ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಫೋಸ್ಟು, ಫೋಟೋ, ವಿಡಿಯೋಗಳು ಯಾವ ರೀತಿ ಕಂಟಕವಾಗಿ ಕಾಡಬಹುದು ಎನ್ನುವುದಕ್ಕೆ ಜಮೀರ್ ಅಹ್ಮದ್ ಅವರಿಗಿಂತ ಉದಾಹರಣೆ ಬೇಕಿಲ್ಲ. ಇತ್ತೀಚೆಗೆ ಜಮೀರ್ ವಿರುದ್ಧ ಲೋಕಾಯುಕ್ತ ತನಿಖೆ ಮತ್ತೆ ಶುರುವಾಗಿದೆ. ಜಮೀರ್ ಅಹ್ಮದ್ ಅವರ ವಿರುದ್ಧ ತನಿಖೆಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ಎಲ್ಲದಕ್ಕೂ ಮೂಲ ಕಾರಣ ಫೇಸ್ ಬುಕ್‌ನಲ್ಲಿ ಹಾಕಿದ್ದ ಪೋಸ್ಟುಗಳು. ಪೋಟೋಗಳು ಹಾಗೂ ವಿಡಿಯೋಗಳು.
ತಾವು ಮನೆಗೆ ಬಂದವರಿಗೆ ನೆರವು ಕೇಳಿದವರಿಗೆ ನೆರವು ನೀಡುತ್ತೇನೆ, ದಾನ ಧರ್ಮ ಮಾಡುತ್ತೇನೆ ಎಂದೆಲ್ಲ ಜಮೀರ್ ಅಹ್ಮದ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ತಾ ಇದ್ರು. ಕೈ ಬಿಚ್ಚಿ ಮಾಡಿದ ದಾನ, ಧರ್ಮದ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು ಹಾಗೂ ನೆರವು ಪಡೆದವರ ಬಗ್ಗೆ ನೋಂದಣಿ ಪುಸಕ್ತಗಳಲ್ಲಿ ಬರೆದಿಟ್ಟಿದ್ದರು. ಅದೇ ಈಗ ಅವರಿಗೆ ವಿಲನ್ ಆಗಿದೆ.
ಹೇಗೆಂದರೆ.. ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಸಾರಿಗೆ (ಟ್ರಾವೆಲ್ಸ್ ಬಸ್‌ಗಳು) ಉದ್ಯಮದ ಬಗ್ಗೆ ಜಮೀರ್ ಉಲ್ಲೇಖಿಸಿದ್ದಾರೆ. ಇನ್ನು ಶಾಸಕ ಹಾಗೂ ಸಚಿವರಾಗಿ ಪಡೆದಿರುವ ಸಂಬಳ ಹೊರತುಪಡಿಸಿ ತಮ್ಮ ಆದಾಯದ ಮೂಲ ಟ್ರಾವೆಲ್ಸ್ ವ್ಯವಹಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಅವರ ವಾರ್ಷಿಕ 15 ಲಕ್ಷ ರು. ಆದಾಯ ಎಂದು ಹೇಳಿಕೊಂಡಿದ್ದಾರೆ. ಆದರೆ ಜಮೀರ್ ಅಹ್ಮದ್ ಅವರು ಮಾಡಿರುವ ದಾನ, ಧರ್ಮದ ಫೋಟೋಗಳು ಅವರ ಆದಾಯವನ್ನೂ ಮೀರಿವೆ. ಹೌದು, 15 ಲಕ್ಷ ರೂ.ಗಿಂತ ಹೆಚ್ಚು ದಾನ ಮಾಡಿದ್ಧಾರೆ. ಅದೂ ಕೂಡಾ ಕೋಟಿ ಕೋಟಿಗಳ ಲೆಕ್ಕದಲ್ಲಿದೆ. ಆ ಹಣ ಎಲ್ಲಿಂದ ಬಂತು ಎನ್ನುವುದೇ ತನಿಖೆಯ ಮೂಲ. ಒಟ್ಟಾರೆ 26 ಕೋಟಿ ರು.ಗಳನ್ನು ಕಾನೂನುಬಾಹಿರವಾಗಿ ಮಾಜಿ ಸಚಿವರು ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ಧಾರೆ.
ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಹಲವು ಜನರಿಗೆ ಜಮೀರ್ ಧಾರಾಳಿಯಾಗಿ ನೆರವು ನೀಡಿದ್ದಾರೆ. ತಾವು ಆರ್ಥಿಕ ಸಹಾಯ ಮಾಡಿದ ಜನರ ಜತೆ ಫೋಟೋ ತೆಗೆಸಿಕೊಂಡು ಅವುಗಳನ್ನು ಫೇಸ್‌ಬುಕ್‌ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ಧಾರೆ. ನೆರವು ಪಡೆದವರ ಸ್ವವಿವರನ್ನು ಮಾಜಿ ಸಚಿವರ ಸಿಬ್ಬಂದಿ ಪುಸ್ತಕದಲ್ಲಿ ಬರೆದಿಟ್ಟಿದ್ಧಾರೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವರ ಫೇಸ್‌ಬುಕ್ ಖಾತೆಯಲ್ಲಿನ ಫೋಟೋಗಳನ್ನೂ ಲೋಕಾಯುಕ್ತ ಪೊಲೀಸರು ಜಾಲಾಡಿದ್ದಾರೆ. ಅದೇ ರೀತಿ ಜಮೀರ್ ಅವರ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದ ನೋಂದಣಿ ಪುಸಕ್ತಗಳನ್ನು ಶೋಧಿಸಿದ ವೇಳೆ ದಾನ-ಧರ್ಮದ ಸುಮಾರು 2 ಕೋಟಿ ರು. ‘ಲೆಕ್ಕ’ ಲಭಿಸಿದೆ.
ಕೊರೋನಾ ದುರಿತ ಕಾಲದಲ್ಲಿ ಮೂರು ವರ್ಷಗಳ ಕಾಲ ಸಾರಿಗೆ ಉದ್ಯಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ತಮ್ಮ ಆದಾಯದ ಮೂಲವಾಗಿದ್ದ ಟ್ರಾನ್ಸ್‌ಪೋರ್ಟ್ ಉದ್ಯಮವೇ ಭಾರೀ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಸಂದರ್ಭದಲ್ಲೂ ಜಮೀರ್ ಅವರು ‘ಕೊಡುಗೈ ದಾನಿ’ ಆಗಿದ್ದರು. ಇದು ಲೋಕಾಯುಕ್ತ ಪೊಲೀಸರಿಗೆ ಮಾಜಿ ಸಚಿವರ ಹಿಂದಿರುವ ಆರ್ಥಿಕ ‘ಶಕ್ತಿ’ ಬಗ್ಗೆ ಪ್ರಶ್ನೆ ಮೂಡಿಸಿತ್ತು. ಆಗ ಅವರ ಹಣಕಾಸು ವಿವರ ಪರಿಶೀಲಿಸಿದಾಗ ಆದಾಯಕ್ಕೂ ಮೀರಿದ ಸಂಪತ್ತು ಗಳಿಕೆಗೆ ಪುರಾವೆಗಳು ಸಿಕ್ಕಿವೆ.
ಶಾಸಕರಾಗುವ ಮುನ್ನ ಬೆಂಗಳೂರಿನ ಸದಾಶಿವನಗರದ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್, ಮೈಸೂರಿನಲ್ಲಿ ನಿವೇಶನ ಹಾಗೂ ಖಾತೆಯಲ್ಲಿ ಕೆಲವು ಲಕ್ಷಗಳ ಲೆಕ್ಕದಲ್ಲಿ ಹಣವಿತ್ತು. ಶಾಸಕರಾದ ನಂತರ ಶಿವಾಜಿನಗರದಲ್ಲಿ 20 ಕೋಟಿಯ ಬಂಗಲೆ ಕಟ್ಟಿಸಿಕೊಂಡಿದ್ದಾರೆ. ಅದೇ ರೀತಿ ಸುಮಾರು 4 ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿದ್ದಾರೆ. ವಿದೇಶ ಪ್ರವಾಸಕ್ಕೆ ಕೋಟ್ಯಂತರ ರು. ಖರ್ಚು ಮಾಡಿದ್ದಾರೆ. ಆದಾಯಕ್ಕಿಂತ ಆಸ್ತಿ ಸಂಪಾದನೆ ಸಂಬಂಧ ಸುಮಾರು 10,000ಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಾಲಾಡಿದ್ದಾರೆ.
ಲೋಕಾಯುಕ್ತ ಪೊಲೀಸರ ಪ್ರಶ್ನೆಗಳು ಸಹಜವಾಗಿವೆ. 15 ಲಕ್ಷ ರೂ ಆದಾಯ ಎನ್ನುತ್ತಿದ್ದ ಜಮೀರ್ ಅಹ್ಮದ್, ಕೋಟಿ ಕೋಟಿ ಖರ್ಚು ಮಾಡಿದ್ದು ಹೇಗೆ..? ಅವರ ಉದ್ಯಮದಲ್ಲಿ 15 ಲಕ್ಷ ಆದಾಯ ಬರುವುದೇ ಕಷ್ಟ. ಹೀಗಿದ್ದರೂ ಕೋಟಿ ಕೋಟಿ ಖರ್ಚು ಮಾಡೋಕೆ ದುಡ್ಡೆಲ್ಲಿಂದ ಬಂತು..? ದಾನ ಮಾಡೋಕೆ ಹಣ ಕೊಟ್ಟವರು ಯಾರು..? ಮೂಲ ಯಾವುದು..? ಸಾರಿಗೆ ಉದ್ಯಮ ಒಂದೇ ತಮ್ಮ ಪ್ರತ್ಯೇಕ ಆದಾಯದ ಮೂಲ ಎನ್ನುವ ಜಮೀರ್, ಕೋವಿಡ್ ಅವಧಿಯಲ್ಲೂ ಕೋಟಿ ಕೋಟಿ ದಾನ ಮಾಡಿದ್ದು ಹೇಗೆ..? ಈ ಪ್ರಶ್ನೆಗಳಿಗೇ ಪೊಲೀಸರು ಉತ್ತರ ಹುಡುಕ್ತಾ ಇರೋದು.



