ಡಿಕೆ ಸಚಿವ ಸಂಪುಟ ವಿಸ್ತರಣೆ ಮುಗಿದ ನಂತರ ಇನ್ನೊಂದು ಸ್ಥಾನ ಖಾಲಿ ಇದ್ದರೂ, ಅದು ಮಹಿಳೆಯರಿಗೆ ಫಿಕ್ಸ್ ಎಂಬುದು ಗುಟ್ಟೇನಲ್ಲ. ಆದರೆ ಬೆಂಕಿ ಉಗುಳುತ್ತಿರುವವರ ಪಟ್ಟಿ ದೊಡ್ಡದಾಗಿದೆ. ಹೀಗಾಗಿ ಭಿನ್ನಮತನವನ್ನು ಶಮನಗೊಳಿಸಲು, ಸಮಸ್ಯೆಯನ್ನು ಸದ್ಯದ ಮಟ್ಟಿಗೆ ಶಾಂತ ಮಾಡಲು ಮತ್ತೊಮ್ಮೆ ಸಂಪುಟ ರಿಪೇರಿಗೆ ಡಿಕೆ ಮನಸ್ಸು ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ. ಸಂಪುಟ ವಿಸ್ತರಣೆಗೂ ಗೈರು ಹಾಜರ್ ಆಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಈ ವೇಳೆಯಲ್ಲಿಯೇ ಮೈಸೂರಿಗೆ ಹೋಗಿ ನೆಮ್ಮದಿಯಾಗಿರುವುದು ಸಿಎಂ ಡಿಕೆ ಶಿವಕುಮಾರ್ ನೆಮ್ಮದಿ ಕಳೆದುಕೊಳ್ಳೋ ಹಾಗೆ ಮಾಡಿದೆ. ಅಂದಹಾಗೆ ಡಿಕೆ ಕ್ಯಾಬಿನೆಟ್ ರಿಪೇರಿಯಾದರೆ ಯಾರೆಲ್ಲ ಔಟ್.. ಯಾರೆಲ್ಲ ಇನ್ ಎಂಬ ಬಗ್ಗೆ ಸಮಾಲೋಚನೆಗಳು ಶುರುವಾಗಿವೆ.
ಕುರುಬ ಸಮುದಾಯಕ್ಕೆ ಮೊದಲ ಆದ್ಯತೆ : ಸದ್ಯಕ್ಕೆ ಕುರುಬ ಸಮುದಾಯದಿಂದ ಇಬ್ಬರು ಸಚಿವರಿದ್ದಾರೆ. ಯತೀಂದ್ರ ಮತ್ತು ಭೈರತಿ ಸುರೇಶ್. ಈ ಇಬ್ಬರ ಹೊರತಾಗಿ ಇನ್ನೊಬ್ಬರಿಗೆ ಸಚಿವ ಸ್ಥಾನ ಕೊಡುವ ಆಲೋಚನೆ ಇದೆ. ಹಾಗೆ ಆದರೆ ಸಿದ್ದರಾಮಯ್ಯ ಬಣದ ನಾಯಕ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣವರ ಹೆಸರು ಕೇಳಿ ಬರುತ್ತಿದೆ. ಬಸವರಾಜ್ ಹೆಸರನ್ನು ಸ್ವತಃ ಸಿದ್ದು ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಆದರೆ ಇತ್ತ ರಾಘವೇಂದ್ರ ಹಿಟ್ನಾಳ್ ಕೋಪ ತುತ್ತತುದಿಗೇರಿದೆ.
ಮಹಿಳೆಯರು ಯಾರು..?
ಇದು ಸಂಪುಟದಲ್ಲಿ ಕಾಡುತ್ತಿರುವ ಅತೀ ದೊಡ್ಡ ಪ್ರಶ್ನೆ. ಒಬ್ಬ ಮಹಿಳೆಗೂ ಸಚಿವ ಸ್ಥಾನ ಕೊಟ್ಟಿಲ್ಲ ಎನ್ನುವುದು ಕಾಂಗ್ರೆಸ್ಸಿಗೆ ಮುಜುಗರದ ಸಂಗತಿ. ಹೀಗಾಗಿ ಈಗ ಕೊಟ್ಟಿರುವ ಸಚಿವ ಸ್ಥಾನದಲ್ಲೇ ಯಾರಾದರೊಬ್ಬರಿಗೆ ರಾಜೀನಾಮೆ ಕೊಡಿಸುವುದು ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವ ಆಲೋಚನೆ ಕಾಂಗ್ರೆಸ್ಸಿನಲ್ಲಿದೆ.
ಹಾಗಾದರೆ ಅವರ ಕಣ್ಣಿಗೆ ಕಾಣುವುದು ಮುನಿಯಪ್ಪ ಹೆಸರು. ಮುನಿಯಪ್ಪ ಅವರಿಂದ ರಾಜೀನಾಮೆ ಪಡೆದು, ಆ ಸ್ಥಾನವನ್ನು ಅವರ ಮಗಳಾದ ರೂಪ ಶಶಿಧರ್ ಅವರಿಗೆ ಕೊಟ್ಟರೆ, ಸುಲಭವಾಗಿ ಸಮಸ್ಯೆ ಬಗೆಹರಿಸಬಹುದು ಎಂಬ ಆಲೋಚನೆ ಪಕ್ಷದ ವರಿಷ್ಠರಲ್ಲೇ ಇದೆ. ಹಾಗಾದರೆ ಭಿನ್ನಮತವೂ ಬರಲ್ಲ. ಎಡಗೈನವರೂ ಸೈಲೆಂಟ್, ಮುನಿಯಪ್ಪ ಬೆಂಬಲಿಗರೂ ಸೈಲೆಂಟ್. ಅಷ್ಟೇ ಅಲ್ಲ ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆ ಎನ್ನುವುದು ಒಂದು ಆಲೋಚನೆಯಷ್ಟೇ.
ಇನ್ನೊಂದು ಆಲೋಚನೆ ಎಂದರೆ ಮಹಿಳೆಯ ಸ್ಥಾನಕ್ಕೆ ಮತ್ತೊಬ್ಬ ಮುಸ್ಲಿಂ ಮಹಿಳೆಯನ್ನೇ ತರುವುದು. ಮಲ್ಲಿಕಾರ್ಜುನ ಖರ್ಗೆ ಅವರು ಖನೀಜ್ ಫಾತಿಮಾ ಅವರ ಹೆಸರು ಹೇಳಿದ್ದಾರೆ. ಈಗ ಸಚಿವರಾಗಿರುವವರ ಪೈಕಿ ಹೇಗಿದ್ದರೂ ಜಮೀರ್ ಅಹ್ಮದ್ ವಿರುದ್ಧ ಆರೋಪಗಳಿವೆ. ಜಮೀರ್ ಅವರಿಂದ ರಾಜೀನಾಮೆ ಪಡೆದು, ಆ ಸ್ಥಾನವನ್ನು ಖನೀಜ್ ಫಾತಿಮಾ ಅವರಿಗೆ ನೀಡಿದರೆ ಹೇಗೆ ಎಂಬ ಚಿಂತನೆಯೂ ಚಾಲ್ತಿಯಲ್ಲಿದೆ.
3ನೇ ಆಲೋಚನೆ ಬಿ ನಾಗೇಂದ್ರ ಅವರ ಸ್ಥಾನದ ಬಗ್ಗೆ. ಬಿ ನಾಗೇಂದ್ರ ಸೇರ್ಪಡೆಗೆ ಕಾಂಗ್ರೆಸ್ಸಿಗರು ಊಹೆ ಮಾಡಿದ್ದಕ್ಕಿಂತ ಹೆಚ್ಚಾಗಿ ಬಿಜೆಪಿ ವಿರೋಧಿಸುತ್ತಿದೆ. ವಾಲ್ಮೀಕಿ ಸಮುದಾಯದವರೇ ಆಕ್ರೋಶಗೊಂಡಿದ್ದಾರೆ. ಹೀಗಿರುವಾಗ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದು ಮತ್ತು ಅವರ ಸ್ಥಾನಕ್ಕೆ ಬಳ್ಳಾರಿಯರೇ ಆದ ಅನ್ನಪೂರ್ಣ ತುಕಾರಾಂ ಅವರಿಗೆ ಸ್ಥಾನ ನೀಡುವ ಆಲೋಚನೆಯೂ ಕಾಂಗ್ರೆಸ್ಸಿನಲ್ಲಿದೆ.
ಮೂರು ಐಡಿಯಾಗಳಲ್ಲಿ ಒಂದು ಅಥವಾ ಮೂರಕ್ಕೆ ಮೂರೂ ಜಾರಿಯಾದರೆ ಆಶ್ಚರ್ಯ ಇಲ್ಲ.
ಒಕ್ಕಲಿಗ ನಾಯಕ ಯಾರು..?
ಪಕ್ಷದಲ್ಲಿ ತೀವ್ರ ಪ್ರತಿರೋಧ ಎದುರಿಸುತ್ತಿರುವುದು ಎಂ ಕೃಷ್ಣಪ್ಪ ಅವರ ಕಡೆಯಿಂದ. ಆ ಲೆಕ್ಕದಲ್ಲಿ ನೋಡಿದರೆ ಹೈಕಮಾಂಡಿಗೂ ಸಮರ್ಥನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಕ್ಕಲಿಗ ಸಚಿವರೊಬ್ಬರಿಂದ ರಾಜೀನಾಮೆ ಪಡೆದು ಆ ಸ್ಥಾನಕ್ಕೆ ಕೃಷ್ಣಪ್ಪ ಅವರನ್ನು ಕರೆದುಕೊಂಡರೆ ಹೇಗೆ ಎಂಬ ಪ್ರಶ್ನೆಯೂ ಇದೆ. ಆದರೆ ಆ ಒಕ್ಕಲಿಗ ಸಚಿವ ಯಾರು.. ಎಂಬುದೇ ನಿಗೂಢ ಪ್ರಶ್ನೆ.



