ರಾಜ್ಯ ಬಿಜೆಪಿಯಲ್ಲಿ ನಡೆದ ಅಡ್ಡ ಮತದಾನ ಪ್ರಕ್ರಿಯೆ ಭಾರೀ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ರಾಜ್ಯಾಧ್ಯಕ್ಷರ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂಬ ಸೂಚನೆ ಬರುತ್ತಿದೆ. ಅದರ ಮೊದಲ ಭಾಗವಾಗಿ ಹಮ್ಮಿಕೊಂಡಿರುವ ಬದಲಾವಣೆಗಳು ಕೆಲವರಿಗೆ ಸಿಹಿ, ಕೆಲವರಿಗೆ ಕಹಿಯಾಗಬಹುದು. ಈ ವೇಳೆ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳುವ ಮೊದಲು ಹೈಕಮಾಂಡ್‌ಗೆ ಕಾಡುತ್ತಿರುವುದು ಯಡಿಯೂರಪ್ಪ ಫ್ಯಾಕ್ಟರ್. ಆದರೆ ಹುದ್ದೆಯನ್ನು ಕೊಟ್ಟು ಅಧಿಕಾರ ಕೊಡದೆ ಆಟವಾಡುವುದಕ್ಕಿಂತ ಮತ್ತೊಮ್ಮೆ ದೂದ್ ಕಾ ದೂದ್ ಪಾನೀ ಕಾ ಪಾನಿ ಆಗಿಬಿಡಲಿ ಎನ್ನುವವರಿಗೇನೂ ಕಮ್ಮಿ ಇಲ್ಲ. ಬಿಜೆಪಿಯಲ್ಲಿ ಅದೇನೇ ಅಳೆದು ತೂಗಿ ನೋಡಿದರೂ ಇಡೀ ರಾಜ್ಯಕ್ಕೆ ಪರಿಚಯ ಇರುವ ಇನ್ನೊಬ್ಬ ʻಸ್ಟೇಟ್ ಲೀಡರ್ʼ ಕಾಣಿಸುತ್ತಿಲ್ಲ.
ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿದ್ದು, ಪ್ರಸ್ತುತ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಹಿರಿಯ ನಾಯಕ ವಿ ಸೋಮಣ್ಣ ಅವರನ್ನು ಕರೆತರುವ ಸೂಚನೆಗಳಿವೆ. ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಹಿರಿಯ ನಾಯಕ ಎನ್ನುವುದು ಸೋಮಣ್ಣ ಅವರಿಗೆ ಇರುವ ಪ್ಲಸ್ ಪಾಯಿಂಟ್.
ಆದರೆ ಮೈನಸ್ ಪಾಯಿಂಟ್ ಎಂದರೆ ಒಂದಾನೊಂದು ಕಾಲದಲ್ಲಿ ಯಡಿಯೂರಪ್ಪನವರ ಟೀಂನಲ್ಲೇ ಇದ್ದ ಸೋಮಣ್ಣ, ಈಗ ಯಡಿಯೂರಪ್ಪ ವಿರೋಧಿ ಟೀಂಗೆ ಹಾಲು ನೀರು ಸುರಿಯುತ್ತಿದ್ದಾರೆ. ಇದು ಡ್ಯಾಮೇಜ್ ಅಗಬಹುದು. ಜೊತೆಗೆ ವಿ ಸೋಮಣ್ಣ ಅವರಿಗೀಗ 75 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಚುರುಕಾಗಿ ಓಡಾಡುವುದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಇದೆಲ್ಲದರ ಜೊತೆಗೆ ವಿ ಸೋಮಣ್ಣ ಹೊರಗೆ ಏನೇ ಮಾತನಾಡಿದರೂ, ಒಳಗೆ ವಿಜಯೇಂದ್ರ ವಿರೋಧಿ ಟೀಂಗೆ ಹಾಲು ತುಪ್ಪ ಬಿಟ್ಟಿದ್ದರು ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ.
ಇದೆಲ್ಲವೂ ಹೈಕಮಾಂಡ್‌ಗೆ ಗೊತ್ತು. ವಿಜಯೇಂದ್ರ ಅವರಿಗೆ ಪೋಸ್ಟು ಕೊಟ್ಟು, ಅಧಿಕಾರ ಕೊಡದೆ ಆಟವಾಡಿಸಿರುವುದು ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆದರೆ ಯಡಿಯೂರಪ್ಪ ಹೆಸರಿನ ಪ್ರಭಾವಳಿಯಿಂದ ಪಕ್ಷವನ್ನು ಹೊರಗೆ ತರಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು, ಈ ಬಾರಿ ಸೋಮಣ್ಣ ಅವರಿಗೆ ಹೊಣೆಗಾರಿಕೆ ವಹಿಸಿದ್ದಾರೆ. ಪ್ರಾಬ್ಲಂ ಏನೆಂದರೆ ವಿ ಸೋಮಣ್ಣ ಕೂಡಾ ಮೂಲತಃ ಬಿಜೆಪಿಯವರಲ್ಲ. ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ನಾಯಕ. ʻಆಪರೇಷನ್ ಕಮಲʼದ ಕುಡಿಯಾಗಿರುವ ವಿ ಸೋಮಣ್ಣ ಪಕ್ಷವನ್ನು ಹೇಗೆ ನಿಭಾಯಿಸಬಲ್ಲರು ಎನ್ನುವುದೇ ಕುತೂಹಲ.
ಅಂದಹಾಗೆ ಮೋದಿ ಕ್ಯಾಬಿನೆಟ್ ವಿಸ್ತರಣೆಯಾಗುತ್ತಿದೆ. ಆ ಸಂಪುಟ ರಚನೆ ಹೊತ್ತಿಗೆ ವಿ ಸೋಮಣ್ಣ ರಾಜೀನಾಮೆ ನೀಡಿದರೆ ಅದು ಮೊದಲ ಸೂಚನೆ. ಏಕೆಂದರೆ ಕೇಂದ್ರ ಸಚಿವರಾಗಿ ಶತ್ರುಗಳೂ ಕೂಡಾ ಮೆಚ್ಚುವಂತೆ ಕೆಲಸ ಮಾಡಿದ್ದಾರೆ ವಿ ಸೋಮಣ್ಣ. ಎರಡನೆಯದ್ದು ಬಿ ವೈ ರಾಘವೇಂದ್ರ ಅವರದ್ದು. ಅವರೇನಾದರೂ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದರೆ ಅನುಮಾನವೇ ಇಲ್ಲ, ವಿಜಯೇಂದ್ರ ಅವರ ಎಕ್ಸಿಟ್ ಪ್ಲಾನ್ ರೆಡಿ ಎಂದೇ ಅರ್ಥ.



