ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ಸ್ವೀಕರಿಸಿದ ಜೊತೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೀಗ ಸಚಿವರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತರು, ದೋಸ್ತಿಗಳು.. ಅವರ್ ಬಿಡ್ರೀ ಸಿದ್ದರಾಮಯ್ಯ ಗ್ಯಾಂಗು ಎಂದು ಗುರುತಿಸಿಕೊಳ್ಳುತ್ತಿದ್ದ ಹಲವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದು ಸಿದ್ದು ಆಪ್ತರಲ್ಲಿ ತಲ್ಲಣ ಹುಟ್ಟಿಸಿರುವುದು ಸುಳ್ಳಲ್ಲ.
ಯತೀಂದ್ರ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನ ಪರಿಷತ್ ಸದಸ್ಯ. ಸಿದ್ದರಾಮಯ್ಯ ಅವರು 2019ರಲ್ಲಿ ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟಿದ್ದರು. ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ ಸೋತರು. ಆ ಬಾರಿ ಗೌರವ ಉಳಿಸಿದ್ದು ಬಾದಾಮಿ ಕ್ಷೇತ್ರ. 2023ರಲ್ಲಿ ತಂದೆ ಬಿಟ್ಟು ಕೊಟ್ಟಿದ್ದ ವರುಣಾವನ್ನು ತಂದೆಗೇ ವಾಪಸ್ ಬಿಟ್ಟುಕೊಟ್ಟಿದ್ದರು ಯತೀಂದ್ರ. ಯತೀಂದ್ರ ಅವರ ಈ ತ್ಯಾಗಕ್ಕೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿ ಸತ್ಕರಿಸಿದ್ದೂ ಆಗಿತ್ತು. ಅವರೀಗ ಡಿಕೆ ಸಂಪುಟದಲ್ಲಿ ಮಂತ್ರಿ.
ಡಿಕೆ ಸಂಪುಟದಲ್ಲಿರುವವರ ಹೆಸರು ನೋಡಿದರೆ ಸಿದ್ದು ಆಪ್ತರೇ ಇದ್ದಾರೆ ಎನ್ನುವಂತೆ ತೋರುತ್ತದೆ. ಯತೀಂದ್ರ ಅವರನ್ನು ಬಿಟ್ಟರೆ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ ಸಿದ್ದು ಆಪ್ತರೇ. ಇನ್ನು ಡಿಸಿಎಂ ಆಗಿರುವ ಪರಮೇಶ್ವರ್, ಸಿದ್ದು ರಾಜಕೀಯ ತಂತ್ರದ ಪರಿಣಾಮವಾಗಿ ಸಿದ್ದು ಟೀಂಗೆ ಬಂದಿದ್ದವರು. ಇವರಲ್ಲಿ ಭೈರತಿ ಸುರೇಶ್ ಅವರು ಮಾತ್ರ ಕ್ಷೇತ್ರಕ್ಕೆ ಸೀಮಿತವಾಗಿರುವ ನಾಯಕ. ಅದನ್ನು ಬಿಟ್ಟರೆ ಮಿಕ್ಕವರು ತಮ್ಮ ತಮ್ಮ ಕ್ಷೇತ್ರ, ಸಮುದಾಯದಲ್ಲಿ ಜನಪ್ರಿಯವಾಗಿರುವ ನಾಯಕರು. ಕೃಷ್ಣ ಭೈರೇಗೌಡ ಸಮುದಾಯದ ನಾಯಕರಾಗಿ ಬೆಳೆಯಲು ಅವಕಾಶ ಇರುವ ನಾಯಕ ಜೊತೆಗೆ ಡಿಕೆ ಶಿವಕುಮಾರ್‌ಗೆ ಬೇಕಿರುವಂತಹ ಗುಣಗಳೂ ಇವೆ.
ಆದರೆ ಉಳಿದವರ ಕಥೆ ಏನೆಂದು ನೋಡಿದರೆ.. ಹೆಚ್ ಸಿ ಮಹದೇವಪ್ಪ, ಜಮೀರ್ ಅಹ್ಮದ್, ಸಂತೋಷ್ ಲಾಡ್, ಕೆ ವೆಂಕಟೇಶ್, ಆರ್ ಬಿ ತಿಮ್ಮಾಪುರ, ಶಿವಾನಂದ ಪಾಟೀಲ್, ಬೋಸರಾಜು, ಶರಣಬಸಪ್ಪ ದರ್ಶನಾಪುರ.. ಹೀಗೆ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಅಸಮಾಧಾನ ಭುಗಿಲು.. ಆದರೆ ಬೂದಿ ಮುಚ್ಚಿದ ಕೆಂಡ
ಸಿದ್ದು ಟೀಂನ ಬಹುತೇಕ ಶಾಸಕರಲ್ಲಿ ಒಂದು ಅಸಮಾಧಾನವಂತೂ ಶುರುವಾಗಿದೆ. ಸಿದ್ದರಾಮಯ್ಯ ಅವರು ದೇವೇಗೌಡರನ್ನು ವಿರೋಧಿಸಿದ್ದು ಕುಮಾರಸ್ವಾಮಿ ಅವರನ್ನು ಕರೆತಂದಾಗ. ಅನುಭವವೇ ಇಲ್ಲದ ಕುಮಾರಸ್ವಾಮಿಯನ್ನು ಜೆಡಿಎಸ್‌ನಲ್ಲಿ ಉನ್ನತ ಹುದ್ದೆ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದಿದ್ದ ಸಿದ್ದರಾಮಯ್ಯ, ಈಗ ತಾವು ಮಾಡಿದ್ದು ಏನು..? ಪುತ್ರನಿಗೆ ಮಂತ್ರಿ ಪೋಸ್ಟ್ ಕೊಟ್ಟ ತಕ್ಷಣ ಎಲ್ಲವನ್ನೂ ಮರೆತು ಬಿಟ್ಟರೆ ಎಂಬ ಆಕ್ರೋಶ ಶುರುವಾಗಿದೆ. ಇದಿನ್ನೂ ಆರಂಭದ ಹಂತವಷ್ಟೇ. ಸಿದ್ದರಾಮಯ್ಯ ನುಡಿದಂತೆ ನಡೆಯಲಿಲ್ಲ ಎಂಬ ಆಕ್ರೋಶವಂತೂ ಮೊಳಕೆ ಒಡೆದಿದೆ. ಆದರೆ ಆ ಟೀಂ ಸಮಾಧಾನವಾಗಿರುವುದು ಡಿಕೆ ಸಂಪುಟದಲ್ಲಿ ಇನ್ನೂ 20 ಸ್ಥಾನ ಖಾಲಿ ಇದೆ ಎನ್ನುವ ವಿಚಾರಕ್ಕೆ. ಆ ಸ್ಥಾನಗಳಲ್ಲಿ ತಮಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇದೆ.



