ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ನಾಯಕ. ವಿಶೇಷ ಎಂದರೆ ಯಾವುದೇ ಬ್ಯಾಕ್ ಗ್ರೌಂಡ ಇಲ್ಲದೆ ಬೆಳೆದಿರುವ ಮುತ್ಸದ್ದಿ. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದಕ್ಕೆ ಕಾರಣಗಳು ಹಲವಾರಿದ್ದರೂ, ಪ್ರಮುಖವಾಗಿ ಕೇಳಿರುವುದು ದೇವೇಗೌಡರ ಪುತ್ರ ಪ್ರೇಮ. ದೇವೇಗೌಡರು ತಮ್ಮ ಪುತ್ರ ಸಿಎಂ ಆಗಬೇಕು ಎಂದು ಆಸೆ ಇಟ್ಟುಕೊಂಡು ಪಕ್ಷದಲ್ಲಿರುವ ನಾಯಕರನ್ನೆಲ್ಲ ಸೈಡ್ ಲೈನ್ ಮಾಡೋಕೆ ಹೊರಟರು. ಇದನ್ನು ತಡೆಯಲು ಸಾಧ್ಯವಿಲ್ಲದೆ ಪಕ್ಷವನ್ನು ಬಿಡಬೇಕಾಯಿತು ಎಂದು ಹಲವು ಬಾರಿ ಹೇಳಿರುವ ಸಿದ್ದು, ಈಗ ತಾವೂ ಅದನ್ನೇ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟಾಗ ಸಿದ್ದರಾಮಯ್ಯ ಹಾಕಿದ್ದ ಕಂಡೀಷನ್ನುಗಳಲ್ಲಿ ಮಗ ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು, ಪ್ರಬಲ ಖಾತೆಯನ್ನೇ ಕೊಡಬೇಕು ಎನ್ನುವುದೂ ಇತ್ತು. ಯತೀಂದ್ರ ಅವರೀಗ ಡಿಕೆ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಹಾಗೆ ನೋಡಿದರೆ ರಾಜಕೀಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದವರು ಸಿದ್ದು ಅವರ ಮೊದಲ ಮಗ ರಾಕೇಶ್. ಅವರ ಅಕಾಲಿಕ ಸಾವಿನ ನಂತರ ರಾಜಕೀಯದಿಂದ ದೂರವೇ ಇದ್ದ ಮಗ ಡಾ. ಯತೀಂದ್ರನನ್ನು ರಾಜಕೀಯಕ್ಕೆ ಕರೆತಂದು, ತಮ್ಮದೇ ಕ್ಷೇತ್ರ ವರುಣಾದಿಂದ ಆತನನ್ನು ಶಾಸಕನನ್ನಾಗಿ ಮಾಡಿ, ತಾವು ಚಾಮುಂಡೇಶ್ವರಿಗೆ ಶಿಫ್ಟ್ ಆಗಿದ್ದರು. ಆದರೆ ಮಗ ವರುಣಾದಲ್ಲಿ ಗೆದ್ದಿದ್ದ, ಚಾಮುಂಡೇಶ್ವರಿಯಲ್ಲಿ ಸಿದ್ದು ಸೋತಿದ್ದರು. ಇದು 2018ರ ಕಥೆ.
ಅದಾದ ಮೇಲೆ 2023ರಲ್ಲಿ ಸಿದ್ದರಾಮಯ್ಯ ಮಗನಿಂದ ವರುಣಾ ಕ್ಷೇತ್ರವನ್ನು ವಾಪಸ್ ತೆಗೆದುಕೊಂಡು, ಮತ್ತೆ ಗೆದ್ದರು. ಸಿಎಂ ಆದರು. ಆದರೆ ಮಗನನ್ನು ವಿಧಾನ ಪರಿಷತ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡರು.
ಸಿದ್ದರಾಮಯ್ಯ ಅವರ ಪುತ್ರ ಪ್ರೇಮಕ್ಕೆ ಸಾಥ್ ನೀಡಿದ್ದವರಲ್ಲಿ ಮೈಸೂರು ಭಾಗದ ನಾಯಕ ಮಹದೇವಪ್ಪನವರೂ ಇದ್ದರು. ಆದರೆ ಅವರೀಗ ಸಚಿವರಲ್ಲ. ಹೆಚ್ ಸಿ ಮಹದೇವಪ್ಪ ಮತ್ತು ಸಿದ್ದರಾಮಯ್ಯ ಬಾಂಧವ್ಯ ಇಡೀ ಮೈಸೂರಿಗೆ ಗೊತ್ತು. ಆದರೆ ಮೈಸೂರಿನಲ್ಲಿ ಇನ್ನೊಬ್ಬರು ಸಚಿವರಾದರೆ ಮಗನ ಪ್ರಾಬಲ್ಯಕ್ಕೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಇನ್ನೊಬ್ಬರು ಸಚಿವರಾಗಲಿಲ್ಲ. ಅದಕ್ಕೆ ಕಾರಣ ಸಿದ್ದರಾಮಯ್ಯ ಅವರ ಪುತ್ರ ಪ್ರೇಮ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಮೈಸೂರು ಜಿಲ್ಲೆಯಿಂದ ಸಚಿವರಾಗಲು ತುದಿಗಾಲಿನಲ್ಲಿ ನಿಂತಿದ್ದ ತನ್ವೀರ್ ಸೇಠ್ ಅವರ ಮಂತ್ರಿ ಪಟ್ಟದ ಕನಸಿಗೂ ಸಿದ್ದು ಫುಲ್ ಸ್ಟಾಪ್ ಹಾಕಿದರು ಎನ್ನುವುದು ತನ್ವೀರ್ ಸೇಠ್ ಬೆಂಬಲಿಗರ ಆರೋಪ.
ಅಷ್ಟೆ ಅಲ್ಲ, ಕುರುಬ ಸಮುದಾಯದಿಂದ ಸಚಿವರಾಗಿರುವುದು ಇಬ್ಬರು ಒಬ್ಬರು ಭೈರತಿ ಸುರೇಶ್ ಮತ್ತೊಬ್ಬರು ಯತೀಂದ್ರ. ಇವರಲ್ಲಿ ಭೈರತಿ, ಬೆಂಗಳೂರಿನಿಂದ ಆಚೆ ಬರುವ ನಾಯಕರಲ್ಲ. ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದರೂ, ಕ್ಷೇತ್ರದ ಹೊರಗೆ ಅವರು ಫೇಮಸ್ ಅಲ್ಲ. ಅಲ್ಲದೆ ಭೈರತಿ ಅವರು ಸಿದ್ದರಾಮಯ್ಯ ಪರಮನಿಷ್ಠ ಬೆಂಬಲಿಗ. ಅದರಲ್ಲೂ ಮುಡಾ ಹಗರಣ ಬಯಲಿಗೆ ಬಂದಾಗ ಬಹಿರಂಗವಾಗಿ ಆರೋಪ ಎದುರಿಸಿದರೂ, ಹಿಂದೆ ಸರಿಯಲಿಲ್ಲ. ಅಲ್ಲದೆ ಭೈರತಿ ಅವರು, ಯತೀಂದ್ರಗೆ ಪೈಪೋಟಿ ಕೊಡುವವರಲ್ಲ. ಹೀಗಾಗಿಯೇ ಭೈರತಿ ಅವರಿಗೆ ದಾರಿ ಸುಗಮವಾಗಿದ್ದು.
ಯತೀಂದ್ರ ಅವರೊಂದಿಗೆ ಪ್ರಬಲ ಕುರುಬ ಸಮುದಾಯದವರು ಮಂತ್ರಿಯಾದರೆ ಮಗನಿಗೆ ಪೈಪೋಟಿ ಎದುರಾಗಬಹುದು ಎಂಬ ಕಾರಣಕ್ಕೆ ಬೇರೆಯವರನ್ನು ಸಚಿವರಾಗಲು ಬಿಟ್ಟಿಲ್ಲ ಎಂಬ ಆರೋಪವೂ ಇದೆ.
ಈ ಕಾರಣಕ್ಕಾಗಿಯೇ ಕುರುಬ ಸಮುದಾಯದಿಂದ ಗೆದ್ದ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಚಿಮ್ಮನಕಟ್ಟಿ, ಬಸವರಾಜ್ ಶಿವಣ್ಣನವರ್, ಬಿಜಿ ಗೋವಿಂದಪ್ಪ, ಎನ್ ವೈ ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಅಷ್ಟೇ ಅಲ್ಲ, ಕಡೆಯ ಕ್ಷಣದಲ್ಲಿ ಸಚಿವರಾಗುವ ಚಾನ್ಸ್ ಮಿಸ್ ಮಾಡಿಕೊಂಡ ಗಾಯತ್ರಿ ಶಾಂತೇಗೌಡ ಅವರಿಗೂ ಶಾಪವಾಗಿದ್ದು ಅವರು ಕುರುಬ ಸಮುದಾಯದವರು ಎನ್ನುವುದೇ. ಅಂದಹಾಗೆ ಗಾಯತ್ರಿ ಶಾಂತೇಗೌಡ ಅವರೂ ಮೇಲ್ಮನೆ ಸದಸ್ಯರು. ಇಬ್ಬರು ವಿಧಾನ ಪರಿಷತ್ ಸದಸ್ಯರು ಸಚಿವರಾಗುವುದಕ್ಕೂ ಅಡ್ಡಿಯಾಗಿದ್ದವರು ಸಿದ್ದರಾಮಯ್ಯ ಎನ್ನುವ ವಾದ ಇದೆ. ಅಂದರೆ ಇಬ್ಬರು ಮೇಲ್ಮನೆ ಸದಸ್ಯರು ಸಚಿವರಾದರೆ ಆಗ ಮೇಲ್ಮನೆಯಲ್ಲಿ ಕಾಂಗ್ರೆಸ್ ಶಾಸಕರ ನಾಯಕನ ಪಟ್ಟ ಕೈತಪ್ಪಬಹುದು. ಹೀಗಾಗಿ ಸಚಿವರಾಗಿರುವ ಯತೀಂದ್ರ ಅವರು ಒಬ್ಬರೇ ಸಚಿವರಾಗಿದ್ದರು, ಆಗ ಸಹಜವಾಗಿಯೇ ಮೇಲ್ಮನೆ ನಾಯಕನಾಗಬಹುದು ಎಂಬ ಲೆಕ್ಕಾಚಾರವೂ ಕೆಲಸ ಮಾಡಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಯಾವ ಪುತ್ರ ಪ್ರೇಮದಿಂದ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟಿದ್ದರೋ, ಅದೇ ರೀತಿಯ ಪುತ್ರ ಪ್ರೇಮವನ್ನು ಈಗ ಸ್ವತಃ ಪ್ರದರ್ಶನ ಮಾಡ್ತಿದ್ದಾರೆ.



