ಬೆಂಗಳೂರಿನ ಹೆಮ್ಮೆಯ ಸಾರ್ವಜನಿಕ ವಲಯದ ಉದ್ದಿಮೆಯಾದ ಹೆಚ್‌ಎಂಟಿ (Hindustan Machine Tools) ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು (Revival Plan) ಪ್ರಸ್ತುತ ತೀವ್ರ ಪ್ರಯತ್ನಗಳು ಮತ್ತು ರಾಜಕೀಯ ಹೋರಾಟಗಳು ನಡೆಯುತ್ತಿವೆ. ಈ ಪುನಃಶ್ಚೇತನ ಪ್ರಕ್ರಿಯೆಯು ಕೇಂದ್ರ ಭಾರೀ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಂತಿಮ ಹಂತ ತಲುಪಿದೆ. ಆದರೆ ಅದಕ್ಕೆ ಕಲ್ಲು ಬೀಳುತ್ತಲೇ ಇದೆ. ಹೆಚ್‌ಎಂಟಿ ವಾಚ್‌ಗಳಿಗೆ ಬೇಡಿಕೆ ಮತ್ತೆ ಶುರುವಾಗಿದ್ದು, ಪ್ರತಿದಿನ 9 ರಿಂದ 10 ಸಾವಿರ ವಾಚ್ ಉತ್ಪಾದನೆಗೆ ಆರ್ಡರ್ ಬರುತ್ತಿವೆ. ಆದರೆ ಕೆಲಸ ಮಾಡೋದಕ್ಕೆ ಆಗುತ್ತಿಲ್ಲ.
ಹೆಚ್‌ಎಂಟಿ (HMT) ಸಂಸ್ಥೆಗೆ ಸಾರ್ವಜನಿಕರಿಂದ ವಾಚ್‌ಗಳಿಗಾಗಿ ಆರ್ಡರ್‌ಗಳು ಮತ್ತು ಬೇಡಿಕೆ ಬರುತ್ತಲೇ ಇತ್ತು, ಆದರೆ ಸಂಸ್ಥೆಯು ಆ ಬೇಡಿಕೆಯನ್ನು ಪೂರೈಸಲು ವಿಫಲವಾಗಿತ್ತು. ಹೀಗಾಗಿ 2016ರಲ್ಲಿ ಕಾರ್ಖಾನೆಯನ್ನೇ ಮುಚ್ಚಲಾಯಿತು. ದೊಡ್ಡ ಮಟ್ಟದ ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ್ದ ಸಂಸ್ಥೆಗೆ ಪುನಃಶ್ಚೇತನ ಕೊಡಲು ಪ್ರಧಾನಿ ಮೋದಿ ಮನಸ್ಸು ಮಾಡ್ತಾರೆ. ತೆರೆಯ ಹಿಂದೆ ಒಂದಿಷ್ಟು ಕೆಲಸ ಮಾಡಿದ್ದ ಅಧಿಕಾರಿಗಳ ತಂಡಕ್ಕೆ ನೇತೃತ್ವ ಸಿಕ್ಕೋದು 2024ರಲ್ಲಿ. ಬಿಜೆಪಿ ಜೊತೆ ಸೇರಿ ಕೇಂದ್ರದಲ್ಲಿ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಹೆಗಲಿಗೆ ಹೆಚ್‌ಎಂಟಿ ವಾಚ್ ಕಾರ್ಖಾನೆ ಪುನಃಶ್ಚೇತನದ ಹೊಣೆಗಾರಿಕೆ ಹೊರಿಸುತ್ತಾರೆ ಮೋದಿ. ಅದಾದ ನಂತರ ಶುರುವಾಗಿದ್ದೇ ಹೋರಾಟ.
ಹೆಚ್‌ಎಂಟಿ ವಾಚ್‌ಗಳ ಬೇಡಿಕೆ ಕುಸಿಯೋದಕ್ಕೆ ಕಾರಣವಾಗಿದ್ದು ಕಾಲಕ್ಕೆ ತಕ್ಕಂತೆ ವೇಗವಾಗಿ ಬದಲಾಗದೇ ಹೋಗಿದ್ದು. ಅಚ್ಚರಿಯಾದರೂ ಸತ್ಯ ಏನೆಂದರೆ ಶೆಲ್ ವಾಚ್‌ಗಳು ಬಂದ ವರ್ಷಗಳ ನಂತರವೂ ಹೆಚ್‌ಎಂಟಿ ಕೀ ಕೊಡುವ ವಾಚ್ ಬಿಟ್ಟು, ಬೇರೆ ವಾಚ್ ಉತ್ಪಾದನೆ ಮಾಡ್ತಾ ಇರಲಿಲ್ಲ. ಹೆಚ್‌ಎಂಟಿ ವಾಚ್ ಮಾರುಕಟ್ಟೆಯನ್ನು ಟಾಟಾದವರ ಟೈಟಾನ್ ಆಕ್ರಮಿಸಿಕೊಂಡಿತ್ತು. ಜೊತೆಗೆ ಯಂತ್ರಗಳ ವಿಚಾರದಲ್ಲೂ ಅಷ್ಟೇ. ಟೆಕ್ನಾಲಜಿ ಬದಲಾವಣೆ ಆಗಲಿಲ್ಲ. ಇದರಿಂದಾಗಿ ವಾಚುಗಳ ತಯಾರಿಕೆ ವೆಚ್ಚವೂ ಹೆಚ್ಚಿತ್ತು. ಅದಕ್ಕೆ ಪೈಪೋಟಿ ಕೊಡುತ್ತಿದ್ದ ಟೈಟಾನ್ ಕಡಿಮೆ ವೆಚ್ಚದಲ್ಲಿ ಉತ್ತಮ ದರ್ಜೆಯ ವಾಚ್‌ಗಳನ್ನು ಮಾರುಕಟ್ಟೆಗೆ ಕೊಟ್ಟಿತು. ಕ್ರಮೇಣವಾಗಿ ಹೆಚ್‌ಎಂಟಿ ವಾಚ್, ವಾರ್ಷಿಕ 2,500 ದಿಂದ 3 ಸಾವಿರ ಕೋಟಿ ವಾರ್ಷಿಕ ನಷ್ಟ ಅನುಭವಿಸೋಕೆ ಶುರುವಾಯ್ತು. ಆ ಸಂಸ್ಥೆಗೆ ಚೇತನ ಕೊಡಲು ಮುಂದಾಗಿರುವ ಕುಮಾರಸ್ವಾಮಿ, ಹೋರಾಟ ನಡೆಸ್ತಾನೇ ಇದ್ಧಾರೆ.
ಚ್‌ಎಂಟಿ ಕಾರ್ಖಾನೆಯನ್ನು ಆಧುನೀಕರಿಸಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ರಕ್ಷಣಾ ವಲಯಕ್ಕೆ (Defense Sector) ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ತಯಾರಿಸುವ ಯೋಜನೆಗೆ ಕೈ ಹಾಕಿದರು. ಜೊತೆಗೆ ಬೆಂಗಳೂರಿನ ಹೆಚ್‌ಎಂಟಿ ಘಟಕವು ದಿನಕ್ಕೆ ಸುಮಾರು ೯,೦೦೦ ವಾಚ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ರಷ್ಯಾ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಇದನ್ನು ಮರುಚಾಲನೆಗೊಳಿಸಲು ಯೋಜನೆ ರೂಪಿಸಲಾಯ್ತು. ಈ ವೇಳೆಯಲ್ಲೇ ರಾಜಕೀಯ ಸಂಘರ್ಷ ಶುರುವಾಗಿದ್ದು.
ಬೆಂಗಳೂರಿನ ಜಾಲಹಳ್ಳಿ/ಪೀಣ್ಯ ಭಾಗದಲ್ಲಿರುವ ಹೆಚ್‌ಎಂಟಿ ಸಂಸ್ಥೆಯ ವಶದಲ್ಲಿರುವ 430 ಎಕರೆ ಜಮೀನನ್ನು (ಅಂದಾಜು 15,000 ಕೋಟಿ ರೂ. ಮೌಲ್ಯ) ಹಿಂತಿರುಗಿಸುವಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಇತ್ತೀಚೆಗೆ ಆದೇಶಿಸಿದೆ. ಈ ಜಮೀನು ಮೂಲತಃ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ವಾದಿಸಿದ ರಾಜ್ಯ ಸರ್ಕಾರ, ವಿವಾದವನ್ನು ಸುಪ್ರೀಂಕೋರ್ಟ್ ಹಂತಕ್ಕೆ ಕೊಂಡೊಯ್ದಿದೆ. ಹೆಚ್ಎಂಟಿಗೆ ರಾಜ್ಯ ಅರಣ್ಯ ಇಲಾಖೆ ನೋಟಿಸ್ ನೀಡಿ ಭೂಮಿ ತೆರವು ಮಾಡಲು ಗಡುವು ವಿಧಿಸಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ ʻʻಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗ ಡೆಡ್ ಲೈನ್ ಕೊಟ್ಟು ನೋಟಿಸ್ ನೀಡಿರುವುದು ಕಾನೂನು ಬಾಹಿರ ಮತ್ತು ನ್ಯಾಯಾಂಗ ನಿಂದನೆ. ಅಧಿಕಾರ ವ್ಯಾಪ್ತಿಯನ್ನು ಮೀರಿ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎನ್.ರವೀಂದ್ರ ಕುಮಾರ್ ಆದೇಶ ನೀಡಿರುದೇ ಕಾನೂನು ಉಲ್ಲಂಘನೆ. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿರುವಾಗಲೇ ಈ ರೀತಿ ಅಡ್ಡಿ ಮಾಡುವುದು ದುರುದ್ದೇಶಪೂರ್ವಕʼʼ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ಧಾರೆ.



