ರಾಜ್ಯದಲ್ಲಿ ಯಾವ್ ಯಾವುದೋ ವಿಷಯಗಳ ಬಗ್ಗೆ ಘನಗಂಭೀರ ಚರ್ಚೆ ನಡೆಯುತ್ತಿರುತ್ತದೆ. ನಡೆಯುತ್ತಿದೆ. ಆದರೆ ಎಷ್ಟೋ ಬಾರಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನ್ನೇ ಆಡಲ್ಲ. ಎಲ್ಲರಿಗೂ ಶಿಕ್ಷಣ ಬೇಕು. ಆದರೆ ವಾಸ್ತವ ಪರಿಸ್ಥಿತಿ ಏನೆಂದರೆ ರಾಜ್ಯದ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಆಗಸ್ಟ್ ಅರ್ಧ ತಿಂಗಳು ಮುಗಿದರೂ ಇನ್ನೂ ಕೆಲವು ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಕೈತಲುಪಿಲ್ಲ. ಮೇ 24ಕ್ಕೆ ಪಿಯುಸಿ ಪ್ರವೇಶಾತಿ ನೇಮಕ ಆಗಿದೆ. ಪಿಯು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಒಂದು ಪಾಠ ಅಥವಾ ಅಧ್ಯಾಯ ಮುಗಿಯುತ್ತಿದ್ದಂತೆಯೇ ಒಂದು ಕಿರು-ಪರೀಕ್ಷೆ ನಡೆಯಬೇಕು. ಆದರೆ ಪಠ್ಯ ಪುಸ್ತಕಗಳೇ ಬಂದಿಲ್ಲ.
ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಇದೂವರೆಗೆ ಕನ್ನಡ, ಇಂಗ್ಲಿಷ್ ಮತ್ತು ವಿಜ್ಞಾನದ ಟೆಕ್ಸ್ಟ್ ಬುಕ್ ಕೈ ಸೇರಿಲ್ಲ. ಪಠ್ಯ ಪುಸ್ತಕಗಳೇ ಇಲ್ಲ, ಪರೀಕ್ಷೆ ಬರೆಯೋದು ಹೇಗೆ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆಯಾದರೆ, ಪರೀಕ್ಷೆಗೆ ಪ್ರಶ್ನೆ ಸಿದ್ಧಪಡಿಸುವುದು ಹೇಗೆ ಅನ್ನೋದು ಲೆಕ್ಚರರ್ಸ್ ಪ್ರಶ್ನೆ. ಅಂದಹಾಗೆ ಪಠ್ಯ ಪುಸ್ತಕಗಳು ಏಕೆ ಬಂದಿಲ್ಲ ಎಂದು ನೋಡಿದರೆ.. ಹಲವು ಉತ್ತರಗಳು ಸಿಕ್ಕಿವೆ. ಆ ಉತ್ತರಗಳ ಪ್ರಕಾರ
ಸರ್ಕಾರದಿಂದ ಪಠ್ಯ ಪುಸ್ತಕಗಳು ಮುದ್ರಣವಾಗಿವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸರ್ಕಾರದ ಅನುಮತಿ ಬೇಕು. ಅನುಮತಿ ಸಿಕ್ಕಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.25ರಷ್ಟು ಹಣ ನೀಡಿ ಪುಸ್ತಕ ಖರೀದಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಆ ಅನುಕೂಲ ಇಲ್ಲ.
ಆದರೆ ಪಿಯು ಇಲಾಖೆಯ ನಿರ್ದೇಶಕ ಭರತ್ ಅವರ ಪ್ರಕಾರ ಈಗಾಗಲೇ ಶೇ.60ರಷ್ಟು ಸರಬರಾಜು ಆಗಿದೆ. ಉಳಿದ ಕಾಲೇಜುಗಳಿಗೆ ಬೇಗನೆ ಪೂರೈಸುತ್ತೇವೆ ಎನ್ನುತ್ತಾರೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ ಭರತ್ ಅವರ ಬಳಿ ಪುಸ್ತಕ ಪಡೆದಿರುವ ಪಿಯು ಕಾಲೇಜುಗಳ ಪಟ್ಟಿ ಕೇಳಿದರೆ ಉತ್ತರ ಸಿಗುವುದಿಲ್ಲ. ಅಂದಹಾಗೆ ಇನ್ನೆರಡು ತಿಂಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ಎದುರಾಗುತ್ತವೆ. ಡಿಸೆಂಬರಿನಲ್ಲಿ ಪರೀಕ್ಷೆ ನಡೆಯಬೇಕು.
ಅಂದಹಾಗೆ ಪ್ರಕ್ರಿಯೆ ಏಕೆ ತಡ ಎಂದರೆ ಸಂಬಂಧಪಟ್ಟವರು ಪತ್ರ ಬರೆದಿದ್ದೇನೆ ಎನ್ನುತ್ತಾರೆ. ಟೆಕ್ನಾಲಜಿ ವೇಗವಾಗಿ ತಿರುಗುತ್ತಿರುವ ಈ ಕಾಲದಲ್ಲೂ ಇನ್ನೂ ಪತ್ರ ಬರೆದು, ಪೋಸ್ಟ್ ಹಾಕಿ, ಅವರಿಗೆ ತಲುಪಿ ಅವರು ಅದನ್ನು ಓದಿ, ಉತ್ತರ ಬರೆಯುವುದಕ್ಕೆ ಕಾಯುತ್ತಾರೆ ಎಂದರೆ ಪರಿಸ್ಥಿತಿ ಏನಿರಬಹುದು.. ಅರ್ಥವಾಗದ ರೀತಿಯಲ್ಲಿದೆ.
ಅಂದಹಾಗೆ ಕೊಡುತ್ತಿರುವ ಇನ್ನೊಂದು ಕಾರಣ ಏನು ಗೊತ್ತಾ..? ಈ ಬಾರಿ ಪಿಯುಗೆ ಪ್ರವೇಶ ಪಡೆದಿರುವ ಸಂಖ್ಯೆ ಹೆಚ್ಚಾಗಿದೆಯಂತೆ. ಹೀಗಾಗಿ ಲೇಟ್ ಆಗಿದೆ ಎಂಬ ಕಾರಣ ಕೊಡಲಾಗಿದೆ. ರಾಜ್ಯದಲ್ಲಿ 1,319 ಸರಕಾರಿ ಪದವಿ ಪೂರ್ವ ಕಾಲೇಜುಗಳು, 815 ಅನುದಾನಿತ ಪದವಿ ಪೂರ್ವ ಕಾಲೇಜುಗಳಿವೆ. ಸರಕಾರಿ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳೂ ಸೇರಿ ಒಟ್ಟು 13.17 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅನುದಾನಿತ ಕಾಲೇಜುಗಳಲ್ಲಿ 1.91 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 34 ವಿಷಯಗಳನ್ನು ಬೋಧಿಸಲಾಗುತ್ತಿದ್ದು, ಉಚಿತ ಪಠ್ಯಪುಸ್ತಕ ವಿತರಣೆಯಡಿಯಲ್ಲಿ ಪುಸ್ತಕಗಳು ಪೂರೈಕೆಯಾಗಬೇಕಿತ್ತು.



