ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಚರ್ಚೆಯಲ್ಲಿದ್ದ ಪ್ರಕರಣವಿದು. ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದ. ವಯಸ್ಸು ಚಿಕ್ಕದು. ಪ್ರೇಮ ಪ್ರಕರಣವಂತೆ. ಆಧ್ಯಾತ್ಮದ ಮೊರೆ ಹೊಕ್ಕಿದ್ದಾನಂತೆ. ಲವ್ ಫೇಲ್ಯೂರ್. ಕುಟುಂಬದೊಳಗೆ ಜಗಳ.. ಹೀಗೆ ಎಲ್ಲವೂ ಸುದ್ದಿಗಳೇ. ರೇಣುಕಾಚಾರ್ಯ ಅವರಂತೂ ಕಣ್ಣೀರು ಸುರಿಸುತ್ತಿದ್ದರು. ಸ್ವಂತ ಅಣ್ಣನ ಮಗ. ಪ್ರೀತಿಯಿಂದ ಎತ್ತಿ ಅಡಿಸಿ ಬೆಳೆಸಿದ್ದ ಹುಡುಗ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಕಣ್ಣೀರು ಸಹಜವೇ. ಸತತ 4 ದಿನಗಳ ಹುಡುಕಾಟದ ನಂತರ ಕೊನೆಗೂ ಆತ ಸಿಕ್ಕಿದ್ದು ಶವವಾಗಿ.
ರೇಣುಕಾಚಾರ್ಯ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ರೇಣುಕಾಚಾರ್ಯ ಅವರಿಗೆ 6 ಜನ ಅಣ್ಣಂದಿರು. ಇವರೇ ಕೊನೆಯವರು. ಈ ನಿಗೂಢ ಸಾವು ಹುಟ್ಟಿಸಿದ್ದು ಕೇವಲ ಪ್ರಶ್ನೆಗಳನ್ನು. ಚಂದ್ರು ಶವ ಪತ್ತೆ ಬೆನ್ನಲ್ಲೇ ಹತ್ತಾರು ಅನುಮಾನಗಳು ಮೂಡಿದವು.
ಚಂದ್ರು ಸಾವು ಅಪಘಾತವಾ ? ಕೊಲೆಯಾ ? ಅದಕ್ಕೆ ಕಾರಣವೂ ಇತ್ತು. ಆತ ಕಿಡ್ನಾಪ್ ಆಗಿರಬಹುದೆಂದು ರೇಣುಕಾಚಾರ್ಯ ಶಂಕಿಸಿದ್ದರು. ಹಾಗಾದರೆ ಕಿಡ್ನಾಪ್ ಮಾಡಿದ್ದವರು ಯಾವಾಗ ಇಡೀ ರಾಜ್ಯ ತಮ್ಮ ಹಿಂದೆ ಬಿಂದಿದ್ದಾರೆಂದು ಗೊತ್ತಾಯ್ತೊ.. ಆಗ ಕೊಲೆ ಮಾಡಿ ಅಪಘಾತದ ದೃಶ್ಯ ಸೃಷ್ಟಿಸಿದರಾ ಅನ್ನೋದು ಒಂದು ಅನುಮಾನ.
ಅಪಘಾತವಾಗಿ ಚಂದ್ರು ಕಾರು ಕಾಲುವೆಗೆ ಬಿತ್ತಾ ?
ಇಲ್ಲಿ ಇನ್ನೂ ಒಂದು ಅನುಮಾನ. ಕಾರಿನಲ್ಲಿದ್ದ ಎರಡು ಏರ್ ಬ್ಯಾಗ್ ಓಪನ್ ಆಗಿವೆ. ಒಬ್ಬನೇನೋ ಚಂದ್ರಶೇಖರ್. ಮತ್ತೊಬ್ಬ ಯಾರು? ಉತ್ತರ ಗೊತ್ತಿಲ್ಲ.
ಏರ್ ಬ್ಯಾಗ್ ಓಪನ್ ಆಗಿದೆಯೆಂದರೆ ಎಲ್ಲಾದರೂ ಗುದ್ದಿರಬೇಕು. ಆದರೆ ಬಿದ್ದ ಕಾಲುವೆಯ ಬದಿ ಕಾರು ಗುದ್ದಿದ ಕುರುಹುಗಳಿಲ್ಲ. ಹಾಗಾದರೆ ಏರ್ ಬ್ಯಾಗ್ ಓಪನ್ ಆಗಿದ್ದೇಗೆ?
ಕಾರಿನ ಮುಂದಿನ ಗಾಜು ಪುಡಿಪುಡಿಯಾಗಿದೆ. ಹಾಗಾದರೆ ಕಾಲುವೆಗೆ ಬೀಳುವ ಮುನ್ನವೇ ಎಲ್ಲೋ ಗುದ್ದಿ ಅಥವಾ ನೀರಿನಲ್ಲಿ ಬಂಡೆಯಿದ್ದು ಗಾಜು ಪುಡಿಯಾಗಿರಬೇಕು ಎನ್ನುವ ವಾದವಿದೆ. ಆದರೆ, ಅದು ನದಿಯೋ, ಕೆರೆಯೋ ಅಲ್ಲ. ಕಾಲುವೆ. ಬಂಡೆಗಳಿದ್ದವಾ? ಗೊತ್ತಿಲ್ಲ.
ಚಂದ್ರು ಶವದ ಎದುರು ಶಾಸಕ ರೇಣುಕಾಚಾರ್ಯ ಕಣ್ಣೀರು ಹಾಕುತ್ತಿದ್ದರು. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ ಎಂದು ರೋದಿಸುತ್ತಿದ್ದರು. ಮಗನ ಶವದ ಎದುರು ತಂದೆ ರಮೇಶ್ (ರೇಣುಕಾಚಾರ್ಯ ಅಣ್ಣ) ತಾಯಿ ಉಮಾ ಕಣ್ಣೀರು ಹಾಕುತ್ತಿದ್ದರು.
ಭಾನುವಾರ ನಾಪತ್ತೆಯಾಗಿದ್ದ ಚಂದ್ರಶೇಖರ್ ಮೊಬೈಲ್ ಸೋಮವಾರ ಬೆಳಗ್ಗೆ 7 ಗಂಟೆ ಹೊತ್ತಿಗೆಲ್ಲ ಸ್ವಿಚ್ ಆಫ್ ಆಗಿತ್ತು. ಸೋಮವಾರ ರಾತ್ರಿ ಸುರಹೊನ್ನೆ ಬಳಿ ಕಾಣಿಸಿಕೊಂಡಿದ್ದ ಕಾರು ಕಾಣಿಸಿಕೊಂಡಿತ್ತು. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಇನ್ನೊಬ್ಬ ಯಾರು? ಎಲ್ಲಿ ಹೋದ?
ಚಂದ್ರು ಸಾವು ಅಪಘಾತವಾ ? ಕೊಲೆಯಾ ? ಅಪಘಾತವಾಗಿ ಚಂದ್ರು ಕಾರು ಕಾಲುವೆಗೆ ಬಿತ್ತಾ ? ಅಥವಾ ಕೊಲೆಯಾದ ಮೇಲೆ ಕಾರು ಕಾಲುವೆಗೆ ಬಿತ್ತಾ? ಕಿಡ್ನಾಪ್ ಆಗಿ ಕೊಲೆಯಾದರಾ? ಮನೆ ಬಿಟ್ಟು ಹೊರಟು ಖಿನ್ನತೆಯಲ್ಲಿ ಚಂದ್ರಶೇಖರ್ ಅಪಘಾತ ಮಾಡಿಕೊಂಡರಾ? ತುಂಗ ಮೇಲ್ದಂಡೆ ಕಾಲುವೆಯಲ್ಲಿ ಹಲವು ರಹಸ್ಯಗಳು ಅಡಗಿವೆ. KA 17- MA 2534 ಸಂಖ್ಯೆಯ ಬಿಳುಪು ಬಣ್ಣದ ಕಾರಿನಲ್ಲಿ ಅದೆಷ್ಟು ಕಪ್ಪು ಸತ್ಯಗಳು ಬಚ್ಚಿಟ್ಟುಕೊಂಡಿವೆಯೋ..?





