ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB)ಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಟೂಲ್ ಕಿಟ್‌ಗಳನ್ನು (Tool Kits) ವಿತರಿಸುತ್ತದೆ. ಗಾರೆ ಕೆಲಸ, ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ವೆಲ್ಡಿಂಗ್ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿರುವವರಿಗೆ ಅನುಕೂಲವಾಗುವಂತೆ ಸುರಕ್ಷತಾ ಸಾಧನಗಳು ಮತ್ತು ವೃತ್ತಿಪರ ಸಲಕರಣೆಗಳನ್ನು ಒಳಗೊಂಡಿರುವ ಟೂಲ್ ಕಿಟ್ ಅದು. ಆದರೆ, ಆ ಟೂಲ್ ಕಿಟ್ ಹೆಸರಿನಲ್ಲಿ ದೋಖಾ ನಡೆದಿದೆ. ಹೆಸರು ಕಾರ್ಮಿಕರದ್ದು. ಲೂಟಿ ಅಧಿಕಾರಿಗಳದ್ದು. 3300 ರೂ. ಬೆಲೆಯ ಟೂಲ್ ಕಿಟ್‌ನ್ನು 3,300 ರೂ. ಕೊಟ್ಟು ಖರೀದಿಸಿ ಕೊಟ್ಟಿದ್ದಾರೆ. ಇದು ಸಂತೋಷ್ ಲಾಡ್ ಸಚಿವರಾಗಿದ್ದಾಗ ಜಾರಿಗೆ ತಂದಿದ್ದಂತಹ ಸ್ಪೆಷಲ್ ಪ್ಯಾಕೇಜ್. ಆದರೆ ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ಬೇರೆ ಬೇರೆ ಬಣ್ಣ ಓಪನ್ ಆಗುತ್ತಿದೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರಿಗಾಗಿ ಕಲ್ಯಾಣ ಮಂಡಳಿಯು ಬಡ ಕಾರ್ಮಿಕರಿಗೆ ವಿತರಿಸಿದ್ದ ಟೂಲ್ ಕಿಟ್. ಇದನ್ನು ʻಮೇಸನ್ ಟೂಲ್ ಕಿಟ್ʼ ಎಂದು ಕರೀತಾ ಇದ್ರು. ಇದರ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ.
ಹಗರಣ ಯಾಕೆ ಎಂದರೆ ಮುಕ್ತ ಮಾರುಕಟ್ಟೆಯಲಿ 1,378. 50 ರೂ.ಗೆ (ಸಾವಿರದ ಮುನ್ನೂರ ಎಪತ್ತೆಂಟು ರೂ. 50 ಪೈಸೆ)ಗೆ ಸಿಗುವ ಟೂಲ್ ಕಿಟ್‌ಗೆ ಸರ್ಕಾರ ಕೊಟ್ಟಿರುವುದು 3575 ರೂ. (ಮೂರು ಸಾವಿರದ ಮುನ್ನೂರ ಎಪ್ಪತ್ತೈದು). ಅಂದ್ರೆ ಒಂದು ಟೂಲ್ ಕಿಟ್‌ಗೆ 1,379 ರೂ. ಲಾಭ. 2024ರಲ್ಲಿ ಈ ರೀತಿ ಖರೀದಿಸಿದ ಒಟ್ಟು ಕಿಟ್‌ಗಳ ಸಂಖ್ಯೆ 67,380.
67,380 ಕಿಟ್‌ಗಳಿಗೆ ಒಂದು ಕಿಟ್‌ಗೆ 1,300 ರೂ. ನಂತೆ ಲೆಕ್ಕ ಹಾಕಿದೆ. ಮೇಲಿನ 379 ರೂ. ಬಿಟ್ಟೇಬಿಡೋಣ. ಎಷ್ಟು ಕೋಟಿ ಹೋಗಿರಬಹುದು.. ಓಪನ್ ಮಾರ್ಕೆಟ್‌ನಲ್ಲಿ ಸಿಗುವ ಕಿಟ್ ಖರೀದಿಸಿ ತಂದಿದ್ದರೂ 9,28 ಕೋಟಿಯಾಗುತ್ತಿತ್ತು. (9 ಕೋಟಿ 28 ಲಕ್ಷ) ಆದರೆ ಸರ್ಕಾರ ಬಲ್ಕ್ ಆಗಿ ಖರೀದಿಸಿದ್ದಕ್ಕೆ ಕೊಟ್ಟ ಹಣ ಎಷ್ಟು ಗೊತ್ತೇ 22 ಕೋಟಿ, 20 ಲಕ್ಷದ 234 ರೂ. ಸರ್ಕಾರದ ಈ ಬುದ್ದಿವಂತರಿಂದ ಆದ ನಷ್ಟ 12 ಕೋಟಿಗೂ ಹೆಚ್ಚು.
ವಿಶೇಷ ಎಂದರೆ ಲೋಕಾಯುಕ್ತ ತನಿಖೆಯಲ್ಲಿ ಈ ವಿಷಯ ಗೊತ್ತಾಗಿದೆ. ಡಿ ಭಾರತಿ, ಸಂಗಪ್ಪ ಉಪಾಧ್ಯ ಎಂಬುವವರ ವಿರುದ್ಧ ಆರೋಪಗಳೂ ಕೇಳಿ ಬಂದಿವೆ. ದೆಹಲಿಯ ನೋಯ್ದಾದಲ್ಲಿರುವ ಮೆನರ್ಸ್ ಅಭಿಲಾಷ ಕಮರ್ಷಿಯಲ್ ಪ್ರೈ.ಲಿ. ಕಂಪೆನಿಗೆ ಹಣ ಹೋಗಿದೆ. ಆದರೆ ವಿಚಿತ್ರವೇನು ಗೊತ್ತೇ.. ಈ ಕುರಿತು ತನಿಖೆ ಮಾಡಬೇಕು ಎಂದರೆ ಸರ್ಕಾರ ಮೊದಲು ಅನುಮತಿ ಕೊಡಬೇಕು. ಈ ಹಗರಣ ಆಚೆ ಬಂದು 8 ತಿಂಗಳಾಗಿದೆ. ಅನುಮತಿ ಸಿಕ್ಕಿಲ್ಲ.
ಇದು ಸಂತೋಷ್ ಲಾಡ್ ಅವರು ಮಾಜಿ ಆದ ಮೇಲೆ ನಡೆದ ಹಗರಣ ಅಲ್ಲ. ಅಧಿಕಾರದಲ್ಲಿದ್ಧಾಗಲೇ ನಡೆದ ಹಗರಣ. ಅವರೇ ಈ ಹಗರಣದ ತನಿಖೆಗೆ ಅನುಮತಿ ನೀಡಿಲ್ಲ ಎಂದ ಮೇಲೆ, ಸಹಜವಾಗಿಯೇ ಅನುಮಾನ ಅವರತ್ತಲೂ ತಿರುಗುತ್ತದೆ.



