ಬಿಪಿಎಲ್ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಹಾರ ಇಲಾಖೆಯ ನೂತನ ಸಚಿವ ರಿಜ್ವಾನ್ ಅರ್ಷದ್ ಅವರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದಕ್ಕೆ ಡೆಡ್ ಲೈನ್ ಕೂಡಾ ಹಾಕಲಾಗಿದೆ. ಸೆಪ್ಟೆಂಬರ್ 30. ಸೆ.30ರ ಒಳಗೆ E-KYC ಆಗಿರಬೇಕು. ಆಗಿಲ್ಲದೇ ಹೋದರೆ ಕಾರ್ಡ್ ಕ್ಯಾನ್ಸಲ್ ಆಗಲಿದೆಯಂತೆ.
”5 ವರ್ಷದ ಬಳಿಕ ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ, ಪಡಿತರ ಸೋರಿಕೆ ತಡೆಗಾಗಿ ಪಡಿತರ ಚೀಟಿಗಳ ಇ-ಕೆವೈಸಿ ಮಾಡುತ್ತಿದ್ದೇವೆ. ಇದರಲ್ಲಿಎಷ್ಟು ಕಾರ್ಡ್‌ಗಳು ರದ್ದಾಗುತ್ತವೆ ಎಂಬುದನ್ನು ನೋಡಿಕೊಂಡು ಹೊಸ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ಸೆ.30 ರೊಳಗೆ ಒಟ್ಟು 2.65 ಕೋಟಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅನರ್ಹ ಕಾರ್ಡ್‌ಗಳ ಪ್ರಮಾಣ ತಿಳಿಯಲಿದೆ. ಎಷ್ಟು ಕಾರ್ಡ್‌ಗಳು ರದ್ದಾಗುತ್ತವೆಯೋ ಅದರ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ಕಾರ್ಡ್ ನೀಡಲಾಗುವುದು,” ಎಂದು ತಿಳಿಸಿದ್ದಾರೆ ಆಹಾರ ಖಾತೆ ಸಚಿವ ರಿಜ್ವಾನ್ ಅರ್ಷದ್.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅನ್ವಯ ರಾಜ್ಯದಲ್ಲಿಇನ್ನೂ 50 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗಬೇಕಿತ್ತು ಎಂದಿರುವ ರಿಜ್ವಾನ್ ಹೊಸ ಕಾರ್ಡ್ ನೀಡುವುದನ್ನು ಕೇಂದ್ರ ನಿರ್ಬಂಧಿಸಿರುವುದರಿಂದ ಹೊಸ ಕಾರ್ಡ್ ವಿತರಣೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಮಾನದಂಡ ಉಲ್ಲಂಘಿಘಿಸಿ ಪಡೆದಿರುವ 7.65 ಲಕ್ಷ ಕಾರ್ಡ್‌ಗಳನ್ನು ಕೇಂದ್ರ ಸರಕಾರವು ‘ಶಂಕಾಸ್ಪದ ಪಟ್ಟಿ’ಗೆ ಸೇರಿಸಿ ರಾಜ್ಯಕ್ಕೆ ಸಲ್ಲಿಸಿತ್ತು. ಇಲಾಖೆ ಅಧಿಕಾರಿಗಳು ಇವುಗಳನ್ನು ಪರಿಶೀಲಿಸಿ 3.50 ಲಕ್ಷ ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಉಳಿದ ಕಾರ್ಡ್‌ಗಳ ಪರಿಶೀಲನೆ ಕಾರ್ಯ ನಡೆಯುತ್ತಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಡ್‌ಗಳ ಪರಿಷ್ಕರಣೆ ಹಾಗೂ ಬಿಪಿಎಲ್ ಕಾರ್ಡ್‌ಗಳ ರದ್ದು ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಹೇಗೆ..?
ಬಿಪಿಎಲ್ (BPL) ಪಡಿತರ ಚೀಟಿಯ ಇ-ಕೆವೈಸಿ (e-KYC) ಪ್ರಕ್ರಿಯೆಗೆ ಎರಡು ಮಾರ್ಗಗಳಿವೆ. ಹತ್ತಿರದ ನ್ಯಾಯಬೆಲೆ ಅಂಗಡಿಗೆ (ರೇಷನ್ ಶಾಪ್) ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ಆಪ್ ಬಳಸಿ ಮನೆಯಲ್ಲೇ ಕುಳಿತು ಮಾಡಿಕೊಳ್ಳಬಹುದು. ಕರ್ನಾಟಕ ಸರ್ಕಾರದ ಆದೇಶದಂತೆ ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಎಲ್ಲಾ ಕುಟುಂಬದ ಸದಸ್ಯರೂ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು.
ನ್ಯಾಯಬೆಲೆ ಅಂಗಡಿಗೆ ಹೋಗಿ ಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಕೊಟ್ಟು, ಲ್ಲಿನ ಇ-ಪಿಒಎಸ್ (ePoS) ಯಂತ್ರದಲ್ಲಿ ನಿಮ್ಮ ಬೆರಳಚ್ಚು (Biometric/Fingerprint) ಅಥವಾ ಕಣ್ಣಿನ ಪಾಪೆಯ (Iris) ಸ್ಕ್ಯಾನ್ ನೀಡಿ ದೃಢೀಕರಿಸಿದರೆ ಇ-ಕೆವೈಸಿ ಆಗುತ್ತದೆ. ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಖುದ್ದಾಗಿ ಹೋಗಿ ಬಯೋಮೆಟ್ರಿಕ್ ನೀಡಬೇಕು.
2ನೇ ವಿಧಾನ ಮೊಬೈಲ್ ಮೂಲಕ. ಸ್ಮಾರ್ಟ್‌ಫೋನ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ ಇದ್ದರೆ, ಗೂಗಲ್ ಪ್ಲೇ ಸ್ಟೋರ್‌ನಿಂದ Mera eKYC (ಅಥವಾ ಮೇರಾ ರೇಷನ್) ಮತ್ತು Aadhaar FaceRD ಎಂಬ ಎರಡು ಅಧಿಕೃತ ಆಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ. Mera eKYC’ ಆಪ್ ತೆರೆದು, ಭಾಷೆಯನ್ನು ಆಯ್ದುಕೊಂಡು, ರಾಜ್ಯದ ಪಟ್ಟಿಯಲ್ಲಿ ‘ಕರ್ನಾಟಕ’ ಆಯ್ಕೆಮಾಡಿ ಮತ್ತು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಪರದೆಯ ಮೇಲೆ ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರ ಹೆಸರುಗಳು ಕಾಣಿಸುತ್ತವೆ. ಇ-ಕೆವೈಸಿ ಬಾಕಿ ಇರುವ ಸದಸ್ಯರ ಹೆಸರನ್ನು ಕ್ಲಿಕ್ ಮಾಡಿ ‘Face Authentication’ ಆಯ್ಕೆಮಾಡಿ. ಈಗ ಆಧಾರ್ ಫೇಸ್ ಆರ್‌ಡಿ ಆಪ್ ಮೂಲಕ ಕ್ಯಾಮೆರಾ ಆನ್ ಆಗುತ್ತದೆ. ಬೆಳಕಿರುವ ಜಾಗದಲ್ಲಿ ನಿಂತು, ಕ್ಯಾಮೆರಾವನ್ನು ನೇರವಾಗಿ ನೋಡಿ ಮುಖವನ್ನು ಸ್ಕ್ಯಾನ್ ಮಾಡಿ. ಸ್ಕ್ಯಾನಿಂಗ್ ಪ್ರಕ್ರಿಯೆ ಮುಗಿದ ನಂತರ ಪರದೆಯ ಮೇಲೆ ‘eKYC Successful’ ಎಂಬ ಸಂದೇಶ ಮೂಡುತ್ತದೆ. ಇದೇ ರೀತಿ ಉಳಿದ ಸದಸ್ಯರಿಗೂ ಪ್ರತ್ಯೇಕವಾಗಿ ಮಾಡಿ.
ವಂಚನೆ ಬಗ್ಗೆ ಎಚ್ಚರ: ಇ-ಕೆವೈಸಿ ನೆಪದಲ್ಲಿ ಯಾರಾದರೂ ಕರೆ ಮಾಡಿ ಒಟಿಪಿ (OTP) ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ. ಸರ್ಕಾರಿ ಅಧಿಕೃತ ಆಪ್ ಅಥವಾ ರೇಷನ್ ಅಂಗಡಿಯಲ್ಲಿ ಮಾತ್ರ ಪ್ರಕ್ರಿಯೆ ನಡೆಸಿ.



