ಬಿಡದಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೆ ಜೆಡಿಎಸ್ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆಯಿಂದ ವಿಜಯೇಂದ್ರ ದೂರವೇ ಉಳಿದು, ಕೇವಲ ನೈತಿಕ ಬೆಂಬಲ ಘೋಷಿಸಿದ್ದಾರೆ. ಇದು ಹೊಸದೇನಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದೆ. ಹೋರಾಟಗಳಲ್ಲಿಯೂ ಹೊಂದಾಣಿಕೆ ಇರಬೇಕು ಎಂದು ಬಯಸುವುದು ಸಹಜ. ಆದರೆ ಬಿಜೆಪಿ ಉತ್ತರ ದಿಕ್ಕಾದರೆ ಜೆಡಿಎಸ್ ದಕ್ಷಿಣ ದಿಕ್ಕಾಗಿದೆ. ಸಮಸ್ಯೆಯ ಮೂಲ ಏನು ಎಂದು ನೋಡಿದರೆ ಅಲ್ಲಿ ಎದ್ದು ಕಾಣುತ್ತಿರುವುದು ಅಹಂ. ಹೌದು, ಕುಮಾರಸ್ವಾಮಿ ಮತ್ತು ವಿಜಯೇಂದ್ರರ ನಡುವಿನ ಅಹಂ ಜೊತೆಗೆ ಇನ್ನೊಂದು ಪಕ್ಷದ ಆಂತರಿಕ ವಿಷಯದೊಳಗೆ ಅನಗತ್ಯವಾಗಿ ಎಂಟ್ರಿ ಕೊಡುತ್ತಿರುವುದು ಎದ್ದು ಕಾಣುತ್ತಿದೆ.
ಬಿಡದಿ ಯೋಜನೆ ವಿರೋಧಿ ಪಾದಯಾತ್ರೆಯನ್ನೇ ತೆಗೆದುಕೊಂಡರೆ ಇದು ಒಟ್ಟಾಗಿ ನಡೆಯಬೇಕಿತ್ತು ಎನ್ನುವುದು ಸತ್ಯ. ವಿಜಯೇಂದ್ರ ಅವರು ಏಕಾಏಕಿ ಪಾದಯಾತ್ರೆ ಘೋಷಿಸಿದ ಕಾರಣಕ್ಕೆ, ಜೆಡಿಎಸ್ ಸಿಟ್ಟಾಯ್ತು. ದಿನಾಂಕ ಸಮೇತ ಘೋಷಣೆ ಮಾಡಿ ಪಾದಯಾತ್ರೆಯನ್ನು ಶುರು ಮಾಡಿತು ಎನ್ನುವ ವರದಿಗಳು ಕಾಣುತ್ತಿವೆ. ಆದರೆ ಬಿಡದಿಯಲ್ಲಿ ಈಗಾಗಲೇ ಒಮ್ಮೆ ಪಾದಯಾತ್ರೆಯನ್ನು ಮಾಡಿರುವ ಜೆಡಿಎಸ್, ಅದಕ್ಕೆ ಬಿಜೆಪಿಯವರನ್ನು ಕೇಳಿತ್ತೇ ಎಂಬ ಬಗ್ಗೆ ಕೇಳಿದರೆ ಉತ್ತರ ಇಲ್ಲ ಎಂದೇ ಹೇಳಬೇಕು. ವಿಜಯೇಂದ್ರ ಘೋಷಿಸಿದ್ದು ತಪ್ಪಾದರೆ, ಅದಕ್ಕೂ ಮೊದಲೇ ನಿಖಿಲ್ ಕುಮಾರಸ್ವಾಮಿ ಏಕಾಏಕಿ ಪಾದಯಾತ್ರೆ ಮಾಡಿದ್ದೂ ತಪ್ಪಲ್ಲವೇ..? ಅದಕ್ಕೆ ಉತ್ತರ ಸಿಗುತ್ತಿಲ್ಲ.
ಇನ್ನು ವರ್ಷಗಳ ಹಿಂದೆ ಮುಡಾ ಪಾದಯಾತ್ರೆ ಹೋರಾಟವನ್ನು ಹಳ್ಳ ಹಿಡಿಸಿದ್ದರಲ್ಲಿ ಜೆಡಿಎಸ್ ಪಾಲು ದೊಡ್ಡದು. ಸಿದ್ದರಾಮಯ್ಯ ಪರ ನಿಂತಿದ್ದ ಜೆಡಿಎಸ್‌ನ ಜಿಟಿ ದೇವೇಗೌಡರನ್ನು ಮೌನವಾಗಿಸಲು ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಪಾದಯಾತ್ರೆಗೆ ಅಪ್ಪಣೆ ಕೊಡಬೇಕಾಗಿದ್ದ ಹೈಕಮಾಂಡ್ ನಾಯಕರ ಮೇಲೆ ಪ್ರಭಾವ ಬೀರಿ, ಕಡೆಯ ಕ್ಷಣದವರೆಗೂ ತಡೆ ಹಿಡಿದಿದ್ದರು. ಬಿಜೆಪಿಯವರು ಏನು ಮಾಡಬೇಕು ಎಂದರೂ ಕುಮಾರಸ್ವಾಮಿಯವರ ಅನುಮತಿ ಬೇಕು ಎನ್ನುವುದಾದರೆ ತಮ್ಮ ಪಕ್ಷ ಇರುವುದಾದರೂ ಏಕೆ ಎಂಬ ಪ್ರಶ್ನೆ ವಿಜಯೇಂದ್ರ ಅವರಿಗೆ ಬಂದರೆ ತಪ್ಪೇನಿದೆ..?
ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿಯ ನಾಯಕರು ಕುಮಾರಸ್ವಾಮಿ ಜೊತೆ ಕಾಂಟಾಕ್ಟ್‌ನಲ್ಲಿರುವುದು ಗುಟ್ಟೇನಲ್ಲ. ವಿಜಯೇಂದ್ರ ಅವರಿಗೆ ಅದನ್ನು ಕೇಳುವುದಕ್ಕೂ ಆಗುತ್ತಿಲ್ಲ. ಸುಮ್ಮನಿರುವುದಕ್ಕೂ ಆಗುತ್ತಿಲ್ಲ. ಈ ಅಸಹಾಯಕತೆಯನ್ನು ಕುಮಾರಸ್ವಾಮಿ ಮಿಸ್ ಯೂಸ್ ಮಾಡಕೊಂಡಂತೆ ಅಲ್ಲವೇ..?
ಇನ್ನು ವಿಧಾನಸಭೆಯಲ್ಲಿ ನಡೆಯುವ ಪ್ರತಿಭಟನೆಗಳ ವಿಷಯದಲ್ಲೂ ಅಷ್ಟೇ.. ಜೆಡಿಎಸ್ ಶಾಸಕರ ಹೋರಾಟಕ್ಕೆ ಬಿಜೆಪಿಯವರು ಬೆಂಬಲ ನೀಡಿದರೂ, ಬಿಜೆಪಿಯ ಹೋರಾಟಕ್ಕೆ ಜೆಡಿಎಸ್ ಸಪೋರ್ಟ್ ನಿರೀಕ್ಷೆಯಂತೆ ಸಿಗುತ್ತಿಲ್ಲ. ಆದರೆ ಮಾಧ್ಯಮಗಳಲ್ಲಿ ಬಿಜೆಪಿಯವರದ್ದೇ ಅಪರಾಧ ಎಂಬಂತೆ ಬಿಂಬಿಸುತ್ತಿರುವುದೂ ಸತ್ಯ.
ವಿಧಾನಪರಿಷತ್ ಅಭ್ಯರ್ಥಿಗಳ ವಿಚಾರದಲ್ಲೂ ಅಷ್ಟೇ. ಜೆಡಿಎಸ್ ಶಾಸಕರು ಕೂಡಾ, ಜೆಡಿಎಸ್ ಅಭ್ಯರ್ಥಿಗೇ ವೋಟ್ ಹಾಕಿಲ್ಲ ಎನ್ನುವುದು ಜಗಜ್ಜಾಹೀರಾಯ್ತು. ಆದರೆ ಕುಮಾರಸ್ವಾಮಿ ಕೂಡಾ ಕುಟುಕಿದ್ದು ಮಾತ್ರ ಬಿಜೆಪಿಯನ್ನು. ಇನ್ನು ಜೆಡಿಎಸ್ ಪ್ರಬಲವಾಗಿರುವ ಹಾಸನ, ಮಂಡ್ಯ, ರಾಮನಗರಗಳಲ್ಲಿ ಬಿಜೆಪಿಯವರನ್ನು ದೂರ ಇಟ್ಟಿರುವುದು ಗುಟ್ಟಿನ ವಿಷಯವೂ ಅಲ್ಲ.
ಕರ್ನಾಟಕ ಬಿಜೆಪಿ ಕೂಡಾ ತಾನು ಹೇಳಿದಂತೆ ಕೇಳಬೇಕು ಎಂದು ಹಠ ಹಿಡಿಯುವ ಕುಮಾರಸ್ವಾಮಿ, ಸ್ವತಃ ಹೊಂದಾಣಿಕೆಯ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ. ಹೈಕಮಾಂಡ್ ನಾಯಕರ ಜೊತೆ ಉತ್ತಮ ಸಂಪರ್ಕ, ಸಂಬಂಧ ಇರಬಹುದು. ಆದರೆ ಅಖಾಡದಲ್ಲಿ ಕೆಲಸ ಮಾಡುವುದು ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೇ ಹೊರತು, ಹೈಕಮಾಂಡ್ ನಾಯಕರಲ್ಲ. ಕುಮಾರಸ್ವಾಮಿಯ ಹಠದ ಧೋರಣೆ ಮತ್ತು ವಿಜಯೇಂದ್ರರ ನಮ್ಮದು ದೊಡ್ಡ ಪಕ್ಷ ಎನ್ನುವ ಧೋರಣೆಯೇ ಮೈತ್ರಿಗೆ ಪ್ರಾಬ್ಲಂ ಆಗಿದೆ ಎನ್ನುವುದು ಸತ್ಯ.



