ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪ್ರದೋಶ್ (A-14) ಮತ್ತು ವಿನಯ್ (A-10) ಇಬ್ಬರೂ ಅಪ್ರೂವರ್ ಆಗೋದಾಗಿ ಒಪ್ಪಿದ್ದಾರೆ. ಅದಕ್ಕೆ ಕೋರ್ಟ್ ಇನ್ನೂ ಅನುಮತಿ ಕೊಟ್ಟಿಲ್ಲವಾದರೂ, ಪ್ರಶ್ನೆ, ವಿಚಾರಣೆ ಮುಗಿದ ಬಳಿಕ ಅನುಮತಿ ಸಿಕ್ಕರೂ ಸಿಗಬಹುದು. ಎಲ್ಲಾ ಸತ್ಯಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರೆ, ಆತನಿಗೆ ಸಿಗಬೇಕಾದ ಸಂಪೂರ್ಣ ಶಿಕ್ಷೆಯಿಂದ ವಿನಾಯಿತಿ ಸಿಕ್ಕರೂ ಸಿಗಬಹುದು ಅಥವಾ ಶಿಕ್ಷೆ ಕಡಿಮೆಯಾಗಬಹುದು. ಬೇಗ ಷರತ್ತುಬದ್ಧ ಜಾಮೀನು ಸಿಗಬಹುದು. ಆದರೆ, ಇವರೆಲ್ಲ ಮಾಫಿ ಸಾಕ್ಷಿ ಆಗುವುದಕ್ಕೆ ಕಾರಣವೇ ದರ್ಶನ್. ಹೌದು, ಮೂಲಗಳ ಪ್ರಕಾರ ತನ್ನ ವಿರುದ್ಧದ ಕೇಸಿನಲ್ಲಿ ತನಗೆ ಪ್ರತಿಕೂಲವಾಗಬಹುದಾದವರು, ಮಾಫಿ ಸಾಕ್ಷಿ ಆಗುತ್ತಿರುವುದಕ್ಕೆ ಕಾರಣವೇ ಜೈಲಿನಲ್ಲಿರುವ ದರ್ಶನ್.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪ್ರದೋಷ್, ವಿನಯ್ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ದರು. ಸುಪ್ರೀಂಕೋರ್ಟಿನಲ್ಲಿ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಸೇರಿದ ದರ್ಶನ್, ತನ್ನ ಸಹಜಚರರ ಜೊತೆ ಕ್ರೂರವಾಗಿ ವರ್ತನೆ ಮಾಡ್ತಿದ್ದರಂತೆ. ಪ್ರದೋಷ್, ವಿನಯ್ ಮೇಲೆ ತಟ್ಟೆ, ಲೋಟ ಎಸೆಯುವುದು, ತಿನ್ನುವ ಊಟವನ್ನೇ ಮೈಮೇಲೆ ಸುರಿಯುವುದು, ಉಗಿಯುವುದು, ಹೊಡೆಯುವುದು ಮಾಡ್ತಿದ್ದರಂತೆ. ಜೈಲಿಗೆ ಪತಿಯನ್ನು ನೋಡುವುದಕ್ಕೆ ಪ್ರದೋಷ್ ಪತ್ನಿ ಬಂದಿದ್ದಾರೆ. ಆ ವೇಳೆ ದರ್ಶನ್ ಅವರಿಂದ ಹಲ್ಲೆಗೊಳಗಾಗಿದ್ದ ಪ್ರದೋಷ್ ಮುಖ ಊದಿಕೊಂಡಿತ್ತಂತೆ. ಜೈಲಿನಲ್ಲಿ ಪೊಲೀಸರು ಹೊಡೆಯುತ್ತಿರಬಹುದು ಎಂದುಕೊಂಡು ಕೇಳಿದ ಪತ್ನಿಗೆ ಇದನ್ನು ಮಾಡಿರುವುದು ದರ್ಶನ್ ಎಂದು ತಿಳಿದಾಗ ಆಘಾತವಾಗಿದೆ. ಆದರೆ ಕಾನೂನು ಕ್ರಮಗಳ ಬಗ್ಗೆ ಗೊತ್ತಿಲ್ಲ. ಹೀಗಾಗಿ ವಕೀಲರೊಬ್ಬರನ್ನು ಕರೆದುಕೊಂಡು ಹೋಗಿ ಪತಿಯ ಜೊತೆ ಮಾತನಾಡಿಸಿದ್ದಾರೆ. ಆರೋಪಗಳೇನು ಎಂಬ ವಿವರ ಕೇಳಿದ ವಕೀಲರು, ಪ್ರದೋಷ್‌ಗೆ ಮಾಫಿ ಸಾಕ್ಷಿಯಾಗುವಂತೆ ಸಲಹೆ ನೀಡಿದ್ದಾರೆ. ಆಗಿರುವುದು ಇಷ್ಟೇ.
ಪ್ರದೋಷ್ ಮಾಫಿ ಸಾಕ್ಷಿಯಾದರೆ ಏನಾಗಬಹುದು..?
ಕೊಲೆಯ ದಿನ ಆರ್‌ಆರ್ ನಗರದ ಪಬ್‌ನಿಂದ ನಟ ದರ್ಶನ್ ಜೊತೆಗೆ ಪಟ್ಟಣಗೆರೆಯ ಶೆಡ್‌ಗೆ ಹೋಗಿದ್ದ ಪ್ರದೋಷ್, ರೇಣುಕಾಸ್ವಾಮಿ ಮೇಲಿನ ಹಲ್ಲೆ ವೇಳೆ ಸ್ಥಳದಲ್ಲೇ ಇದ್ದ ವ್ಯಕ್ತಿ. “ಹೊಡೆಯೋದು ಸಾಕು ನಿಲ್ಲಿಸಿ, ಅವನು ಸತ್ತು ಹೋಗ್ತಾನೆ” ಎಂದು ತಡೆಯಲು ಯತ್ನಿಸಿದ್ದಾಗಿಯೂ ತನಿಖಾ ವರದಿಯಲ್ಲಿದೆ. ಪ್ರದೋಷ್ ಮಾಫಿ ಸಾಕ್ಷಿಯಾದರೆ, ಆತ ಪ್ರತ್ಯಕ್ಷದರ್ಶಿಯಾಗುತ್ತಾನೆ. ಕೊಲೆಯಾದ ನಂತರ ಪ್ರಕರಣವನ್ನು ಮುಚ್ಚಿಹಾಕಲು (Hush up) ನಟ ದರ್ಶನ್ ಅವರಿಂದ ₹30 ಲಕ್ಷ ಹಣ ಪಡೆದಿದ್ದ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ ಆರೋಪವೂ ಪ್ರದೋಷ್ ಮೇಲಿದೆ. ಕೃತ್ಯದ ಬಳಿಕ ಶವ ವಿಲೇವಾರಿ ಮಾಡಲು ನೆರವು ಕೋರಿ ಸಬ್ ಇನ್‌ಸ್ಪೆಕ್ಟರ್ ಒಬ್ಬರಿಗೆ ಈತ ಫೋನ್ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಮೊಬೈಲ್‌ನಲ್ಲಿದ್ದ ಲೊಕೇಶನ್ ಡೇಟಾವನ್ನು ಡಿಲೀಟ್ ಮಾಡಿದ್ದ
ವಿನಯ್ ಮಾಫಿ ಸಾಕ್ಷಿಯಾದರೆ ಏನಾಗಬಹುದು..?
ಆರ್‌ಆರ್ ನಗರದ ‘ಸ್ಟೋನಿ ಬ್ರೂಕ್’ ಪಬ್ ಮಾಲೀಕನಾಗಿರುವ ವಿನಯ್, ದರ್ಶನ್ ಅತ್ಯಾಪ್ತ. ಆತನ ಮನೆ ಹಾಗೂ ಪಬ್‌ನಲ್ಲಿಯೇ ರೇಣುಕಾಸ್ವಾಮಿ ಮೇಲಿನ ಕೃತ್ಯಕ್ಕೆ ದರ್ಶನ್ ಗ್ಯಾಂಗ್ ಸಂಚು ರೂಪಿಸಿತ್ತು. ಕೊಲೆ ನಡೆದ ಪಟ್ಟಣಗೆರೆಯ ಶೆಡ್ ವಿನಯ್ ಅವರ ಸಂಬಂಧಿಕರಿಗೆ ಸೇರಿದ್ದು ಹಾಗೂ ಹತ್ಯೆ ಮತ್ತು ಸಾಕ್ಷ್ಯನಾಶದ ಪ್ರಕ್ರಿಯೆಯಲ್ಲಿ ಈತನ ಪ್ರಮುಖ ಪಾತ್ರವಿದೆ ಎಂದು ಚಾರ್ಜ್‌ಶೀಟ್ ಹೇಳುತ್ತದೆ. ಕೃತ್ಯ ನಡೆದ ಸ್ಥಳದಲ್ಲಿದ್ದ ದೃಶ್ಯಗಳು, ಹಲ್ಲೆ ನಡೆಸಿದ ಸಂದರ್ಭದಲ್ಲಿ ತೆಗೆದಿದ್ದ ಫೋಟೋಗಳು ಮತ್ತು ಡಿಲೀಟ್ ಮಾಡಲಾಗಿದ್ದ ಪ್ರಮುಖ ಮಾಹಿತಿಗಳನ್ನು ಎಫ್‌ಎಸ್‌ಎಲ್ (FSL) ತಂಡ ರಿಟ್ರೀವ್ ಮಾಡಿದ್ದು, ಇವುಗಳಲ್ಲಿ ಅತಿ ಹೆಚ್ಚು ಡಿಜಿಟಲ್ ಸಾಕ್ಷ್ಯಗಳು ವಿನಯ್ ಫೋನ್‌ನಲ್ಲಿ ಪತ್ತೆಯಾಗಿದ್ದವು.
ರವಿಶಂಕರ್ ಈಗಾಗಲೇ ಅಪ್ರೂವರ್ ಆಗಿದ್ಧು ಈತನ ಮೇಲೆ ಅಪಹರಣಕ್ಕೆ ಸಹಕಾರ ನೀಡಿರುವ ಆರೋಪ ಇದೆ. ಚಿತ್ರದುರ್ಗ ಮೂಲದವನಾದ ಈತ ದರ್ಶನ್ ಗ್ಯಾಂಗ್‌ನ ಅಭಿಮಾನಿ ಸಂಘದ ಸದಸ್ಯ. ನಟ ದರ್ಶನ್ ಗ್ಯಾಂಗ್‌ನಿಂದ ಅಪಹರಣಕ್ಕೊಳಗಾದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ಬಳಸಲಾದ ಟೊಯೋಟಾ ಇಟಿಯೋಸ್ (Toyota Etios) ಕಾರನ್ನು ಚಾಲನೆ ಮಾಡಿದ್ದ. ಕೃತ್ಯ ಸಂಪೂರ್ಣವಾಗಿ ಮುಗಿದ ಬಳಿಕ, ಪ್ರಕರಣವನ್ನು ದರ್ಶನ್ ಗ್ಯಾಂಗ್‌ನಿಂದ ಬೇರೆಡೆಗೆ ತಿರುಗಿಸಲು ಮತ್ತು ಕೇಸ್ ಮುಚ್ಚಿಹಾಕಲು ಆರಂಭದಲ್ಲಿ ಪೊಲೀಸರ ಮುಂದೆ ಸುಳ್ಳು ಹೇಳಿ ಶರಣಾಗಿದ್ದವರಲ್ಲಿ ಈತ ಕೂಡ ಒಬ್ಬನಾಗಿದ್ದಾನೆ.
ಕಾನೂನಿನ ಪ್ರಕಾರ, ನೇರವಾಗಿ ಕೊಲೆ ಮಾಡದಿದ್ದರೂ ಅಪಹರಣಕ್ಕೆ ನೆರವಾಗುವುದು, ಕೃತ್ಯಕ್ಕೆ ಜಾಗ ಒದಗಿಸುವುದು, ಸಾಕ್ಷ್ಯ ನಾಶಪಡಿಸುವುದು ಮತ್ತು ಅಪರಾಧ ಮುಚ್ಚಿಹಾಕಲು ಹಣದ ವ್ಯವಹಾರ ನಡೆಸುವುದು ಕೂಡ ಸಮಾನ ಅಪರಾಧಗಳಾಗಿವೆ. ಇದೇ ಕಾರಣಕ್ಕೆ ಇವರು ಈಗ ತಾವೂ ಬದುಕುಳಿಯಲು ‘ಮಾಫಿ ಸಾಕ್ಷಿ’ಯಾಗುವ ಹಾದಿ ಹಿಡಿದಿದ್ದಾರೆ.
ಮಾಫಿ ಸಾಕ್ಷಿಯಾಗಿ ಸುಳ್ಳು ಹೇಳಿದರೆ..
ಅಪ್ರೂವರ್ ಆದ ವ್ಯಕ್ತಿ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳಿದರೆ ಅಥವಾ ಸತ್ಯವನ್ನು ಮರೆಮಾಚಿದರೆ ಆತನಿಗೆ ಸಿಕ್ಕ ಎಲ್ಲಾ ವಿನಾಯಿತಿಗಳು ರದ್ದಾಗಿ, ಮತ್ತೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.



