ್ಲಿ ತಾಯಿ ಮತ್ತು ಆಕೆಯ ಪ್ರಿಯಕರ ಇಬ್ಬರೂ ಈಗ ಜೈಲು ಸೇರಿದ್ದಾರೆ.
ಈಗ ಏನಾಗಿದೆ..?
ಪ್ರಕರಣದ ಮುಖ್ಯ ಆರೋಪಿ ಮೋಹನ್‌ನನ್ನು ಪೊಲೀಸರು ಮೊದಲೇ ಬಂಧಿಸಿದ್ದರು. ಬೆಂಗಳೂರು, ಮೈಸೂರು ಹಾಗೂ ಹಾಸನದಲ್ಲಿ ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಾಳನ್ನು ಜೂನ್ 11 ರಂದು ಸಕಲೇಶಪುರದಲ್ಲಿ ಬಂಧಿಸಲಾಗಿದೆ. ನ್ಯಾಯಾಲಯವು ಆರೋಪಿ ಪ್ರಿಯಾಂಕಾಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪೋಸ್ಟ್‌ಮಾರ್ಟಂ ವರದಿ ಬಂದಿದ್ದರೂ ಪ್ರಕರಣ ದಾಖಲಿಸಲು 3 ತಿಂಗಳು ವಿಳಂಬ ಮಾಡಿದ ಕಾಡುಗೋಡಿ ಪೊಲೀಸ್ ಅಧಿಕಾರಿಗಳ (PSI ನಿಂಗರಾಜು ಮತ್ತು ಇತರರು) ವಿರುದ್ಧ ಮಕ್ಕಳ ರಕ್ಷಣಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.



