ನಟ ದರ್ಶನ್ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟನಿಗೆ ಬೇಲ್ ಸಿಗುವುದು ಇಷ್ಟ ಇಲ್ವಾ..? ಬಿಡುಗಡೆಯಾಗುವುದು, ಆರೋಪದಿಂದ ಹೊರ ಬರುವುದು ಬೇಕಿಲ್ಲವಾ..? ದರ್ಶನ್ ಬದುಕಿರುವವರೆಗೂ ಟೀಕೆ, ಅವಮಾನಗಳನ್ನು ಎದುರಿಸುತ್ತಲೇ ಇರಬೇಕಾ..? ಇಂತಾದ್ದೊಂದು ಪ್ರಶ್ನೆ ಉದ್ಭವ ಆಗ್ತಿರೋದಕ್ಕೆ ಕಾರಣ ಇದೆ. ಯಾಕಂದ್ರೆ ದರ್ಶನ್ ಅಭಿಮಾನಿ ಸಂಘದ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಜಡ್ಜ್ ಸೂಚನೆಯಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧಾರೆ. ಇಂತಹ ಪ್ರಕರಣಗಳು ದರ್ಶನ್ ಅವರನ್ನು ಇನ್ನಷ್ಟು ಕಾಲ ಜೈಲಿನಲ್ಲಿಯೇ ಇರುವಂತೆ ಮಾಡುತ್ತವೆ. ಹೇಗೆಂದರೆ..
ದರ್ಶನ್‌ಗೆ ಜಾಮೀನು ಸಿಕ್ಕರೆ, ಹೊರಗಡೆ ಇದ್ದರೆ ಸಾಕ್ಷಿಗಳಿಗೆ ಬೆದರಿಸುತ್ತಾರೆ ಎಂಬ ಒಂದೇ ಒಂದು ಕಾರಣ ಸಾಕು. ಬೇಲ್ ನಿರಾಕರಿಸುವುದಕ್ಕೆ. ಈಗ ಆಗಿರುವುದೇನೆಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಲಾಗಿತ್ತು. ಈ ಬಗ್ಗೆ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಸಾಕ್ಷಿಗೆ ಬಿಗಿ ರಕ್ಷಣೆ ನೀಡಿದ್ದಾರೆ. ಜೊತೆಗೆ ಬೆದರಿಕೆ ಹಾಕಿದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆಗಿರುವ ಎಲ್ಲರೂ ದರ್ಶನ್ ಅಭಿಮಾನಿಗಳು.
ವೇಣು, ಸುಹಾಸ್ ಮತ್ತು ಪುನೀತ್ ಎಂಬ ಮೂವರನ್ನು ಅರೆಸ್ಟ್ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇದು ಗೊತ್ತಾಗಿದೆ. ಬಂಧಿತರಲ್ಲಿ ಪುನೀತ್ ಎಂಬಾತ ಸೋಶಿಯಲ್ ಮೀಡಿಯಾದಲ್ಲಿ ‘ಡಿ ಕಂಪನಿ’ ಫ್ಯಾನ್ ಪೇಜ್ ಅನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದವನಾದರೆ, ಇನ್ನಿಬ್ಬರು ಆರೋಪಿಗಳಾದ ಸುಹಾಸ್ ಮತ್ತು ವೇಣು ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸದಸ್ಯರಾಗಿದ್ದಾರೆ.
ಸಾಕ್ಷಿದಾರ ಸಂದೀಪ್ ಅವರ ಜೊತೆ ಮಾತುಕತೆ ನಡೆಸುವ ನೆಪದಲ್ಲಿ ಯಾವುದೋ ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಈ ಗ್ಯಾಂಗ್, ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದೆ. ಈ ವೇಳೆ ಕೋರ್ಟ್‌ನಲ್ಲಿ ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ತೀವ್ರ ಒತ್ತಡ ಹೇರಿದ್ದಾರೆ. ಇದಕ್ಕೆ ಸಾಕ್ಷಿದಾರ ಒಪ್ಪದಿದ್ದಾಗ ಆರೋಪಿ ಸುಹಾಸ್ ಜೈಲಿನಲ್ಲಿರುವ ದರ್ಶನ್ ಹೆಸರೇಳಿ ಪ್ರಾಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಮತ್ತು ಆತನ ಗೆಳತಿ ಪವಿತ್ರಾ ಗೌಡ ಪ್ರಮುಖ ಆರೋಪಿಗಳು. ಪವಿತ್ರಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್‌ಆರ್ ನಗರದ ಶೆಡ್‌ಗೆ ಕರೆತಂದು ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಈಗಾಗಲೇ ಸುದೀರ್ಘ ಕಾಲ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಸದ್ಯ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಇನ್ನು ಪ್ರಕರಣದ 17ನೇ ಸಾಕ್ಷಿಯು ‘ಕೆಲವು ಅಪರಿಚಿತ ವ್ಯಕ್ತಿಗಳು ತನಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಾವು ಹೇಳಿದಂತೆಯೇ ಸಾಕ್ಷ್ಯ ನುಡಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ’ ಎಂದು ಜಡ್ಜ್ ಎದುರು ಹೇಳಿದ್ದಾರೆ.
ನಟ ದರ್ಶನ್ ಅವರಿಗೆ ಅಭಿಮಾನಿಗಳೇ ವಿಲನ್‌ಗಳಾಗುತ್ತಿದ್ಧಾರೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿರುವವರು ದರ್ಶನ್ ಸ್ನೇಹಿತರು ಹಾಗೂ ಅಭಿಮಾನಿಗಳು. ಕೇವಲ ಅಭಿಮಾನದ ಹೆಸರಲ್ಲಿ ಬಂದು ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿದ್ದಾರೆ. ಅಭಿಮಾನವನ್ನು ದರ್ಶನ್ ಕೂಡಾ ದುರುಪಯೋಗ ಪಡಿಸಿಕೊಂಡಿದ್ದಾರೆ.
ಅದಾದ ಮೇಲೆ ದರ್ಶನ್ ಅವರಿಗೆ ವಿರುದ್ಧವಾದ ಹೇಳಿಕೆ ಕೊಟ್ಟಿದ್ದ ನಟಿ ರಮ್ಯಾ, ನಟ ಪ್ರಥಮ್ ಮೊದಲಾದವರಿಗೆ ಅಶ್ಲೀಲವಾಗಿ ನಿಂದನೆ ಮಾಡಿ, ಜೈಲು ಸೇರಿದ್ದೂ ಆಗಿದೆ. ಕೆಲವರು ಇತ್ತೀಚೆಗಷ್ಟೇ ಜಾಮೀನು ಪಡೆದು ಅಚೆ ಬಂದಿದ್ದಾರೆ. ಈಗಲೂ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪರ ಪೋಸ್ಟ್ ಹಾಗೂ ವಿಡಿಯೋ ಹಾಕುವುದು ನಿರಂತರವಾಗಿ ನಡೀತಾ ಇದೆ.
ಎಫ್‌ಐಆರ್ ಆಗಿ ಅರೆಸ್ಟ್ ಆದ ಪ್ರಕರಣಗಳಷ್ಟೇ ಅಲ್ಲ, ಇವುಗಳನ್ನೂ ಪೊಲೀಸರು, ವಕೀಲರು ಗಮನಿಸುತ್ತಲೇ ಇರುತ್ತಾರೆ. ರೆಕಾರ್ಡ್ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ ದರ್ಶನ್ ಅವರಿಗೆ ಕನಿಷ್ಠ ಒಂದು ವರ್ಷ ಜಾಮೀನು ಪಡೆಯಲು ಅಥವಾ ಅರ್ಜಿ ಹಾಕೋಕೆ ಅವಕಾಶ ಇಲ್ಲ. ಇನ್ನೊಂದು ವರ್ಷದ ನಂತರ ಜಾಮೀನಿಗೆ ಅರ್ಜಿ ಹಾಕಿದಾಗ ಇಂತಹ ಕೇಸುಗಳು, ಪ್ರಕರಣಗಳು ದರ್ಶನ್ ಅವರನ್ನು ಜೈಲಿನಲ್ಲಿಯೇ ಇರುವಂತೆ ಮಾಡಿದರೆ ಆಶ್ಚರ್ಯ ಇಲ್ಲ.



