ಮುಖ ಮತ್ತು ಚರ್ಮವನ್ನು ಬೆಳ್ಳಗೆ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಫೇಸ್ ಕ್ರೀಮ್‌ಗಳ ಜಾಹೀರಾತುಗಳು ಮತ್ತು ಉತ್ಪನ್ನಗಳನ್ನ ನಂಬಿಕೊಂಡವರಿಗೆ ಶಾಕಿಂಗ್ ನ್ಯೂಸ್. ಅಂತಾದ್ದೊಂದು ಭರವಸೆ ನಂಬಿದ್ದ ಒಂದು ಫೇಸ್ ಕ್ರೀಂನ್ನು ಬಳಸಿದವರಲ್ಲಿ 18 ಜನರ ಕಿಡ್ನಿಗೆ ಡ್ಯಾಮೇಜ್ ಆಗಿದೆ. ‘ಫೇಸ್ ಫ್ರೆಶ್ ಗೋಲ್ಡ್’ (Face Fresh Gold) ಮತ್ತು ‘ಗೊರೀ ಗೋಲ್ಡ್’ (Goree Gold / Goree Beauty Cream) ಕ್ರೀಮ್‌ಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದು ಡೇಂಜರ್ ಡೇಂಜರ್.
ಸಾಮಾನ್ಯವಾಗಿ ಇಂತಹ ಜಾಹೀರಾತು ಕೊಡೋ ಮಂದಿ ಮುಖ ಮತ್ತು ಚರ್ಮವನ್ನು ಬೆಳ್ಳಗೆ ಮಾಡುತ್ತೇವೆ ಎಂದು ಹೇಳಿಕೊಂಡೇ ಪ್ರಚಾರ ಮಾಡ್ತಾರೆ. ಆದರೆ ಜಗತ್ತಿನಲ್ಲಿ ಹುಟ್ಟಿದಾಗ ಬಂದ ಚರ್ಮದ ಬಣ್ಣವನ್ನು ಬದಲಾಯಿಸುವ ಮ್ಯಾಜಿಕ್ ಯಾವ ಕ್ರೀಂಗೂ ಇಲ್ಲ. ಯಾವುದೇ ಕ್ರೀಮ್ ನೈಸರ್ಗಿಕ ಚರ್ಮದ ಬಣ್ಣವನ್ನು ಶಾಶ್ವತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಈ ಫೇಸ್ ಫ್ರೆಶ್ ಗೋಲ್ಡ್ ಮತ್ತು ಗೊರೀ ಗೋಲ್ಡ್ ಕ್ರೀಂ ವಿಷಯದಲ್ಲಾಗಿದ್ದೂ ಇದೇ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಲ್ಲಿ, ಈ ಕ್ರೀಮ್‌ಗಳಲ್ಲಿ ಅತ್ಯಂತ ವಿಷಕಾರಿ ರಾಸಾಯನಿಕಗಳಾದ ಮರ್ಕ್ಯುರಿ (ಪಾದರಸ) ಮತ್ತು ಸೀಸ (Lead) ಕಾನೂನುಬದ್ಧ ಮಿತಿಗಿಂತ ನೂರಾರು ಪಟ್ಟು ಹೆಚ್ಚಿರುವುದು ಪತ್ತೆಯಾಯ್ತು. ಈ ಉತ್ಪನ್ನಗಳನ್ನು “ಪ್ರಮಾಣಿತ ಗುಣಮಟ್ಟ ಹೊಂದಿಲ್ಲದ” (Not of Standard Quality) ಉತ್ಪನ್ನಗಳೆಂದು ಘೋಷಿಸಿ, ಇ-ಕಾಮರ್ಸ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಯ್ತು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇವಲ ಈ ‘ಗೊರೀ ಕ್ರೀಮ್’ ಬಳಸಿದ ಕಾರಣದಿಂದಲೇ ಸುಮಾರು 18 ಮಹಿಳೆಯರು ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿದ್ದಾರೆ. ಕ್ರೀಮ್‌ನಲ್ಲಿರುವ ಮರ್ಕ್ಯುರಿ ಚರ್ಮದ ಮೂಲಕ ದೇಹ ಹೊಕ್ಕು ಕಿಡ್ನಿಯನ್ನು ಹಾನಿಗೊಳಿಸುತ್ತದೆ. ಈ ಕ್ರೀಮ್‌ಗಳನ್ನು ಕೇವಲ ಭಾರತದಲ್ಲಷ್ಟೇ ಅಲ್ಲದೆ ನ್ಯೂಜಿಲ್ಯಾಂಡ್‌ನ ‘ಮೆಡ್‌ಸೇಫ್’ (Medsafe) ಹಾಗೂ ಫಿಲಿಪೈನ್ಸ್ ಸೇರಿದಂತೆ ಕೆಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಈ ಕ್ರೀಮ್‌ಗಳ ಬಾಕ್ಸ್ ಮೇಲೆ ಯಾವುದೇ ಅಧಿಕೃತ ತಯಾರಕರ ವಿಳಾಸ, ಬ್ಯಾಚ್ ನಂಬರ್, ಮ್ಯಾನುಫ್ಯಾಕ್ಚರಿಂಗ್ ದಿನಾಂಕ ಅಥವಾ ಎಕ್ಸ್‌ಪೈರಿ ದಿನಾಂಕಗಳನ್ನು ಮುದ್ರಿಸಿರುವುದಿಲ್ಲ.
ಬಳಸಿದ್ದೇವೆ.. ಕ್ರೀಂ ಇನ್ನೂ ಇದೆ.. ಏನ್ ಮಾಡೋದು..?
ನಿಮ್ಮ ಬಳಿ ಈ ಕ್ರೀಮ್‌ಗಳಿದ್ದರೆ ತಕ್ಷಣವೇ ಅವುಗಳನ್ನು ಕಸದ ಬುಟ್ಟಿಗೆ ಹಾಕಿ. ಒಂದು ವೇಳೆ ನೀವು ಇವುಗಳನ್ನು ದೀರ್ಘಕಾಲದಿಂದ ಬಳಸುತ್ತಿದ್ದು, ಮುಖ ಕಪ್ಪಾಗುವುದು, ಕಿಡ್ನಿ ಸಮಸ್ಯೆ ಅಥವಾ ಮೂತ್ರದ ಸೋಂಕಿನ ಲಕ್ಷಣಗಳಿದ್ದರೆ ತಕ್ಷಣ ಚರ್ಮರೋಗ ತಜ್ಞರನ್ನು (Dermatologist) ಅಥವಾ ಮೂತ್ರಪಿಂಡ ತಜ್ಞರನ್ನು (Nephrologist) ಭೇಟಿಯಾಗಿ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಇತರೆ ಆನ್‌ಲೈನ್ ಆಪ್‌ಗಳಲ್ಲಿ ಇವು ಅತ್ಯಂತ ಸುಲಭವಾಗಿ ಸಿಗುತ್ತವೆ, ಆದರೆ ಇವು ಕಳ್ಳಮಾರ್ಗದ ಮೂಲಕ ಮಾರಾಟವಾಗುವ ನಕಲಿ ಹಾಗೂ ನಿಷೇಧಿತ ಉತ್ಪನ್ನಗಳಾಗಿವೆ.
ನಿಮ್ಮ ಚರ್ಮದ ರಕ್ಷಣೆಗಾಗಿ ಮತ್ತು ಸುರಕ್ಷಿತವಾಗಿ ಮುಖದ ಕಾಂತಿ ಹೆಚ್ಚಿಸಲು ಯಾವುದೇ ಪರ್ಯಾಯ ನೈಸರ್ಗಿಕ ವಿಧಾನಗಳು ಅಥವಾ ವೈದ್ಯರು ಶಿಫಾರಸು ಮಾಡುವ ಸುರಕ್ಷಿತ ಸ್ಕಿನ್‌ಕೇರ್ ಪದಾರ್ಥಗಳನ್ನು ಫಾಲೋ ಮಾಡಿ.



