ಮನೆಯಲ್ಲಿ ಇದ್ದರೆ ಚಿನ್ನ.. ಚಿಂತೆಯು ಏತಕೆ ಇನ್ನ.. ಎಂಬ ಜಾಹೀರಾತು ನೋಡಿದ್ದೀರಲ್ಲ.. ಇದು ಅದಕ್ಕೆ ಉಲ್ಟಾ. ಇದು ಚಿನ್ನವನ್ನು ಅಡಮಾನ ಇಟ್ಟುಕೊಳ್ಳುವ ಸ್ಕೀಂ ಅಲ್ಲ. ನಿಮ್ಮ ಚಿನ್ನ ಬ್ಯಾಂಕಿನಲ್ಲಿ ಇರುತ್ತದೆ. ಹಾಗೆ ಬ್ಯಾಂಕಿನಲ್ಲಿರುವ ಚಿನ್ನಕ್ಕೆ ನೀವು ತಿಂಗಳೂ ತಿಂಗಳೂ ಬಡ್ಡಿ ಕಟ್ಟಬೇಕಿಲ್ಲ. ಬದಲಿಗೆ ಬ್ಯಾಂಕಿನವರೇ ನಿಮಗೆ ಬಡ್ಡಿ ಕೊಡ್ತಾರೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಲು ಹೊರಟಿರುವ ʻಗೋಲ್ಡ್ ಮಾನಿಟೈಸೇಷನ್ ಸ್ಕೀಂʼನ ಮೂಲ ತತ್ವವೇ ಇದು. ಹಾಗಂತ ಎಲ್ಲರೂ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಬಡ್ಡಿ ತೆಗೆದುಕೊಂಡು ಲಾಭ ಮಾಡಿಕೊಳ್ಳಬಹುದಾ..? ಅದು ಅಷ್ಟು ಸುಲಭ ಇಲ್ಲ.
ಗೋಲ್ಡ್ ಮಾನಿಟೈಸೇಷನ್ ಸ್ಕೀಮ್ (GMS) ಭಾರತ ಸರ್ಕಾರವು ಜಾರಿಗೆ ತಂದಿರುವ ಒಂದು ಯೋಜನೆ. ಇದರ ಮುಖ್ಯ ಉದ್ದೇಶ ಜನರು ತಮ್ಮ ಮನೆಯಲ್ಲಿ ಅಥವಾ ಲಾಕರ್‌ಗಳಲ್ಲಿ ಸುಮ್ಮನೆ ಕೂಡಿಟ್ಟಿರುವ ಚಿನ್ನವನ್ನು ಬ್ಯಾಂಕ್‌ಗಳಲ್ಲಿ Fixed Deposit ರೀತಿ ಠೇವಣಿ ಇಡುವಂತೆ ಮಾಡೋದು. ನೀವು ಠೇವಣಿ ಮಾಡುವ ಚಿನ್ನದ ತೂಕದ ಮೇಲೆ ವಾರ್ಷಿಕ ಸುಮಾರು ಶೇಕಡಾ 2.25 ರಿಂದ 2.50 ರವರೆಗೆ ಬಡ್ಡಿಯನ್ನು ನೀಡುವಂತೆ ಮಾಡೋದು. ಕನಿಷ್ಠ 10 ರಿಂದ 30 ಗ್ರಾಂವರೆಗಿನ ಕಚ್ಚಾ ಚಿನ್ನವನ್ನು (ಗಟ್ಟಿಗಳು, ನಾಣ್ಯಗಳು ಅಥವಾ ಕಲ್ಲುಗಳಿಲ್ಲದ ಆಭರಣಗಳು) ಠೇವಣಿ ಮಾಡಬಹುದು. ಗರಿಷ್ಠ ಮಿತಿಯಿರುವುದಿಲ್ಲ. ಎಷ್ಟು ಬೇಕಾದರೂ ಡೆಪಾಸಿಟ್ ಇಡಬಹುದು. ಆದರೆ ಇಲ್ಲೊಂದು ಸಮಸ್ಯೆ ಇದೆ.
ಒಡವೆಗಳ ರೂಪದಲ್ಲಿ ಇಡುವಂತಿಲ್ಲ. ಕರಗಿಸಿಯೇ ಇಡಬೇಕು..!
ಹೌದು, ನೀವು ಚಿನ್ನವನ್ನು ಒಡವೆ ರೂಪದಲ್ಲೇ ಬ್ಯಾಂಕ್ ಖಾತೆಯಲ್ಲಿ ಇಡಲು ಸಾಧ್ಯವಿಲ್ಲ. ಅದನ್ನು ಕರಗಿಸುವುದು ಕಡ್ಡಾಯವಾಗಿದೆ. ಭರಣಗಳಲ್ಲಿ ತಾಮ್ರ ಅಥವಾ ಇತರ ಲೋಹಗಳು ಮಿಶ್ರಣವಾಗಿರುತ್ತವೆ. ಯೋಜನೆಯಡಿ ಬಡ್ಡಿ ನೀಡಲು ಕೇವಲ ಅಪ್ಪಟ ಚಿನ್ನದ (Pure Gold) ತೂಕವನ್ನು ಮಾತ್ರ ಪರಿಗಣಿಸಲಾಗುತ್ತದೆ. ಒಡವೆಗಳಲ್ಲಿರುವ ಮುತ್ತು, ರತ್ನ ಅಥವಾ ನಕಲಿ ಕಲ್ಲುಗಳನ್ನು ಹೊರತೆಗೆದು, ಕೇವಲ ಚಿನ್ನವನ್ನು ಮಾತ್ರ ಕರಗಿಸಿ ಅದರ ನಿಖರ ತೂಕ ಮತ್ತು ಕ್ಯಾರೆಟ್ (Carat) ಅನ್ನು ನಿರ್ಧರಿಸಲಾಗುತ್ತದೆ. ನೀವು ಒಡವೆಗಳನ್ನು ಸರ್ಕಾರ ಅಂಗೀಕರಿಸಿದ ಸಂಗ್ರಹಣೆ ಮತ್ತು ಶುದ್ಧತೆ ತಪಾಸಣಾ ಕೇಂದ್ರಕ್ಕೆ (CPTC) ನೀಡಬೇಕು. ನಿಮ್ಮ ಕಣ್ಣೆದುರೇ ಒಡವೆಗಳನ್ನು ಕರಗಿಸಿ, ಅದರಲ್ಲಿರುವ ಅಪ್ಪಟ ಚಿನ್ನದ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಆ ಶುದ್ಧ ಚಿನ್ನದ ತೂಕಕ್ಕೆ ಸಮನಾದ “ಚಿನ್ನದ ಪ್ರಮಾಣಪತ್ರ” (Gold Certificate) ಅನ್ನು ಬ್ಯಾಂಕ್ ನಿಮಗೆ ನೀಡುತ್ತದೆ.
ಅವಧಿ ಮುಗಿದ ನಂತರ ನೀವು ಚಿನ್ನವನ್ನು ವಾಪಸ್ ಪಡೆಯುವಾಗ, ಅದು ಚಿನ್ನದ ಬಿಲ್ಲೆ (Bar) ಅಥವಾ ನಾಣ್ಯದ ರೂಪದಲ್ಲಿ ಸಿಗುತ್ತದೆಯೇ ಹೊರತು, ನೀವು ಕೊಟ್ಟಿದ್ದ ಹಳೆಯ ಒಡವೆಯ ರೂಪದಲ್ಲಿ ಸಿಗುವುದಿಲ್ಲ. ನಿಮಗೆ ನಿಮ್ಮ ಹಳೆಯ ಒಡವೆಗಳ ವಿನ್ಯಾಸ ಮುಖ್ಯವಲ್ಲ, ಕೇವಲ ಚಿನ್ನದ ಮೌಲ್ಯ ಮತ್ತು ಬಡ್ಡಿ ಮುಖ್ಯ ಎಂದಾದರೆ ಮಾತ್ರ ಈ ಯೋಜನೆ ಸೂಕ್ತವಾಗಿದೆ.
ಈ ರೀತಿ ಚಿನ್ನವನ್ನು ಬ್ಯಾಂಕಿನಲ್ಲಿ ಇಡುವವರು 1ರಿಂದ 3 ವರ್ಷ, 5ರಿಂದ 7 ವರ್ಷ, 12 ರಿಂದ 15 ರ್ಷ ಚಿನ್ನವನ್ನು ಡೆಪಾಸಿಟ್ ಇಡಬಹುದು. ಬಡ್ಡಿಯನ್ನು ತಿಂಗಳೂ ತಿಂಗಳೂ ತೆಗೆದುಕೊಳ್ಳಬಹುದು. ಮನೆಯಲ್ಲಿ ಚಿನ್ನವನ್ನು ಇಟ್ಟುಕೊಂಡರೆ ಯಾವುದೇ ಹೆಚ್ಚುವರಿ ಲಾಭವಿಲ್ಲ, ಬದಲಿಗೆ ಲಾಕರ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಚಿನ್ನಕ್ಕೆ ಭದ್ರತೆ ಸಿಗುವುದಲ್ಲದೆ, ಬಡ್ಡಿಯೂ ದೊರೆಯುತ್ತದೆ. ನಿಮ್ಮ ಚಿನ್ನವನ್ನು ಬ್ಯಾಂಕಿನ ಸಂಗ್ರಹಣಾ ಕೇಂದ್ರಗಳಿಗೆ ನೀಡಿದಾಗ, ಅದನ್ನು ಕರಗಿಸಿ ಅದರ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ. ನಂತರ ನಿಮ್ಮ ಹೆಸರಿನಲ್ಲಿ ಚಿನ್ನದ ಠೇವಣಿ ಖಾತೆಯನ್ನು ತೆರೆಯಲಾಗುತ್ತದೆ.



