ಶಿವರಾಜ್ ಕುಮಾರ್ ಅವರಿಗೆ 64 ವರ್ಷ. ಸರ್ಕಾರಿ ಕೆಲಸದಲ್ಲಿದ್ದರೆ ಇಷ್ಟೊತ್ತಿಗೆ ರಿಟೈರ್ ಆಗಿರ್ತಾ ಇದ್ರು. ಬೆಳಗ್ಗೆ ಸಂಜೆ ವಾಕಿಂಗ್ ಮಾಡ್ಕೊಂಡು, ಟಿವಿ ನೋಡ್ಕೊಂಡು ಓಡಾಡ್ಕೊಂಡ್ ಇರಬೇಕಿದ್ದ ಶಿವಣ್ಣ, ಈ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಬ್ಯುಸಿ. ಕಾಯಕವೇ ಕೈಲಾಸ. ಅಂದಹಾಗೆ ಶಿವಣ್ಣ ಅವರಿಗಿಂತ ಹತ್ತಿಪ್ಪತ್ತು ವರ್ಷ ಚಿಕ್ಕ ವಯಸ್ಸಿನ ಹೀರೋಗಳಿಗೆ ಹೋಲಿಸಿದರೆ ಶಿವಣ್ಣ ಕೈಲಿ ಇರುವ ಸಿನಿಮಾಗಳ ಸಂಖ್ಯೆ ಹಿತವಾದ ಶಾಕ್ ಕೊಡುತ್ತದೆ. ಸುಮ್ಮನೆ ಲಿಸ್ಟ್ ನೋಡಿ..
ಬೇಲ್ (Bail): ಪವನ್ ಒಡೆಯರ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಭಾರಿ ನಿರೀಕ್ಷೆಯ ಕಮರ್ಷಿಯಲ್ ಆಕ್ಷನ್ ಸಿನಿಮಾ. ಈ ಸಿನಿಮಾ ಈ ವರ್ಷದ ಅಕ್ಟೋಬರ್ 2 ರಂದು ತೆರೆಗೆ ಬರಲು ಸಿದ್ಧವಾಗಿದೆ. ಶೂಟಿಂಗ್ ಯಾವಾಗ ಆಯ್ತು ಎಂಬುದೇ ಅಚ್ಚರಿ.
666 ಆಪರೇಷನ್ ಡ್ರೀಮ್ ಥಿಯೇಟರ್: ಹೇಮಂತ್ ಎಂ. ರಾವ್ ನಿರ್ದೇಶನದ ರೆಟ್ರೋ ಶೈಲಿಯ ಸ್ಪೈ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಶಿವಣ್ಣ ಅವರು ‘ಏಜೆಂಟ್ ಪ್ರಕಾಶ್’ ಎಂಬ ವಿಶಿಷ್ಟ ಪಾತ್ರದಲ್ಲಿದ್ದು, ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಎ ಫಾರ್ ಆನಂದ್ (A For Anand) : ಡಾ. ಶಿವರಾಜ್‌ಕುಮಾರ್ ಅಭಿನಯದ ಮುಂಬರುವ ಅತ್ಯಂತ ವಿಶಿಷ್ಟ ಹಾಗೂ ಬಹುನಿರೀಕ್ಷಿತ ಕನ್ನಡ ಸಿನಿಮಾ. ನಟ ಮತ್ತು ನಿರ್ದೇಶಕ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಅವರು ನಿರ್ದೇಶನದ ಸಿನಿಮಾ. ಘೋಸ್ಟ್ ಚಿತ್ರದ ನಂತರ ಮತ್ತೊಮ್ಮೆ ಶಿವಣ್ಣಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಶ್ರೀನಿ. ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.
ಮಹಾನ್ (Mahaan): ಪಿ.ಸಿ. ಶೇಖರ್ ನಿರ್ದೇಶನದ ಚಿತ್ರವಾಗಿದ್ದು, ಇದರಲ್ಲಿ ಶಿವಣ್ಣ ರೈತರ ಸಮಸ್ಯೆಗಳ ಪರ ಹೋರಾಡುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ರಾಘವೇಂದ್ರ ಕೂಡ ಈ ಚಿತ್ರದಲ್ಲಿದ್ದಾರೆ.
ಡ್ಯಾಡ್ (Dad): ತಂದೆ-ಮಗಳ ಅಥವಾ ಕೌಟುಂಬಿಕ ಭಾವನಾತ್ಮಕ ಕಥೆಯನ್ನೊಳಗೊಂಡ ಸಿನಿಮಾ.
ಎಂ.ಜೆ. ರಾಯ್ (MJ Roy): ಚೇತನ್ ಕುಮಾರ್ ನಿರ್ದೇಶನ ಹಾಗೂ ಕಿಶೋರ್ ಪತ್ತಿಕೊಂಡ ನಿರ್ಮಾಣದ ಹೊಸ ಚಿತ್ರ.
ಆರ್. ಚಂದ್ರು ಜೊತೆಗಿನ ಸಿನಿಮಾ: ‘ಕಬ್ಜ’ ಚಿತ್ರದ ನಂತರ ನಿರ್ದೇಶಕ ಆರ್. ಚಂದ್ರು ಅವರ ಜೊತೆ ಮತ್ತೊಂದು ಹೊಸ ಪ್ರಾಜೆಕ್ಟ್.
ಸರ್ವೈವರ್ (Survivor): ಚಿತ್ರೀಕರಣದ ವಿವಿಧ ಹಂತಗಳಲ್ಲಿರುವ ಮತ್ತೊಂದು ಬಹುನಿರೀಕ್ಷಿತ ಆಕ್ಷನ್ ಸಿನಿಮಾ.
ಜೈಲರ್ 2 (Jailer 2): ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಹಿಟ್ ಚಿತ್ರ ‘ಜೈಲರ್’ನ ಮುಂದುವರಿದ ಭಾಗ. ಇದರಲ್ಲಿ ಶಿವಣ್ಣ ಅವರು ತಮ್ಮ ಜನಪ್ರಿಯ ‘ನರಸಿಂಹ’ ಪಾತ್ರದಲ್ಲೇ ಮತ್ತೆ ಅಬ್ಬರಿಸಲಿದ್ದಾರೆ.
ತಮಿಳಿನ ಹೊಸ ಸಿನಿಮಾ (ಗೌತಮ್ ಶಿವಶಂಕರ್ ನಿರ್ದೇಶನ): ಚೊಚ್ಚಲ ನಿರ್ದೇಶಕ ಗೌತಮ್ ಶಿವಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಭಾವನಾತ್ಮಕ ತಂದೆ-ಮಗನ ಕಥೆಯುಳ್ಳ ತಮಿಳು ಸಿನಿಮಾ. ಇದರಲ್ಲಿ ಅಭಿಷನ್ ಜೀವಂತ್ ಶಿವಣ್ಣ ಅವರ ಮಗನಾಗಿ ನಟಿಸುತ್ತಿದ್ದಾರೆ.
ಈ ಎಲ್ಲಾ ಚಿತ್ರಗಳ ಹೊರತಾಗಿ ಇನ್ನೂ ಹಲವು ನಿರ್ದೇಶಕರು ಶಿವಣ್ಣ ಅವರಿಗಾಗಿ ಕಥೆಗಳನ್ನು ಸಿದ್ಧಪಡಿಸುತ್ತಿರುವುದು ವಿಶೇಷ. ಕನ್ನಡದಲ್ಲಿ ಸುದೀಪ್ ಅವರ ಮುಂದಿನ ಸಿನಿಮಾ ಕ್ಲಾರಿಟಿ ಇಲ್ಲ. ಉಪೇಂದ್ರರದ್ದೂ ಸ್ಪಷ್ಟತೆ ಇಲ್ಲ. ಯಶ್ ಅವರ ಸಿನಿಮಾ ರಿಲೀಸ್ ಆಗಿ ಹೆಚ್ಚೂ ಕಡಿಮೆ 4 ವರ್ಷ. ಧ್ರುವ ಸರ್ಜಾ ಸಿನಿಮಾ ಮುಂದಿನ ಸಿನಿಮಾ ಇನ್ನೊಂದೆರಡು ವರ್ಷ ಗ್ಯಾರಂಟಿ. ಗಣೇಶ್ ಅವರ 2 ಸಿನಿಮಾ ಈ ಅಕ್ಟೋಬರ್‌ಗೆ ಬರುತ್ತಿವೆ. ಅದು ಮುಗಿದರೆ ನೆನಪಿಲ್ಲ. ದುನಿಯಾ ವಿಜಯ್ ಅವರೊಂದು ಸಿನಿಮಾ ಮಾಡ್ತಿದ್ದಾರೆ. ಪ್ರಜ್ವಲ್ ಕಾಂಟ್ರವರ್ಸಿ ಮಾಡ್ಕೊಂಡು ಕೂತಿದ್ದಾರೆ. ದರ್ಶನ್ ಜೈಲಿನಲ್ಲಿದ್ಧಾರೆ. ಯವ, ವಿನಯ್, ಧನ್ವೀರ್ ಮೊದಲಾದವರ ಕೈಲಿ ಸಿನಿಮಾಗಳಿಲ್ಲ. ಶಿವಣ್ಣ ಮಾತ್ರ ಫುಲ್ ಬ್ಯುಸಿ. ಆಲ್ವೇಸ್ ಬ್ಯುಸಿ.



