ಎಚ್ಚರಿಕೆ ಕೊಟ್ಟಾಯ್ತು. ಬುದ್ದಿ ಮಾತು ಹೇಳಿಯಾಯ್ತು. ಟ್ರಾನ್ಸ್ ಫರ್ ಆಯ್ತು. ಪೋಸ್ಟಿಂಗ್ ಕೂಡಾ ಕೊಡದೆ ಟ್ರಾನ್ಸ್ ಫರ್ ಅನ್ನೋದು ಆ ಹಂತದ ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ಶಿಕ್ಷೆಯೂ ಹೌದು. ಅವಮಾನವೂ ಹೌದು. ಆದರೆ ಸಮರ ನಿಂತಿಲ್ಲ. ಅದರ ಮುಂದುವರಿದ ಭಾಗವಾಗಿ ಒಂದು ಆಡಿಯೋ ಮತ್ತು ರೂಪಾ ಮೌದ್ಗಿಲ್ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಕುಟುಂಬ ಒಡೆಯುತ್ತಿರೋದು ಯಾರು?
ರೂಪಾ ಮೌದ್ಗಿಲ್ ಅವರ ಪೋಸ್ಟಿನಲ್ಲಿ ಮೊದಲ ಬಾರಿಗೆ ತನ್ನ ಕುಟುಂಬದ ಬಗ್ಗೆ ಬರೆದುಕೊಂಡಿದ್ದಾರೆ. ನಾನು ತುಂಬಾ ಗಟ್ಟಿಗಿತ್ತಿ. ಎಲ್ಲ ಹೆಣ್ಣು ಮಕ್ಕಳಿಗೆ ನನ್ನಂತೆ ಹೋರಾಡೋ ಶಕ್ತಿ ಇರುವುದಿಲ್ಲ. ಅಂಥ ಅಸಹಾಯಕ ಹೆಣ್ಣು ಮಕ್ಕಳಿಗೆ ದನಿಯಾಗೋಣ ಎಂದು ಹೇಳಿರುವ ರೂಪಾ, ಮೊದಲ ಬಾರಿಗೆ ತನ್ನ ಕುಟುಂಬದ ಬಗ್ಗೆ ಬರೆದುಕೊಂಡಿದ್ದಾರೆ. ನಾನು- ನನ್ನ ಪತಿ ಈಗಲೂ ಒಟ್ಟಾಗಿದ್ದೇವೆ. ನನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬಗಳನ್ನು ಒಡೆಯುತ್ತಿರುವ ಷಡ್ಯಂತ್ರದ ಹಿಂದಿರುವವರನ್ನು ಪ್ರಶ್ನಿಸಿ. ಇಲ್ಲವಾದರೆ ಇಂಥ ಹಲವು ಕುಟುಂಬಗಳು ನಾಶವಾಗುತ್ತವೆ ಎಂದು ಬರೆದುಕೊಂಡಿರುವ ರೂಪಾ, ಎಲ್ಲಿಯೂ ರೋಹಿಣಿ ಸಿಂಧೂರಿ ಹೆಸರು ಪ್ರಸ್ತಾಪ ಮಾಡಿಲ್ಲ.
ಚಾಟ್, ಪೋಸ್ಟ್, ಸ್ಕ್ರೀನ್ ಶಾಟ್ ಬಳಿಕ ಈಗ ಆಡಿಯೋ
ಆಡಿಯೋ ಹೊರಬಿದ್ದಿದ್ದು, ಆಡಿಯೋದಲ್ಲಿರೋದು ಗಂಗರಾಜು ಎಂಬ ಸಾಮಾಜಿಕ ಕಾರ್ಯಕರ್ತ ಮತ್ತು ರೂಪಾ. ಈ ಗಂಗರಾಜು ಸಾ.ರಾ.ಮಹೇಶ್ ವಿರುದ್ಧ ದೂರು ಕೊಟ್ಟಿರುವಾತ. ಆತನಿಗೆ ರೂಪಾ ಪೋನ್ ಮಾಡಿ ಧಮ್ಕಿ ಹಾಕಿದ್ದಾರೆ.
ಜನವರಿ 30 ಹಾಗೂ ಫೆಬ್ರವರಿ 1 ರಂದು ಗಂಗರಾಜು ಕರೆ ಮಾಡಿದ್ದ ರೂಪಾ, ಮೊದಲ ಬಾರಿಗೆ ಗಂಗರಾಜು ಬಳಿ ದೂರಿನ ಮಾಹಿತಿ ಪಡೆದಿದ್ದಾರೆ. 2ನೇ ಆಡಿಯೋದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಾರೆ. 20 ನಿಮಿಷಕ್ಕೂ ಹೆಚ್ಚು ಬಯುತ್ತಾರೆ. ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಮಾತ್ರ ಗಂಗರಾಜು ದೂರು ಕೊಟ್ಟಿದ್ದಾರೆ ಎನ್ನುವುದು ಅನುಮಾನಕ್ಕೆ ಇರುವ ಮೂಲ ಕಾರಣ. ಆದರೆ ರೋಹಿಣಿ ಸಿಂಧೂರಿ ಮೇಲೆ ರೂಪಾ ಗರಂ ಆಗಿರುವುದಕ್ಕೆ ಈ ಆಡಿಯೋ ಪ್ರಕಾರ ಇರುವ ಕಾರಣವೇ ಬೇರೆ.
ಮೌದ್ಗಿಲ್ ಆಫೀಸಿಗೆ ರೋಹಿಣಿ ಬರುತ್ತಿದ್ದರಾ?
ರೋಹಿಣಿ ಸಿಂಧೂರಿ ಅವರು ಮೌನೀಶ್ ಮೌದ್ಗಿಲ್ ಅವರು ಕೆಲಸ ಮಾಡುವ ಕಚೇರಿಗೆ ಪದೇ ಪದೇ ಬರುತ್ತಿದ್ದುದೇ ರೂಪಾ ಆಕ್ರೋಶಕ್ಕೆ ಕಾರಣ. ಮೂಲಗಳ ಪ್ರಕಾರ ರೂಪಾ, ಪತಿ ಕೆಲಸ ಮಾಡುವ ಸ್ಥಳ, ಓಡಾಡುವ ಪ್ರದೇಶಗಳಲ್ಲಿ ಬೇಹುಗಾರರನ್ನಿಟ್ಟು, ಅಲ್ಲಿಗೆ ರೋಹಿಣಿ ಸಿಂಧೂರಿ ಅವರು ಬರುತ್ತಿದ್ದರು ಎಂಬ ಮಾಹಿತಿ ಗೊತ್ತಾದ ಕೂಡಲೇ ಆಕ್ರೋಶಗೊಂಡಿದ್ದಾರೆ. ಗಂಡ ಮತ್ತು ಹೆಂಡತಿ ಮಧ್ಯೆ ಅವಳು ಬಂದ ಕಾರಣಕ್ಕೆ ವಿವಾದ ತಾರಕಕ್ಕೇರಿತಾ? ಗೊತ್ತಿಲ್ಲ.
ಗಂಗರಾಜು ವಾದವೇನು?
ಸಾ.ರಾ.ಮಹೇಶ್ ವಿರುದ್ಧ ರೋಹಿಣಿ ಸಿಂಧೂರಿ ಅವರ ಬಳಿಯೇ ದೂರು ಕೊಟ್ಟಿದ್ದ ಗಂಗರಾಜು, ರೋಹಿಣಿ ಸಂಧಾನಕ್ಕೆ ಹೋಗಿದ್ದು ತಪ್ಪು ಎಂದಿದ್ದಾರೆ. ಆದರೆ ರೂಪಾ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಾ ಅವರ ಪತಿ ಮೌದ್ಗಿಲ್ ರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ರೂಪಾರ ಪರ್ಸನಲ್ ವಿಷಯ ಬೇರೆಯೇ ಇದೆ. ಸರ್ಕಾರಿ ಅಧಿಕಾರಿ ವ್ಯಾಪ್ತಿ ಮೀರಿ ಕೆಲಸ ಮಾಡ್ತಿದ್ದಾರೆ. 1ನೇ ತಾರೀಖು ನನಗೆ ರೂಪಾ ಧಮ್ಕಿ ಹಾಕಿದರು. ನಾನು ರೂಪಾ ವಿರುದ್ಧ ಕ್ರಿಮಿನಲ್ ಕೇಸ್ ಹಾಕ್ತೀನಿ ಎಂದು ಹೇಳಿದ್ದಾರೆ.
ರೂಪಾ ಅವರು ಸಿಂಧೂರಿ ವಿರುದ್ಧದ ಹೋರಾಟಕ್ಕೆ ನನ್ನನ್ನು ಬಳಸಿಕೊಳ್ಳಲು ಯತ್ನ ಮಾಡಿದ್ದಾರೆ ಎನ್ನುವುದು ಗಂಗರಾಜು ಆರೋಪ. ರೂಪಾ ಮಾತಿನಿಂದ ನನಗೆ ನೋವಾಗಿದೆ. ನಾನು ರೂಪಾ , ರೋಹಿಣಿ ಪರ ಅಲ್ಲ. ನಾನು ನ್ಯಾಯದ ಪರ ಹೋರಾಡುವೆ ಎಂದಿದ್ದಾರೆ ನಾಗರಾಜು.



