ಸೋನಂ ವಾಂಗ್ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯವಾಗಿದೆ. ಹಾಗಂತ ಅವರ ಬೇಡಿಕೆಗಳು ಈಡೇರಿವೆ ಎಂದಲ್ಲ. ಉಪವಾಸವಂತೂ ಅಂತ್ಯವಾಗಿದೆ. ಇದರ ನಡುವೆ ಬಹುತೇಕರಿಗೆ ಕಾಡಿರುವ ಪ್ರಶ್ನೆ ಒಂದೇನೆಂದರೆ.. ವಾಂಗ್ಚುಕ್ ಉಪವಾಸ ಸತ್ಯಾಗ್ರಹ ವೇಳೆ ಉಪ್ಪು ನೀರು ಕುಡಿಯುತ್ತಿದ್ದ ವಿಷಯ. ಸೋನಂ ಅವರು ಹಣ್ಣು, ತರಕಾರಿ, ರೊಟ್ಟಿ, ಜ್ಯೂಸ್.. ಇತ್ಯಾದಿ ಯಾವುದೇ ಘನ ಅಥವಾ ದ್ರವ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಉಪ್ಪು ನೀರನ್ನು ತೆಗೆದುಕೊಳ್ಳುತ್ತಿದ್ದರು. ಅದೂ ಕೂಡಾ ಕಲ್ಲುಪ್ಪು ಮತ್ತು ನೀರು. ಹಾಗೆಂದರೆ ಇದು ಉಪವಾಸ ಹೇಗಾಗುತ್ತೆ ಎನ್ನಬೇಡಿ. ಉಪವಾಸ ಸತ್ಯಾಗ್ರಹ ಎಂದರೆ ಸಾಯುವುದಲ್ಲ, ಒತ್ತಡ ಹೇರುವುದು. ಅಂದಹಾಗೆ ಉಪ್ಪು ಮತ್ತು ನೀರನ್ನು ಮಾತ್ರವೇ ಕುಡಿಯುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಧಾರ್ಮಿಕ ಕಾರಣಗಳೂ ಇವೆ.
ಶಾಸ್ತ್ರದ ಪ್ರಕಾರ : ದೇವರ ಪೂಜೆಗೆ ಸಂಬಂಧಿಸಿದಂತೆ, ವ್ರತಗಳನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳನ್ನು ನಮ್ಮ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ನಿಯಮಗಳಲ್ಲಿ ಉಪವಾಸದ ಸಮಯದಲ್ಲಿ ಪುಡಿ ಉಪ್ಪನ್ನು ತಿನ್ನಬಾರದು ಕಲ್ಲುಪ್ಪನ್ನು ಬಳಸಬಹುದು. ಕೆಲವರು ಫಲಾಹಾರ ಉಪವಾಸ ಮಾಡಿದರೆ, ಕೆಲವರು ದಿನದಲ್ಲಿ ಒಪ್ಪತ್ತು ಮಾತ್ರ ತಿನ್ನುತ್ತಾರೆ. ಅದೇ ರೀತಿ, ಉಪವಾಸ ಆಹಾರದ ಬಗ್ಗೆ, ಉಪವಾಸದ ಸಮಯದಲ್ಲಿ ಬಿಳಿ ಉಪ್ಪನ್ನು ಸೇವಿಸಬಾರದು. ಉಪವಾಸದ ಸಮಯದಲ್ಲಿ ಕಲ್ಲುಪ್ಪನ್ನು ಮಾತ್ರ ಯಾಕೆ ಸೇವಿಸಬೇಕೆಂದರೆ..
ಕಲ್ಲುಪ್ಪು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಉಪವಾಸದಲ್ಲಿ ಬಳಸುವುದರಿಂದ ಗ್ರಹಗಳ ಋಣಾತ್ಮಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ.. ದೇಹದಿಂದ ಹೊರಹೊಮ್ಮುವ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಕಲ್ಲು ಉಪ್ಪು ಚಂದ್ರ ಮತ್ತು ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಚಂದ್ರನು ಮನಸ್ಸನ್ನು ಪ್ರತಿನಿಧಿಸುತ್ತಾನೆ, ಆದರೆ ಶುಕ್ರನು ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತಾನೆ ಎನ್ನುವ ನಂಬಿಕೆಯಿದೆ. ಕಲ್ಲುಪ್ಪು ಸೇವನೆಯಿಂದ ಜಾತಕದಲ್ಲಿ ಚಂದ್ರ ಮತ್ತು ಶುಕ್ರ ಬಲಗೊಳ್ಳುತ್ತಾರೆ. ಇದರಿಂದ ಆತಂಕ ನಿವಾರಣೆಯಾಗುತ್ತದೆ. ಕಲ್ಲುಪ್ಪು ನೈಸರ್ಗಿಕವಾಗಿ ಚಿಕ್ಕ ಚಕ್ಕ ಕಲ್ಲುಗಳಂತೆ ಇರುತ್ತದೆ. ಅದಕ್ಕಾಗಿಯೇ ಇದನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ಏಕಾದಶಿ, ನವರಾತ್ರಿ, ಮಹಾಶಿವರಾತ್ರಿ, ಸೋಮವಾರಗಳು ಮತ್ತು ಇನ್ನೂ ಅನೇಕ ಉಪವಾಸಗಳಲ್ಲಿ ಕಲ್ಲುಪ್ಪನ್ನು ಬಳಸಲಾಗುತ್ತದೆ.
ವೈಜ್ಞಾನಿಕ ಕಾರಣ ಏನು..?
ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರು ದೀರ್ಘಾವಧಿಯ ಉಪವಾಸ ಸತ್ಯಾಗ್ರಹದ ಸಮಯದಲ್ಲಿ ದೇಹದಲ್ಲಿ ನಿರ್ಜಲೀಕರಣ (Dehydration) ಉಂಟಾಗುವುದನ್ನು ತಡೆಯಲು ಮತ್ತು ದೇಹದ ಲವಣಾಂಶ ಅಥವಾ ಖನಿಜಗಳ ಮಟ್ಟವನ್ನು (Electrolyte Balance) ಕಾಪಾಡಿಕೊಳ್ಳಲು ಉಪ್ಪು ಮಿಶ್ರಿತ ನೀರನ್ನು ಕುಡಿಯುತ್ತಿದ್ದರು. ದೀರ್ಘಕಾಲ ಆಹಾರ ತ್ಯಜಿಸಿದಾಗ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಂನಂತಹ ಪ್ರಮುಖ ಎಲೆಕ್ಟ್ರೋಲೈಟ್‌ಗಳ ಕೊರತೆ ಉಂಟಾಗುತ್ತದೆ. ನೀರಿನೊಂದಿಗೆ ಉಪ್ಪನ್ನು ತೆಗೆದುಕೊಳ್ಳುವುದರಿಂದ ಈ ಲವಣಾಂಶಗಳ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಉಪ್ಪು ನೀರು ದೇಹವನ್ನು ಸ್ವಲ್ಪ ಮಟ್ಟಿಗೆ ಹೈಡ್ರೇಟ್ ಆಗಿಡಲು ನೆರವಾಗುತ್ತದೆ. ಇದು ರಕ್ತದೊತ್ತಡ ತೀವ್ರವಾಗಿ ಕುಸಿಯದಂತೆ ತಡೆದು, ಹೃದಯ ಮತ್ತು ಮೂತ್ರಪಿಂಡಗಳ (Kidneys) ಕಾರ್ಯನಿರ್ವಹಣೆಗೆ ಪ್ರಾಣಾಪಾಯ ಬರದಂತೆ ರಕ್ಷಿಸುತ್ತದೆ. ಉಪ್ಪು ನೀರು ದೇಹದ ದ್ರವದ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದರೂ, ಅದು ದೇಹಕ್ಕೆ ಅಗತ್ಯವಿರುವ ಕ್ಯಾಲೊರಿ ಅಥವಾ ಗ್ಲೂಕೋಸ್ ಶಕ್ತಿಯನ್ನು ನೀಡುವುದಿಲ್ಲ. ಹಾಗಾಗಿಯೇ ಉಪವಾಸದ ದಿನಗಳು ಹೆಚ್ಚಾದಂತೆ ಅವರ ದೇಹದ ತೂಕ ಗಣನೀಯವಾಗಿ ಇಳಿಕೆಯಾಗಿತ್ತು.



