ಸ್ವಾತಿ ರೆಡ್ಡಿ. ಈ ನಟಿ ಕನ್ನಡದವರೇನಲ್ಲ. ತೆಲುಗಿನವರು. ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಗೆ ಈಗ 39 ವರ್ಷ. ಇದೀಗ ಈಕೆ 2ನೇ ಮದುವೆ ಆಗಿದ್ದಾರೆ. ಮೊದಲನೇ ಪತಿ ಪೈಲಟ್ ಆಗಿದ್ದರು. 2ನೇ ಪತಿ ಸಿನಿಮಾ ಡೈರೆಕ್ಟರ್. ಇಷ್ಟಕ್ಕೂ ಈ ನಟಿಯ 2ನೇ ಮದುವೆ ಸಂಚಲನ ಸೃಷ್ಟಿಸಿದ್ದು ಏಕೆ..? ಸಿನಿಮಾ ರಂಗದಲ್ಲಿ ಇತ್ತೀಚೆಗೆ ಕಾಮನ್ ಆಗಿರುವ ನಟ ನಟಿಯರ 2ನೇ ಮದುವೆ, ಸ್ವಾತಿ ರೆಡ್ಡಿ ವಿಷಯದಲ್ಲಿ ದೊಡ್ಡ ಸುದ್ದಿಯಾಗಿದ್ದು ಏಕೆ..? ಒಂದು ವಿಚಿತ್ರ ಕಥೆಯಂತೂ ಇದೆ.
ಸ್ವಾತಿ ರೆಡ್ಡಿ, ಹುಟ್ಟಿದ್ದು ರಷ್ಯಾದಲ್ಲಿ. ಭಾರತೀಯ ನೌಕಾಪಡೆಯಲ್ಲಿದ್ದವರು. ರಷ್ಯಾದಲ್ಲಿ ಸಬ್ ಮೆರಿನ್ ತರಬೇತುದಾರರಾಗಿದ್ದ ಅವರು ರಷ್ಯನ್ ಯುವತಿಯನ್ನೇ ಮದುವೆಯಾಗಿದ್ದರು. ಅಂತರ್-ರಾಷ್ಟ್ರೀಯ ಮದುವೆಯಾಗಿದ್ದ ಸ್ವಾತಿ ರೆಡ್ಡಿ ಅವರ ಮೂಲ ಹೆಸರು ಸ್ವೆಲ್ಟಾನಾ ರೆಡ್ಡಿ. ಆಮೇಲೆ ಇದು ಸ್ವಾತಿ ರೆಡ್ಡಿ ಆಯ್ತು. ಮದುವೆ ಆಗಿ ಮಗಳು ಹುಟ್ಟಿದ ಮೇಲೆ ಭಾರತಕ್ಕೆ ಬಂದ ಕುಟುಂಬ, ಇಲ್ಲಿಯೇ ನೆಲೆಸಿತ್ತು. ಈ ಸ್ವಾತಿ ರೆಡ್ಡಿ 17ನೇ ವರ್ಷದಲ್ಲಿ ಕಲರ್ಸ್ ಟಿವಿಯಲ್ಲಿ ಒಂದು ಶೋ ನಿರೂಪಣೆ ಮಾಡ್ತಾರೆ. ಅದು ದೊಡ್ಡ ಹಿಟ್ ಆಗುತ್ತದೆ. ಆಗಿನಿಂದ ಸ್ವಾತಿ ರೆಡ್ಡಿ, ಕಲರ್ಸ್ ಸ್ವಾತಿ ಎಂದೇ ಫೇಮಸ್ ಆಗುತ್ತಾರೆ.
2005ರಲ್ಲಿ ತೆಲುಗಿನ ಖ್ಯಾತ ನಟ ನಿರ್ದೇಶಕ ಕೃಷ್ಣವಂಶಿ ಕಣ್ಣಿಗೆ ಬಿದ್ದು ʻಡೇಂಜರ್ʼ ಅನ್ನೋ ಚಿತ್ರದಲ್ಲಿ ನಾಯಕಿಯಾಗ್ತಾರೆ. ಅದು ಸೂಪರ್ ಹಿಟ್ ಆಗುತ್ತದೆ. ಆಡವಾರಿ ಮಾಟಲುಕು ಅರ್ಥಾಲು ವೇರುಲೆ ಎಂಬ ವೆಂಕಟೇಶ್-ತ್ರಿಶಾ ಕಾಂಬಿನೇಷನ್ ಚಿತ್ರದಲ್ಲಿ, ತ್ರಿಷಾ ಸೋದರಿಯಾಗಿ ನಟಿಸ್ತಾರೆ. ಅದು ಹಿಟ್ ಆಗಿ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಗುತ್ತೆ. ಆಗ ತಮಿಳಿನಲ್ಲಿ ಸುಬ್ರಹ್ಮಣ್ಯಪುರಂ, ತೆಲುಗಿನಲ್ಲಿ ಅಷ್ಟಾಚಮ್ಮ ಚಿತ್ರಗಳಿಗೆ ಸೋಲೋ ಹೀರೋಯಿನ್ ಆಗ್ತಾರೆ. ಎರಡೂ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರೊಂದಿಗೆ ಸ್ವಾತಿ ರೆಡ್ಡಿ ಸ್ಟಾರ್ ನಟಿಯಾಗ್ತಾರೆ.
ಅವರು ತೆಲುಗಿನಲ್ಲಿ ನಟಿಸಿದ ಸೂಪರ್ ಹಿಟ್ ಚಿತ್ರಗಳಾದ ‘ಕಾರ್ತಿಕೇಯ’ (2014) ಮತ್ತು ‘ತ್ರಿಪುರ’ (2015) ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದ್ದವು. ಈ ಮೂಲಕ ಅವರು ಕನ್ನಡ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಆದರೆ ಕನ್ನಡದ ಸಿನಿಮಾದಲ್ಲಿ ನಟಿಸಿಲ್ಲ.
ಸ್ವಾತಿ ಅವರು 2018ರಲ್ಲಿ ಕೇರಳ ಮೂಲದ ಪೈಲಟ್ ವಿಕಾಸ್ ವಾಸು ಅವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳಿಂದಾಗಿ ಈ ಜೋಡಿ 2022-2023ರ ಅವಧಿಯಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದು ದೂರಾಗಿದ್ದರು.
ಎರಡನೇ ವಿವಾಹ: ಇತ್ತೀಚೆಗೆ 8 ಜುಲೈ 2026 ರಂದು ಸ್ವಾತಿ ರೆಡ್ಡಿ ಅವರು ತಾವು ನಟಿಸಿದ್ದ ‘ಮಂತ್ ಆಫ್ ಮಧು’ (2023) ಚಿತ್ರದ ನಿರ್ದೇಶಕರಾದ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಸರಳವಾಗಿ ಎರಡನೇ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೆಲುಗಿನ ‘ಅಷ್ಟಾ ಚಮ್ಮಾ’ (2008) ಚಿತ್ರದ ಅದ್ಭುತ ನಟನೆಗಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ನಂದಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸ್ವಾತಿ ರೆಡ್ಡಿ, ಮನೆಯಲ್ಲೇ ಸರಳ ವಿವಾಹವಾಗಿದ್ದು, ಮದುವೆಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ನಾಗೋಟಿಯನ್ನು ಕೊಲಾಬರೇಟ್ ಮಾಡಿದ್ದಾರೆ.
ಇದು ದೊಡ್ಡ ಸುದ್ದಿಯಾಗೋಕೆ ಕಾರಣಗಳಿವೆ.. ಅದೇನೆಂದರೆ
ಸ್ವಾತಿ ಅವರು ತಮ್ಮ ಪ್ರೀತಿ ಅಥವಾ ಮದುವೆಯ ತಯಾರಿ ಬಗ್ಗೆ ಯಾವುದೇ ಸುಳಿವು ನೀಡದೆ, ನೇರವಾಗಿ ಮದುವೆಯಾದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ “Hitched 08-07-2026” ಎಂದು ಫೋಟೋ ಹಂಚಿಕೊಂಡಿದ್ದರು. ಇದು ಸರ್ ಪ್ರೈಸ್ ಆಗಿತ್ತು. 2018ರಲ್ಲಿ ಪೈಲಟ್ ವಿಕಾಸ್ ವಾಸು ಅವರನ್ನು ಮದುವೆಯಾಗಿದ್ದ ಸ್ವಾತಿ, ನಂತರದ ದಿನಗಳಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ ಅವರು ಎಂದಿಗೂ ಡಿವೋರ್ಸ್ ಬಗ್ಗೆ ಮಾತೇ ಆಡಿರಲಿಲ್ಲ. ಅಷ್ಟೇ ಅಲ್ಲ “ಮದುವೆಯಾಗುವುದಕ್ಕಿಂತ ಒಂದು ನಾಯಿಯನ್ನು ಸಾಕಿ ಬೆಳೆಸುವುದು ಉತ್ತಮ” ಎಂದು ಹೇಳಿಕೆ ನೀಡಿದ್ದರು.
ವೈಯಕ್ತಿಕ ಜೀವನವನ್ನು ಸದಾ ರಹಸ್ಯವಾಗಿಡುತ್ತಿದ್ದ ನಟಿ, ನೋವಿನ ದಿನಗಳಿಂದ ಹೊರಬಂದು ತಮ್ಮದೇ ಸಿನಿಮಾದ ನಿರ್ದೇಶಕನ ಜೊತೆ ಹೊಸ ಜೀವನ ಆರಂಭಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿತು.



