ನೂತನ ಸಿಎಂ ಡಿಕೆ ಶಿವಕುಮಾರ್ (ಒಂದು ತಿಂಗಳು ಕಳೆದ ಮೇಲೂ ನೂತನ ಸಿಎಂ ಎನ್ನುವ ಅಗತ್ಯ ಇದೆಯೇ) ಅವರ ನೂತನ ಮಾಧ್ಯಮ ಕಾರ್ಯದರ್ಶಿಯಾಗಿ ಮೂವರನ್ನು ನೇಮಕ ಮಾಡಲಾಗಿದೆ. ನಂ.1 ಟಿಕೆ ತ್ಯಾಗರಾಜ್. ನಂ.2 ರಾಘವೇಂದ್ರ ಭಟ್. ನಂ.3 ಆರ್. ಜಯಪ್ರಕಾಶ್. ಈ ಮೂವರಲ್ಲಿ ಈಗ ಕಾಂಟ್ರವರ್ಸಿ ಆಗುತ್ತಿರುವುದು ರಾಘವೇಂದ್ರ ಭಟ್ ಅವರ ಆಯ್ಕೆ. ಅದರಲ್ಲೂ ಕಾಂಗ್ರೆಸ್ ಸಿದ್ಧಾಂತ ಪ್ರೇಮಿಗಳು ಹಾಗೂ ರಾಹುಲ್ ಗಾಂಧಿ ಅಭಿಮಾನಿಗಳಂತೂ ಕೆರಳಿ ನಿಂತಿದ್ದಾರೆ.
ರಾಘವೇಂದ್ರ ಭಟ್ ಅವರು ಈ ಹಿಂದೆ ಅಂದರೆ 2021ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು. ರಾಹುಲ್ ಗಾಂಧಿಯವರನ್ನು ‘ಫಟಿಂಗ’, ‘ಅಂಡೆ ಪಿರ್ಕಿ’ ʻಓಡುಗಳ್ಳʼ ಎಂದೆಲ್ಲ ಟೀಕೆ ಮಾಡಿದ್ದರು. ರಾಹುಲ್ ಗಾಂಧಿ ಇಂದಿರಾ ಗಾಂಧಿಯವರ ಮೊಮ್ಮಗ ಎಂದು ಹೇಳಿಕೊಳ್ಳೋದಕ್ಕೆ ಅರ್ಹತೆ ಇದೆಯೇ ಎಂದೆಲ್ಲ ಟೀಕಿಸಿದ್ದರು. ತೀಟೆ, ತರಲೆ ಮಾಡುತ್ತಾ ಸಮಯ ಕಳೆಯುವ ನಾಯಕ ಎಂದಿದ್ದರಷ್ಟೇ ಅಲ್ಲ, ಸಿದ್ದರಾಮಯ್ಯ -ಡಿಕೆ ಶಿವಕುಮಾರ್ ಮಧ್ಯೆ ಭಿನ್ನಮತ ಬಗೆಹರಿಸುವುದಕ್ಕೂ ಮನಸ್ಸು ಮಾಡದ ವ್ಯಕ್ತಿ ಎಂದೆಲ್ಲ ಟೀಕೆ ಮಾಡಿದ್ದರು.
ಹುಲ್ ಗಾಂಧಿ ಮಾತ್ರವಲ್ಲದೆ, ಕರ್ನಾಟಕ ಕಾಂಗ್ರೆಸ್‌ನ ಸ್ಥಳೀಯ ನಾಯಕರ ಕುರಿತಾಗಿಯೂ ಅವರು ಈ ಹಿಂದೆ ಕಟು ಟೀಕೆಗಳನ್ನು ಮಾಡಿದ್ದರು. ಸರ್ಕಾರದ ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆಯೇ, ಅವರು 2021ರಲ್ಲಿ ಬರೆದಿದ್ದ ಹಳೆಯ ಫೇಸ್‌ಬುಕ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಕಾಂಗ್ರೆಸ್ ಬೆಂಬಲಿಗರು ಹಾಗೂ ಸಾರ್ವಜನಿಕರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿ/ಆರೆಸ್ಸೆಸ್ ಪರ ಸಿದ್ಧಾಂತ ಹೊಂದಿರುವ ವ್ಯಕ್ತಿಯನ್ನು ತಮ್ಮ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳಂತೂ ಶುರುವಾಗಿವೆ. ಇನ್ನುಳಿದಂತೆ ಟಿಕೆ ತ್ಯಾಗರಾಜ್ ಮತ್ತು ಜಯಪ್ರಕಾಶ್ ಅವರ ಆಯ್ಕೆಯ ಬಗ್ಗೆ ಯಾವುದೇ ತಕರಾರುಗಳಿಲ್ಲ.
ಟಿಕೆ ತ್ಯಾಗರಾಜ್ (ಮಾಧ್ಯಮ ಕಾರ್ಯದರ್ಶಿ – 1)
ಈ ಹಿಂದೆ ಸಂಯುಕ್ತ ಕರ್ನಾಟಕ, ‘ವಿಜಯ ಕರ್ನಾಟಕ’ (Vijay Karnataka) ಮತ್ತು ‘ಕನ್ನಡ ಪ್ರಭ’ (Kannada Prabha) ಪತ್ರಿಕೆಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡಿದ್ದರು. ಮುಖ್ಯ ವರದಿಗಾರರಾಗಿ (Chief Reporter) ಹಾಗೂ ಹಿರಿಯ ರಾಜಕೀಯ ಅಂಕಣಕಾರರಾಗಿದ್ದರು.
ಆರ್. ಜಯಪ್ರಕಾಶ್ (ಮಾಧ್ಯಮ ಕಾರ್ಯದರ್ಶಿ – 2)
‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ (PTI – Press Trust of India) ದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಿದ ಅನುಭವ ಇದೆ.
ರಾಘವೇಂದ್ರ ಭಟ್ (ಮಾಧ್ಯಮ ಕಾರ್ಯದರ್ಶಿ – 3)
‘ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್’ (MMNL) ಒಡೆತನದ ‘ಉದಯವಾಣಿ’ (Udayavani), ವಿಜಯಕರ್ನಾಟಕ, ವಿಶ್ವವಾಣಿ, ಸಂಜೆ ವಾಣಿ, ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದಾರೆ.



