ಒಂದು ಲೀಟರ್ ಪೆಟ್ರೋಲ್ ರೇಟ್ 100 ರೂ.ಗಿಂತ ಹೆಚ್ಚು. ಡೀಸೆಲ್ ಕೂಡಾ ಹೆಚ್ಚೂ ಕಡಿಮೆ ಅಷ್ಟೆ. ಅಷ್ಟು ಕೊಟ್ಟು ವಾಹನಕ್ಕೆ ಹಾಕಿಸಿದರೂ ಸಿಗುವ ಲಾಭ ಅಷ್ಟರಲ್ಲೇ ಇದೆ. ಟೂ ವೀಲರ್ ಸರಾಸರಿ ಕನಿಷ್ಠ 35-40 ಕಿ.ಮೀ. ಗರಿಷ್ಠ 60-65 ಕಿ.ಮೀ. ಆದರೆ ಒಂದು ಟೂ ವೀಲರ್ 150 ಕಿ.ಮೀ. ಮೈಲೇಜ್ ಕೊಡುವುದಕ್ಕೆ ಸಾಧ್ಯವಾ? ಅದೂ ಜಸ್ಟ್ 10 ರೂಪಾಯಿಯಲ್ಲಿ. ಬೇರೆ ಯಾರೋ ಹೇಳಿದ್ದರೆ ಡ್ರೋನ್ ಪ್ರತಾಪನ ಸ್ಟೋರಿ ಎನ್ನಬಹುದಾಗಿತ್ತೇನೋ.. ಆದರೆ ಈ ಮಾತು ಹೇಳಿರೋದು ಆನಂದ್ ಮಹಿಂದ್ರಾ. ಮಹಿಂದ್ರಾ ಸಂಸ್ಥೆಯ ಚೇರ್ಮನ್.
ಸಣ್ಣ ಸಣ್ಣ ಡಿಸೈನ್‍ಗಳು, ಬದಲಾವಣೆಗಳು ತಂತ್ರಜ್ಞಾನದಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತವೆ. ಈ ವಿಡಿಯೋದಲ್ಲಿರೋದು ಒಂದು ಎಲೆಕ್ಟ್ರಿಕಲ್ ಬೈಕ್. ಸೈಕಲ್ ಮಾದರಿಯಲ್ಲಿರೋ ಈ ಬೈಕ್‍ನಲ್ಲಿ 6 ಜನ ಒಟ್ಟಿಗೇ ಪ್ರಯಾಣ ಮಾಡಬಹುದು. ಗ್ರಾಮೀಣ ರಸ್ತೆಗಳಲ್ಲಿ ಇದು ಹೇಳಿ ಮಾಡಿಸಿದಂತಿದೆ., ಒಮ್ಮೆ ಈ ಬೈಕ್‍ನ್ನ ಕಂಪ್ಲೀಟ್ ಚಾರ್ಜ್ ಮಾಡಿದ್ರೆ 150 ಕಿ.ಮೀ. ಪ್ರಯಾಣ ಮಾಡಬಹುದು. ಬ್ಯಾಟರಿಯ ಶಕ್ತಿಯನ್ನು ಹೆಚ್ಚಿಸುವ ಅವಕಾಶವೂ ಇದೆ. ಒಮ್ಮೆ ಚಾರ್ಜ್ ಮಾಡೋದಕ್ಕೆ ತಗಲುವ ವೆಚ್ಚ 10 ರೂ. ಅದಕ್ಕೇ ಹೇಳಿದ್ದು 10 ರೂ.ಗೆ 150 ಕಿ.ಮೀ. ಮೈಲೇಜ್ ಎಂದು. ಇದನ್ನು ತಯಾರು ಮಾಡೋಕೆ 12 ಸಾವಿರ ಖರ್ಚಾಗಲಿದೆಯಂತೆ. ದೊಡ್ಡ ಮಟ್ಟದಲ್ಲಿ ತಯಾರು ಮಾಡಿದರೆ ಇನ್ನೂ ಕಡಿಮೆಯಾಗಲಿದೆ.
ಇದನ್ನು ಗ್ಲೋಬಲ್ ಮಾಡೆಲ್ ಆಗಿ ಅಳವಡಿಸಿಕೊಂಡರೆ ಯೂರೋಪ್ ದೇಶದ ಪ್ರವಾಸಿ ತಾಣಗಳಲ್ಲಿ ಇದು ಬಸ್ ಆಗಿಯೂ ಬಳಕೆಯಾಗಬಹುದು. ಹಳ್ಳಿಗಳ ವಿಶೇಷ ಪ್ರತಿಭೆ, ಇನ್ನೋವೇಷನ್, ಆವಿಷ್ಕಾರಗಳೇ ಜಗತ್ತಿನ ಜೀವನಾಡಿ ಎಂದು ಟ್ವೀಟ್ ಮಾಡಿದ್ದಾರೆ ಆನಂದ್ ಮಹೀಂದ್ರಾ.



