ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರೇ, ಈ ಸುದ್ದಿಯನ್ನು ಮಿಸ್ ಮಾಡದೇ ನೋಡಿ. ನಿಮ್ಮ ಮನೆಯ ಗ್ಯಾಸ್ ಕನೆಕ್ಷನ್‌ಗೆ ಇನ್ನೂ E-KYC ಆಗಿಲ್ವಾ? ಹಾಗಿದ್ದರೆ ತಡ ಮಾಡದೇ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಒಂದು ಸಿಲಿಂಡರ್‌ಗೆ ದುಬಾರಿ ಬೆಲೆ ನೀಡಬೇಕಾದೀತು. ಗೃಹ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ E-KYC ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇತ್ತೀಚಿನ ತೈಲ ಕಂಪನಿಗಳ ಆದೇಶದ ಪ್ರಕಾರ, ಬಾಕಿ ಇರುವ ಗ್ರಾಹಕರು ಆಗಸ್ಟ್ 16, 2026 ರೊಳಗೆ ತಮ್ಮ ಇ-ಕೆವೈಸಿ ಪೂರ್ಣಗೊಳಿಸುವುದು ಅತ್ಯಗತ್ಯ. ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಮನೆಯಲ್ಲೇ ಕುಳಿತುಕೊಂಡೂ ಮಾಡಬಹುದು.
ಮೊಬೈಲ್ ಮೂಲಕ ಮನೆಯಲ್ಲೇ E-KYC ಮಾಡುವ ವಿಧಾನ:
ನಿಮ್ಮ ಗ್ಯಾಸ್ ಸಂಪರ್ಕ ಯಾರ ಹೆಸರಿನಲ್ಲಿದೆಯೋ, ಅವರೇ ಮೊಬೈಲ್‌ನಲ್ಲಿ ಮುಖದ ಗುರುತು (Face Scan) ನೀಡುವ ಮೂಲಕ 5 ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಸಬಹುದು.
ಅಗತ್ಯವಿರುವ ಆ್ಯಪ್‌ಗಳು:
ನಿಮ್ಮ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ ಈ ಕೆಳಗಿನ ಎರಡು ಆಪ್‌ಗಳನ್ನು ಡೌನ್‌ಲೋಡ್ ಮಾಡಿ:
Aadhaar FaceRD ಆ್ಯಪ್ (ಭಾರತ ಸರ್ಕಾರದ ಅಧಿಕೃತ ಫೇಸ್ ಸ್ಕ್ಯಾನಿಂಗ್ ಆ್ಯಪ್).
ನಿಮ್ಮ ಗ್ಯಾಸ್ ಕಂಪನಿಯ ಆ್ಯಪ್: IndianOil ONE (ಇಂಡೇನ್ ಗ್ರಾಹಕರಿಗೆ), HP Pay (ಎಚ್‌ಪಿ ಗ್ರಾಹಕರಿಗೆ) ಅಥವಾ Hello BPCL (ಭಾರತ್ ಗ್ಯಾಸ್ ಗ್ರಾಹಕರಿಗೆ)
ಲಾಗಿನ್ ಮಾಡಿ: ನಿಮ್ಮ ಗ್ಯಾಸ್ ಕಂಪನಿಯ ಆ್ಯಪ್ ಓಪನ್ ಮಾಡಿ, ಗ್ಯಾಸ್ ಕನೆಕ್ಷನ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಒಟಿಪಿ (OTP) ಬಳಸಿ ಸೈನ್-ಇನ್ ಆಗಿ
E-KYC ಆಯ್ಕೆ ಮಾಡಿ: ಆ್ಯಪ್‌ನಲ್ಲಿನ ಪ್ರೊಫೈಲ್ ಅಥವಾ ಎಲ್‌ಪಿಜಿ ಸರ್ವಿಸಸ್ ವಿಭಾಗಕ್ಕೆ ಹೋಗಿ ‘e-KYC’ ಅಥವಾ ‘Aadhaar Verification’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಆಧಾರ್ ವಿವರ ನೀಡಿ: ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಯಮಗಳಿಗೆ ಒಪ್ಪಿಗೆ (Consent) ನೀಡಿ.
ಫೇಸ್ ಸ್ಕ್ಯಾನ್ ಮಾಡಿ: ಈಗ ‘Capture Face’ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಫೇಸ್ ಆರ್‌ಡಿ ಆ್ಯಪ್ ತೆರೆದುಕೊಳ್ಳುತ್ತದೆ. ಕ್ಯಾಮೆರಾ ಮುಂದೆ ಕಣ್ಣುಗಳನ್ನು ಮಿಟುಕಿಸುವ ಮೂಲಕ ಕನೆಕ್ಷನ್ ಹೊಂದಿರುವವರ ಮುಖವನ್ನು ಸ್ಕ್ಯಾನ್ ಮಾಡಿ
ಮುಖದ ಗುರುತು ಯಶಸ್ವಿಯಾದ ನಂತರ ಪರದೆಯ ಮೇಲಿನ ವಿವರಗಳನ್ನು ಪರಿಶೀಲಿಸಿ ‘Submit’ ಬಟನ್ ಒತ್ತಿ. 24 ರಿಂದ 48 ಗಂಟೆಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಅನುಮೋದನೆಗೊಳ್ಳುತ್ತದೆ.
ಬೇರೆಯ ವಿಧಾನಗಳು :
ಗ್ಯಾಸ್ ವಿತರಕರ ಕಚೇರಿ (Gas Agency): ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್‌ಬುಕ್ (Consumer ID) ತೆಗೆದುಕೊಂಡು ಹೋಗಿ ಅಲ್ಲಿನ ಬಯೋಮೆಟ್ರಿಕ್ ಯಂತ್ರದಲ್ಲಿ ಬೆರಳಚ್ಚು (Thumbprint) ನೀಡುವ ಮೂಲಕ ಕೆವೈಸಿ ಮಾಡಿಸಬಹುದು
ಸಿಲಿಂಡರ್ ಡೆಲಿವರಿ ಸಿಬ್ಬಂದಿ: ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ಡೆಲಿವರಿ ಸಿಬ್ಬಂದಿ ಬಳಿ ಇರುವ ಆ್ಯಪ್ (ಉದಾಹರಣೆಗೆ HP ಯ Vitaran ಆ್ಯಪ್) ಮೂಲಕವೂ ನೀವು ಮನೆಯ ಬಾಗಿಲಲ್ಲೇ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಬಹುದು
ನಿಮ್ಮ ಗ್ಯಾಸ್ ಇ-ಕೆವೈಸಿ ಇನ್ನು ಬಾಕಿ ಇದ್ದರೆ, ಕೊನೆಯ ದಿನದ ಗಡಿಬಿಡಿಯನ್ನು ತಪ್ಪಿಸಲು ಇಂದೇ ಈ ಸರಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಹೆಚ್ಚಿನ ನೆರವಿಗಾಗಿ ಅಧಿಕೃತ ಉಚಿತ ಸಹಾಯವಾಣಿ ಸಂಖ್ಯೆ 1800-2333-555 ಗೆ ಕರೆ ಮಾಡಬಹುದು.
ಇ-ಕೆವೈಸಿ ಮಾಡಿಸದೇ ಹೋದರೆ..
ಆಗಸ್ಟ್ 16ರ ಬಳಿಕವೂ E-KYC ಮಾಡಿಸದಿದ್ದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನಿರ್ಬಂಧಿಸಬಹುದು. ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಬಹುದು. ಸದ್ಯ ಸಬ್ಸಿಡಿ ದರದಲ್ಲಿ ದೊರೆಯುತ್ತಿರುವ ಗೃಹ ಬಳಕೆಯ ಸಿಲಿಂಡರ್‌ನ ಬೆಲೆ ಸುಮಾರು 945 ರೂ. ಇದೆ. ಆದರೆ E-KYC ಮಾಡಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಂಡರೆ, ಅದೇ ಸಿಲಿಂಡರ್‌ಗೆ ಮಾರುಕಟ್ಟೆ ದರದಂತೆ ಸುಮಾರು 2,108 ರೂ. ಪಾವತಿಸಬೇಕಾಗಬಹುದು.
ಹೀಗಾಗಿ ಗ್ರಾಹಕರು ಆಗಸ್ಟ್ 16ರೊಳಗೆ ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ E-KYC ಮಾಡಿಸಿಕೊಳ್ಳಬಹುದು. ಇಲ್ಲವೇ ಲಭ್ಯವಿರುವ ಅಧಿಕೃತ ಆನ್‌ಲೈನ್ ಅಥವಾ ಮೊಬೈಲ್ ಸೇವೆಯ ಮೂಲಕವೂ E-KYC ಪೂರ್ಣಗೊಳಿಸಿಕೊಳ್ಳಬಹುದು.



