ಶನಿಯ ಹಿಮ್ಮುಖ ಚಲನೆ (Saturn Retrograde ಅಥವಾ ಶನಿ ವಕ್ರಿ) ಎಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹವು ನೇರವಾಗಿ ಚಲಿಸದೆ, ಭೂಮಿಗೆ ಅತ್ಯಂತ ಸಮೀಪ ಬಂದು ಹಿಂದಕ್ಕೆ ಚಲಿಸುತ್ತಿರುವಂತೆ ಭಾಸವಾಗುವುದು. ಸೈಂಟಿಫಿಕ್ ಆಗಿ ನೋಡಿದರೆ ಖಗೋಳಶಾಸ್ತ್ರದ ಪ್ರಕಾರ (Astronomically), ಶನಿಯ ಹಿಮ್ಮುಖ ಚಲನೆ (Saturn Retrograde) ಎಂದರೆ ಗ್ರಹವು ನಿಜವಾಗಿಯೂ ಬಾಹ್ಯಾಕಾಶದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿ ಹಿಂದಕ್ಕೆ ಚಲಿಸುವುದಲ್ಲ. ಇದು ಕೇವಲ ನಮ್ಮ ಕಣ್ಣಿಗೆ ಕಾಣಿಸುವ ಒಂದು ದೃಷ್ಟಿ ಭ್ರಮೆ (Optical Illusion) ಅಷ್ಟೆ. ಹೀಗಿದ್ದರೂ ಜನ ನಂಬುತ್ತಾರೆ. ವಿಶೇಷ ಎಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈನಲ್ಲಿಯೇ ಶನಿ ಹಿಮ್ಮುಖ ಚಲನೆ ಇದೆ. ಅದರ ಪ್ರಕಾರ 5 ರಾಶಿಯವರಿಗೆ ಅದೃಷ್ಟದ ಸಂಕೇತಗಳಿವೆ.
ಶನಿಯ ವಕ್ರ ಚಲನೆಯು ಎಲ್ಲಾ ರಾಶಿಗಳಿಗೂ ಕಷ್ಟ ನೀಡುವುದಿಲ್ಲ. ಇದು ಕೆಲವು ರಾಶಿಗಳಿಗೆ ಅದೃಷ್ಟ ಹಾಗೂ ಇನ್ನು ಕೆಲವು ರಾಶಿಗಳಿಗೆ ಸವಾಲುಗಳನ್ನು ಒಡ್ಡುತ್ತದೆ. ಭಯ ಪಡಬೇಕಾಗಿಲ್ಲ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರ ಪಂಡಿತರು. ಪ್ರಸ್ತುತ 2026ರಲ್ಲಿ ಶನಿಯು ಜುಲೈ 26 / ಜುಲೈ 27 ರಿಂದ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಆರಂಭಿಸಲಿದ್ದು, ಡಿಸೆಂಬರ್ 10 / ಡಿಸೆಂಬರ್ 11 ರವರೆಗೆ ಒಟ್ಟು 138 ದಿನಗಳ ಕಾಲ ಇದೇ ವಕ್ರ ಸ್ಥಿತಿಯಲ್ಲಿ ಇರಲಿದ್ದಾನೆ.
ಶುಭ ಫಲ ಪಡೆಯುವ ರಾಶಿಗಳು (ಅದೃಷ್ಟದ ಸಮಯ)
- ವೃಷಭ ರಾಶಿ: ದೀರ್ಘಕಾಲದಿಂದ ಬಾಕಿ ಉಳಿದಿದ್ದ ಯೋಜನೆಗಳು ಪುನರಾರಂಭಗೊಳ್ಳುತ್ತವೆ, ಆರ್ಥಿಕ ಸ್ಥಿತಿ ಸುಧಾರಿಸಲಿದೆ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ.
- ಮಿಥುನ ರಾಶಿ: ಉದ್ಯೋಗಿಗಳಿಗೆ ಬಡ್ತಿ ಅಥವಾ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತವೆ ಮತ್ತು ವಿದೇಶಕ್ಕೆ ಹೋಗುವ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ.
- ತುಲಾ ರಾಶಿ: ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು ಸೃಷ್ಟಿಯಾಗಲಿದ್ದು, ಮನೆ ಅಥವಾ ವಾಹನ ಖರೀದಿಯ ಯೋಗವಿದೆ.
- ವೃಶ್ಚಿಕ ರಾಶಿ: ಆಸ್ತಿ ವಿವಾದಗಳು ಬಗೆಹರಿಯುತ್ತವೆ ಹಾಗೂ ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ.
- ಮಕರ ರಾಶಿ: ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶಗಳು ಸಿಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು (ಸವಾಲಿನ ಸಮಯ)
- ಮೀನ ರಾಶಿ: ಶನಿಯು ಇದೇ ರಾಶಿಯಲ್ಲಿ ವಕ್ರಿಯಾಗುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು, ಜೊತೆಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು.
- ಕರ್ಕಾಟಕ ಮತ್ತು ವೃಶ್ಚಿಕ ರಾಶಿ: ಶನಿಯ ಅರ್ಧಾಷ್ಟಮ ಮತ್ತು ಅಷ್ಟಮ ಸ್ಥಿತಿಯಿಂದಾಗಿ ಧನ ನಷ್ಟ ಅಥವಾ ಉದ್ಯೋಗದಲ್ಲಿ ಅಡೆತಡೆಗಳು ಉಂಟಾಗಬಹುದು.
- ಮೇಷ ಮತ್ತು ಕುಂಭ ರಾಶಿ: ಸಾಡೇಸಾತಿ ಪ್ರಭಾವ ಇರುವುದರಿಂದ ಹೂಡಿಕೆ ಹಾಗೂ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು
ಶನಿಯ ವಕ್ರಿ ದೋಷಕ್ಕೆ ಸರಳ ಪರಿಹಾರಗಳು
ಪ್ರತಿದಿನ ಅಥವಾ ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಿಸುವುದು, ಶನಿವಾರ ಸಂಜೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ (Mustard oil) ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು, ಕಪ್ಪು ಎಳ್ಳು, ಕಪ್ಪು ಬಟ್ಟೆ, ಅಥವಾ ಕಬ್ಬಿಣದ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ಹಾಗೂ ಶನಿ ದೇವನು ನ್ಯಾಯದೇವತೆಯಾಗಿರುವುದರಿಂದ, ಯಾರನ್ನೂ ವಂಚಿಸದೆ ಪ್ರಾಮಾಣಿಕವಾಗಿ ಕಠಿಣ ಪರಿಶ್ರಮ ಪಡುವುದು. ಇಷ್ಟೇ ಪರಿಹಾರ.
ಸೈಂಟಿಫಿಕ್ ವಿಷಯವೂ ಗೊತ್ತಿರಲಿ : ಸೈನ್ಸ್ ಪ್ರಕಾರ . ಇದು ಕೇವಲ ನಮ್ಮ ಕಣ್ಣಿಗೆ ಕಾಣಿಸುವ ಒಂದು ದೃಷ್ಟಿ ಭ್ರಮೆ (Optical Illusion) ಅಷ್ಟೆ. ಸೂರ್ಯನಿಗೆ ಹತ್ತಿರವಿರುವ ಭೂಮಿ, ಸೂರ್ಯನ ಸುತ್ತ ಒಂದು ಸುತ್ತು ಬರಲು ಒಂದು ವರ್ಷ ತೆಗೆದುಕೊಂಡರೆ, ಸೂರ್ಯನಿಂದ ದೂರವಿರುವ ಶನಿ ಗ್ರಹಕ್ಕೆ ಒಂದು ಸುತ್ತು ಸುತ್ತುವುದಕ್ಕೆ ಸುಮಾರು 29.5 ವರ್ಷಗಳು ಬೇಕು. ಭೂಮಿ ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ಚಲಿಸುವಾಗ, ಭೂಮಿ ಮತ್ತು ಶನಿ ಒಂದು ಹಂತದಲ್ಲಿ ಪರಸ್ಪರ ಹತ್ತಿರಕ್ಕೆ ಬರುತ್ತವೆ. ಶನಿ ನಿಧಾನವಾಗಿ ಚಲಿಸುವ ಕಾರಣ, ಭೂಮಿ ಶನಿಯನ್ನು ಓವರ್ ಟೇಕ್ ಮಾಡುತ್ತದೆ. ಹಾಗೆ ಓವರ್ ಟೇಕ್ ಮಾಡುವ ಸಮಯವೇ ಈ ಶನಿ ಹಿಮ್ಮುಖವಾಗಿ ಚಲಿಸುವ ಸಮಯ. ಶನಿಯನ್ನು ದಾಟಿ ಮುಂದೆ ಹೋಗುವುದಕ್ಕೆ 138 ದಿನಗಳ ಕಾಲ ತೆಗೆದುಕೊಳ್ಳತ್ತದೆ. ಇದು ಪ್ರತಿ ವರ್ಷವೂ ಆಗುತ್ತದೆ.
ಇನ್ನೂ ಸರಳವಾಗಿ ಹೇಳಬೇಕು ಎಂದರೆ ಎರಡು ವಾಹನಗಳು ಒಂದರ ಪಕ್ಕ ಒಂದು ಸಮಾನಾಂತರವಾಗಿ (ರೈಲುಗಳನ್ನು ಕಲ್ಪನೆ ಮಾಡಿಕೊಳ್ಳಿ) ಹೋಗುತ್ತಾ ಒಂದು ರೈಲು ಇನ್ನೊಂದು ರೈಲನ್ನು ಓವರ್ ಟೇಕ್ ಮಾಡುವಾಗ ಸ್ಲೋ ಹೋಗುತ್ತಿರುವ ರೈಲು ಹಿಂದಕ್ಕೆ ಹೋದಂತಹ ಅನುಭವವಾಗುತ್ತದೆ. ಅದರ ಅರ್ಥ ರೈಲು ಹಿಂದಕ್ಕೆ ಹೋಗುತ್ತಿರುವುದಿಲ್ಲ, ಅದೂ ಕೂಡ ಮುಂದಕ್ಕೇ ಚಲಿಸುತ್ತಿರುತ್ತದೆ. ನಿಮ್ಮ ರೈಲಿನ ವೇಗ ಹೆಚ್ಚಿರುವುದರಿಂದ ಅದು ಹಾಗೆ ಕಾಣುತ್ತದೆ. ಶನಿಯ ಹಿಮ್ಮುಖ ಚಲನೆಯೂ ಸಹ ಇದೇ ತತ್ವದ ಮೇಲೆ ಕೆಲಸ ಮಾಡುತ್ತದೆ.



