RSSನ್ನು ನೋಂದಣಿ ಮಾಡಿಸಿಯೇ ಮಾಡಿಸುತ್ತೇನೆ ಎಂದು ಹಠ ತೊಟ್ಟು ಹೊರಟಿರುವ ಕಾಂಗ್ರೆಸ್ ಪಕ್ಷದ ನಾಯಕರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಘೋಷಿತ ನೇತೃತ್ವ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಜೊತೆ ಅಷ್ಟೇ ಪ್ರಮುಖವಾಗಿ ಕೈಜೋಡಿಸಿರುವ ಇನ್ನೊಬ್ಬ ನಾಯಕ ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿಕೆ ಹರಿಪ್ರಸಾದ್. ಅವರ ಜೊತೆಗೆ ಕಾಂಗ್ರೆಸ್ಸಿನ ಇನ್ನಷ್ಟು ಹಾಲಿ ಮತ್ತು ಮಾಜಿ ಸಚಿವರು, ಶಾಸಕರೆಲ್ಲರೂ ಸಾಥ್ ಕೊಟ್ಟಿದ್ದಾರೆ. ಪ್ರಿಯಾಂಕ್ ಅಲ್ಲ, ಯಾರೇ ಬಂದರು ಆರ್‌ಎಸ್‌ಎಸ್ ನೋಂದಣಿ ಮಾಡಿಸಲ್ಲ ಎಂದು ಘಂಟಾಘೋಷವಾಗಿ ಹೇಳಿರುವುದು ಬಿಎಲ್ ಸಂತೋಷ್ (ಬೊಮ್ಮಾರಬೆಟ್ಟು ಲಕ್ಷ್ಮೀಜನಾರ್ದನ ಸಂತೋಷ್). ತಾಕತ್ತಿದ್ರೆ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎಂದು ಸವಾಲು ಹಾಕಿರುವುದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ಅಂದಹಾಗೆ ಇದೆಲ್ಲದರ ಮೂಲ ಉದ್ದೇಶ ಆರ್‌ಎಸ್‌ಎಸ್ ನೋಂದಣಿ ಅಲ್ಲ ಎನ್ನುವುದೇ ಅಚ್ಚರಿ.
80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾತನಾಡುತ್ತಾ “ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ (ನೋಂದಣಿ) ಆಗಿರಲಿಲ್ಲ, ಮುಂದೆಯೂ ಆಗಲ್ಲ. ಪ್ರಿಯಾಂಕ್ ಖರ್ಗೆ ಅವರೇ, ಪ್ರತಿಯೊಂದಕ್ಕೂ ನೋಂದಣಿಯೇ ಮಾನದಂಡವಲ್ಲ. ನಿಮ್ಮ ಕುಟುಂಬ ಕಲ್ಬುರ್ಗಿಗೆ ಓಡಿ ಬಂದಾಗ, ರಜಾಕಾರರ ವಿರುದ್ಧ ನಿಂತಿದ್ದು ಇದೇ ಆರ್‌ಎಸ್‌ಎಸ್‌ನ ಹುಡುಗರು. ಸಂಘವು ಸಮಾಜದ ರಕ್ಷಣೆ ಮತ್ತು ಸೇವೆಗೆ ಬದ್ಧವಾಗಿದ್ದು, ಅದನ್ನು ನೋಂದಣಿಯ ಶರತ್ತುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲʼʼ ಈ ಹೇಳಿಕೆ ಸುಮ್ಮನೆ ಬಂದಿದ್ದಲ್ಲ.
ಬಿಎಲ್ ಸಂತೋಷ್ (ಬೊಮ್ಮಾರಬೆಟ್ಟು ಲಕ್ಷ್ಮೀಜನಾರ್ದನ ಸಂತೋಷ್) ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ). ಮೂಲತಃ ಬಿಎಲ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ಪ್ರಚಾರಕರಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. 2006 ರಲ್ಲಿ ಬಿಜೆಪಿಗೆ ಸೇರಿರುವ ಬಿಎಲ್ ಸಂತೋಷ್ ಬಿಜೆಪಿಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಿದ್ದಾರೆ. ಬಿಎಲ್ ಸಂತೋಷ್ ಹೇಳಿಕೆಯನ್ನೇ ಏಕೆ ಪ್ರಧಾನವಾಗಿ ಪರಿಗಣಿಸಬೇಕು ಎಂದರೆ ಬಿಎಲ್ ಸಂತೋಷ್ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಮಾಡಲ್ಲ. ಅವರು ಬಿಜೆಪಿಯಲ್ಲಿರುವ ಆರ್‌ಎಸ್‌ಎಸ್ ಮುಖ. ಬಿಜೆಪಿಯ ಶೇ.90ರಷ್ಟು ನಾಯಕರು ಆರ್‌ಎಸ್‌ಎಸ್ ಮೂಲದವರು. ಆದರೆ ಆರ್‌ಎಸ್‌ಎಸ್‌ಗೆ ನಿಷ್ಠವಾಗಿದ್ದುಕೊಂಡಿರುವ ನಾಯಕರು ಕೆಲವೇ ಕೆಲವರು. ಪಕ್ಷದ ಮೇಲೆ ನಿಯಂತ್ರಣ ಇಟ್ಟುಕೊಳ್ಳಲೆಂದೇ ನೇಮಕವಾಗಿರುವವರಲ್ಲಿ ಒಬ್ಬರು ಬಿಎಲ್ ಸಂತೋಷ್.
ಆರ್‌ಎಸ್‌ಎಸ್ ಕುರಿತು ಟೀಕೆ ಬಂದಾಗಲೆಲ್ಲ ಆರ್‌ಎಸ್‌ಎಸ್ ಮಾತನಾಡುವುದೇ ಇಲ್ಲ. ಆದರೆ ಬಿಜೆಪಿ ನಾಯಕರು ಮಾತನಾಡ್ತಾರೆ. ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್ ಅಷ್ಟೇ ಅಲ್ಲ, ಇತ್ತೀಚೆಗೆ ಕಾಶಪ್ಪನವರ್, ಪ್ರದೀಪ್ ಈಶ್ವರ್, ಸಂತೋಷ್ ಲಾಡ್, ಶಿವಲಿಂಗೇ ಗೌಡ.. ಮೊದಲಾದವರೆಲ್ಲ ಸೇರಿದ್ದಾರೆ. ಕೇಂದ್ರದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರೇ ಇದ್ಧಾರೆ. ಯಾರೇ ಮಾತನಾಡಿದರೂ ಆರ್ ಎಸ್ ಎಸ್ ನೋ ಕಮೆಂಟ್ಸ್. ಆರ್‌ಎಸ್‌ಎಸ್‌ನ 6ನೇ ಮತ್ತು ಪ್ರಸ್ತುತ ಸರ್ಸಂಘಚಾಲಕ್ ಆಗಿರುವ ಮೋಹನ್ ಭಾಗವತ್, ಆರ್‌ಎಸ್‌ಎಸ್‌ನ ಸರ-ಕಾರ್ಯವಾಹ ಅಂದರೆ ಪ್ರಧಾನ ಕಾರ್ಯದರ್ಶಿಯಾಗಿರುವ ದತ್ತಾತ್ತೇಯ ಹೊಸಬಾಳೆ (ಇವರು ಕರ್ನಾಟಕದವರೇ), ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಸಹ-ಸರಕಾರ್ಯವಾಹ ಹುದ್ದೆಯಲ್ಲಿರುವ ಡಾ. ಕೃಷ್ಣ ಗೋಪಾಲ್, ಅರುಣ್ ಕುಮಾರ್, ಸಿ. ಆರ್. ಮುಕುಂದ್ (ಇವರೂ ಕರ್ನಾಟಕದವರೇ), ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಮುಸ್ಲಿಂ ರಾಷ್ಟ್ರೀಯ ಮಂಚ್ ನೋಡಿಕೊಳ್ಳುವ ಇಂದ್ರೇಶ್ ಕುಮಾರ್.. ಯಾರೊಬ್ಬರೂ ಮಾತನಾಡಲ್ಲ. ಮಾತನಾಡಿದರೆ ಕಾಂಗ್ರೆಸ್ ಮೂಲ ಉದ್ದೇಶ ಈಡೇರಿದ ಹಾಗೆ.
ಹೌದು, ಹೇಗಾದರೂ ಮಾಡಿ ಕಾಂಗ್ರೆಸ್ಸಿನ ಪ್ರತಿ ಹೇಳಿಕೆಗೂ ಆರ್‌ಎಸ್‌ಎಸ್ ನಾಯಕರು ರಿಯಕ್ಟ್ ಮಾಡುವಂತೆ ಮಾಡಬೇಕು ಎನ್ನುವುದೇ ಕಾಂಗ್ರೆಸ್ ನಾಯಕರ ಮೂಲ ಅಜೆಂಡಾ. ಪ್ರತಿದಿನವೂ ಆರ್‌ಎಸ್‌ಎಸ್ ತಮ್ಮ ಟೀಕೆಗಳಿಗೆ ಪ್ರತಿಕ್ರಿಯೆ ಕೊಡಬೇಕು. ಬಹಿರಂಗವಾಗಿ ಮಾತನಾಡುತ್ತಲೇ ಇರಬೇಕು. ಬಿಜೆಪಿ ಅಖಾಡದಲ್ಲೇ ಇರಬಾರದು.. ಇಂಥಾದ್ದೊಂದು ಅಜೆಂಡಾ ಇಟ್ಟುಕೊಂಡೇ ಕಾಂಗೆಸ್ ಅಟ್ಯಾಕ್ ಮಾಡ್ತಿದೆ. ಅವರ ಉದ್ದೇಶ ಸ್ಪಷ್ಟ. ಬಿಜೆಪಿಯ ಮೂಲ ಶಕ್ತಿ RSS. ಅವರನ್ನು ಕೆಣಕಿ ರೊಚ್ಚಿಗೆಬ್ಬಿಸಿ ಅಖಾಡಕ್ಕೆ ತಂದರಷ್ಟೇ ಗೆಲ್ಲೋಕೆ ಸಾಧ್ಯ. ದಿನವಿಡೀ ಮಾತನಾಡುತ್ತ ಕೂರುವ ಸಂಘಟನೆ ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎನ್ನುವುದು ಕಾಂಗ್ರೆಸ್ ಹಿರಿಯ ನಾಯಕರ ನಂಬಿಕೆ. ಹೀಗಾಗಿಯೇ RSSನ್ನು ಕೆಣಕುತ್ತಿರುವ ಕಾಂಗ್ರೆಸ್ ನಾಯಕರಿಗೆ RSS ತಣ್ಣನೆಯ ಪ್ರತಿಕ್ರಿಯೆ ಕೊಡುತ್ತಿದೆ. ಹಾಗಾದರೆ RSSಗೆ ರಿಯಾಲಿಟಿ ಗೊತ್ತಿದೆಯಾ.. ಗೊತ್ತಿದೆಯೋ.. ಇಲ್ಲವೋ.. ಅದೇ ಗೊತ್ತಿಲ್ಲ. RSS ಈ ಹಿಂದೆಯೂ ಕೂಡಾ ಮಾತನಾಡಿದ ಉದಾಹರಣೆ ಇಲ್ಲ. ನೆಹರು ಕಾಲದಲ್ಲಿ ಒಮ್ಮೆ, ಇಂದಿರಾ ಕಾಲದಲ್ಲಿ ಒಮ್ಮೆ ಬ್ಯಾನ್ ಆಗಿದ್ದಾಗಲೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಕಾನೂನು ಹೋರಾಟವನ್ನಷ್ಟೇ ಮಾಡಿತ್ತು. ಈಗಲೂ ಅಷ್ಟೇ ಎಂಬಂತೆ ತೋರುತ್ತಿದೆ.



