ಕ್ರೈಂ ಹೊಸದಲ್ಲ. ಆದರೆ ಅವುಗಳನ್ನ ಪೊಲೀಸರು ಬೆನ್ನು ಹತ್ತುವುದು ಇರುತ್ತಲ್ಲ.. ಅದು ಯಾವಾಗಲೂ ಥ್ರಿಲ್ ಕೊಡುತ್ತದೆ. ಇಲ್ಲೊಬ್ಬ ಹಂತಕನನ್ನು ಹಪ್ಪಳದಿಂದ ಬೇಟೆಯಾಡಿ ಅರೆಸ್ಟ್ ಮಾಡಲಾಗಿದೆ. ಇದು ಸಿನಿಮಾ ಸ್ಟೋರಿ ಅಲ್ಲ. ಸತ್ಯಕಥೆ. ಹಪ್ಪಳದಿಂದ ಕೊಲೆಗಾರನನ್ನು ಹಿಡಿದಿರುವುದು ಅನಂತಪುರಂ ಪೊಲೀಸರು. ಹಂತಕರು ಬಳ್ಳಾರಿಯವರು. ವಿಚಿತ್ರ ಎಂದರೆ ಆರೋಪಿಗಳಿಗೆ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಆದರೂ ಕೊಲೆ ಮಾಡಿದ್ದರು.
ಕೊಲೆಯಾದ ವ್ಯಕ್ತಿ: ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ನಿವಾಸಿ, ಗುರುರಾಜು ರಾವ್ (60). ಇವರು ಕಿವುಡು ಮತ್ತು ಮೂಗರಾಗಿದ್ದು (Hearing and Speech Impaired), ಹಪ್ಪಳದ ವ್ಯಾಪಾರ ಮಾಡುತ್ತಿದ್ದರು. ಜೂನ್ 23 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನೆಮಕಲ್ಲು ಗ್ರಾಮದ ನಿರ್ಜನ ಪ್ರದೇಶದಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಕೊಲೆಗಾರರು ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿದ್ದರು. ಸ್ಥಳದಲ್ಲಿ ಯಾವುದೇ ಗುರುತಿನ ಚೀಟಿ ಅಥವಾ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಪೊಲೀಸರಿಗೆ ಕೊಲೆಯಾದ ವ್ಯಕ್ತಿ ಯಾರು, ಎಲ್ಲಿಯವನು ಎಂಬ ಯಾವ ಸುಳಿವು ಸಿಗದೆ ತಲೆನೋವಾಗಿ ಪರಿಣಮಿಸಿತ್ತು. ಇವರು ಗುರುರಾಜ್ ರಾವ್ ಎಂಬುದು ಗೊತ್ತಾಗಿದ್ದೇ ಹಪ್ಪಳದ ಕವರಿನಿಂದ.
ಪೊಲೀಸರು ಅಪರಾಧ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ಅರ್ಧಂಬರ್ಧ ಸುಟ್ಟಿದ್ದ ಕನ್ನಡ ದಿನಪತ್ರಿಕೆ, ಜನಿವಾರ ಮತ್ತು ಮುಖ್ಯವಾಗಿ ಒಂದು ಹಪ್ಪಳದ ಪ್ಯಾಕೆಟ್ ಸಿಕ್ಕಿತು. ಈ ಹಪ್ಪಳದ ಪ್ಯಾಕೆಟ್ ತನಿಖೆಗೆ ಪ್ರಮುಖ ದಾರಿಯಾಯಿತು. ಹಪ್ಪಳದ ಪ್ಯಾಕೆಟ್ ಮೇಲಿದ್ದ ವಿಳಾಸದ ಬೆನ್ನು ಹತ್ತಿದವರಿಗೆ ಚೆನ್ನೈ ಘಟಕ ಸಿಕ್ಕಿತ್ತು. ಚೆನ್ನೈನಲ್ಲಿ ತಯಾರಾಗಿದ್ದ ಆ ಹಪ್ಪಳವನ್ನು ಬಳ್ಳಾರಿಗೆ ಸಪ್ಲೈ ಮಾಡಲಾಗಿತ್ತು ಎಂಬ ವಿಷಯ ಗೊತ್ತಾಗಿತ್ತು. ಹಪ್ಪಳದ ಪ್ಯಾಕೆಟ್ ಮೇಲಿದ್ದ ಬ್ಯಾಚ್ ನಂಬರ್ ಬಳ್ಳಾರಿಯ ಕ್ಲೂ ಕೊಟ್ಟಿತ್ತು. ತಕ್ಷಣ ಪೊಲೀಸರು ಬೆಳ್ಳಾರಿಯಲ್ಲಿ ವಿಚಾರಣೆ ನಡೆಸಿದಾಗ, ಅಲ್ಲಿನ ಸಂಗನಕಲ್ಲು ನಿವಾಸಿಯಾದ ಗುರುರಾಜ ರಾವ್ (60) ಎಂಬ ಕಿವುಡ ಮತ್ತು ಮೂಗ (Deaf and Mute) ಹಪ್ಪಳ ವ್ಯಾಪಾರಿ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಸ್ಥಳದಲ್ಲಿ ಸಿಕ್ಕ ಜನಿವಾರ ಮತ್ತು ಕನ್ನಡ ಪತ್ರಿಕೆ ಕೂಡ ಎಲ್ಲವೂ ಮ್ಯಾಚ್ ಆದವು.
ಗುರುರಾಜ ರಾವ್ ಕೊಲೆಯಾದ ನಂತರವೂ ಅವರ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವುದು ಪತ್ತೆಯಾಯಿತು. ಎಟಿಎಂ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಲ್ಲಿ ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಸಿಸಿಟಿವಿ ಕ್ಯಾಮೆರಾ ಮುಂದೆ ಆಂಗಿಕ ಭಾಷೆ (Sign Language) ಬಳಸಿ ಸನ್ನೆ ಮಾಡುತ್ತಿರುವುದು ಕಂಡುಬಂತು.
ಸುಳಿವಿನ ಆಧಾರದ ಮೇಲೆ ಪೊಲೀಸರು ಜುಲೈ 8 ರಂದು ಬಳ್ಳಾರಿಯ ಬಸವರಾಜು (31) ಮತ್ತು ಕೊಟ್ರೇಶ್ (36) ಎಂಬ ಇಬ್ಬರನ್ನು ಬಂಧಿಸಿದರು. ಸ್ವಾರಸ್ಯ ಎಂದರೆ ಆರೋಪಿಗಳಿಬ್ಬರೂ ಕೂಡ ಕಿವುಡ ಮತ್ತು ಮೂಗರಾಗಿದ್ದರು ಹಾಗೂ ಗುರುರಾಜ್ ರಾವ್‌ನ ಆಪ್ತ ಸ್ನೇಹಿತರೇ ಆಗಿದ್ದರು. ಆರೋಪಿಗಳು ಕಿವುಡ ಮತ್ತು ಮೂಕರಾಗಿದ್ದ ಕಾರಣ ಪೊಲೀಸರು ಸೈನ್ ಲಾಂಗ್ವೇಜ್ ತಜ್ಞರನ್ನು ಕರೆಸಿ ಸತ್ಯ ಹೊರತರಲಾಯಿತು.
ಕೊಲೆಗಾರರು ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟರೂ, ಅವರು ತಂದಿದ್ದ ಒಂದೇ ಒಂದು ಹಪ್ಪಳದ ಪ್ಯಾಕೆಟ್ ಇಡೀ ಕೊಲೆ ರಹಸ್ಯವನ್ನು ಬಯಲಿಗೆಳೆಯಿತು. ಅನಂತಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪಿ. ಜಗದೀಶ್ ನೇತೃತ್ವದ ತಂಡ ಈ ಅದ್ಭುತ ವೈಜ್ಞಾನಿಕ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಗುರುರಾಜ ರಾವ್ ಅವರು ಹಪ್ಪಳದ ವ್ಯಾಪಾರ ಮತ್ತು ದೇವಸ್ಥಾನದ ಕೆಲಸಗಳಿಂದ ಸಾಕಷ್ಟು ಹಣ ಸಂಪಾದಿಸಿ ಜೇಬಿನಲ್ಲಿಟ್ಟುಕೊಂಡು ಓಡಾಡ್ತಾ ಇದ್ರಂತೆ. ಆ ದುಡ್ಡಿಗೆ ಆಸೆ ಬಿದ್ದ ಹಂತಕರು ಗುರುರಾಜ ಅವರನ್ನು ಆಂಧ್ರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮದ್ಯ ಕುಡಿಸಿ, ಕಣ್ಣಿಗೆ ಖಾರದ ಪುಡಿ ಚಲ್ಲಿ, ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅವರ ಬೈಕ್, ಮೊಬೈಲ್ ಮತ್ತು ಎಟಿಎಂ ಕಾರ್ಡ್ ದೋಚಿ, ಶವವನ್ನು ಸುಟ್ಟು ಹಾಕಿದ್ದರು.



