ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಎನ್ನಿಸಿಕೊಂಡಿರುವ ಜಮೀರ್ ಅಹ್ಮದ್ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಲಿಂಗಾಯತ ಸ್ವಾಮೀಜಿಗಳೂ ಜಮೀರ್ ಪರ ಬ್ಯಾಟಿಂಗ್ ಮಾಡ್ತಿದ್ಧಾರೆ. ಈ ನಡುವೆ ಕೋಡಿಮಠದ ಸ್ವಾಮೀಜಿಗಳಲು ಹೇಳಿರುವ ಭವಿಷ್ಯ ಕುತೂಹಲಕಾರಿಯಾಗಿದೆ. ಈ ಮೊದಲು ಹೇಳುತ್ತಿದ್ದ ಭವಿಷ್ಯಗಳಲ್ಲಿ ವಿಷಯ ಹುಡುಕಬೇಕಾದ ಹೊಣೆಯನ್ನು ಭಕ್ತರಿಗೇ ಬಿಡುತ್ತಿದ್ದ, ಒಗಟಿನಂತೆ ಭವಿಷ್ಯ ಹೇಳುತ್ತಿದ್ದ ಕೋಡಿಶ್ರೀ ಈ ಬಾರಿ ಕ್ಲಿಯರ್ ಆಗಿ ಭವಿಷ್ಯ ಹೇಳಿದ್ಧಾರೆ. ಜಮೀರ್ ಇಲ್ಲದೆ ಸಂಪುಟ ಇರುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ಕೋಡಿಮಠದ (Kodi Math) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಜಮೀರ್ ಪರ ಬ್ಯಾಟಿಂಗ್ ಮಾಡಿದ್ದು, ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರವೇ ಅಲ್ಲ, ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಸರ್ಕಾರ. ಆ ದೃಷ್ಟಿಯಿಂದ ಜಮೀರ್ ಅವರು ಮಂತ್ರಿಮಂಡಲ ಸೇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹಾಸನದ ಅರಸೀಕೆರೆಯ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕೋಡಿಶ್ರೀ, ಜಮೀರ್ ಅಹಮ್ಮದ್ ಖಾನ್ ಅವರ ಆಡಿಯೋ ವಿಚಾರ ಅಪಪ್ರಚಾರದ ಉದ್ದೇಶದಿಂದ ಆಗಿದೆ. ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು. ಇದು ಮೊದಲು ಬಂದು ಆ ಅಪಪ್ರಚಾರ ಮುಚ್ಚಿ ಹೋಗುತ್ತಿದೆ. ಜಮೀರ್ ಹೆದರುವ ಅವಶ್ಯಕತೆ ಇಲ್ಲ. ಅವರು ಮತ್ತೊಮ್ಮೆ ಮಂತ್ರಿಮಂಡಲ ಸೇರುತ್ತಾರೆ ಎಂದಿದ್ದಾರೆ.
ಈ ಮೂಲಕ ಕೋಡಿಶ್ರೀಗಳು ಜಮೀರ್ ಪರ ಬ್ಯಾಟಿಂಗ್ ಮಾಡ್ತಿದ್ಧಾರೆ. ಜಮೀರ್ ಅವರಿಗೆ ಸಂಪುಟ ಸ್ಥಾನ ತಪ್ಪುವುದಕ್ಕೆ ದಾವಣಗೆರೆ ಬೈ ಎಲೆಕ್ಷನ್ ಆಡಿಯೋ ಕೂಡಾ ಕಾರಣ. ಆದರೆ ಕೋಡಿಶ್ರೀಗಳು ಆ ಆಡಿಯೋವನ್ನೇ ಸುಳ್ಳು, ಅದು ಅಪಪ್ರಚಾರ ಎನ್ನುತ್ತಿದ್ಧಾರೆ. ಆ ಮೂಲಕ ಜಮೀರ್ ಅವರಿಗೆ ಕ್ಲೀನ್ ಚಿಟ್ ಕೂಡಾ ಕೊಟ್ಟಿದ್ದಾರೆ. ಜಮೀರ್ ಜೊತೆಗೆ ನಮ್ಮ ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನ ಸಿಗುತ್ತದೆ. ಯೋಚನೆ ಮಾಡುವುದು ಬೇಡ. ಸಂಬಂಧಪಟ್ಟವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ನಾಳೆಯೂ ಮಾತನಾಡುತ್ತೇನೆ. ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ಅವರು ಮತ್ತೊಮ್ಮೆ ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬೇಡಿ. ಶಾಂತಿಯಿಂದ ಇರಿ. ಇದರ ಬಗ್ಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರಂತೆ.
ಸಿದ್ದರಾಮಯ್ಯನವರೇ ಸ್ವಯಂಪ್ರೇರಿತರಾಗಿ ಬಿಟ್ಟು ಕೊಟ್ಟರೇ ಮಾತ್ರ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಈ ಹಿಂದೆ ಇದೇ ಕೋಡಿಶ್ರೀ ಭವಿಷ್ಯ ನುಡಿದಿದ್ದರು. ಅದರಂತೆ ಸಿದ್ದರಾಮಯ್ಯನವರು ತಾವಾಗಿಯೇ ಯಾವುದೇ ಗೊಂದಲ ಮಾಡಿಕೊಳ್ಳದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಡಿಕೆ ಶೀವಕುಮಾರ್ ಅವರು ಸಿಎಂ ಆಗಿದ್ದು, ಕೋಡಿಶ್ರೀ ಹೇಳಿದ್ದ ಭವಿಷ್ಯ ನಿಜವಾಗಿದೆ. ಇದೀಗ ಜಮೀರ್ ಅವರು ಮಂತ್ರಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದು, ಏನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಈ ಮಧ್ಯೆ ಜಮೀರ್ ಅವರ ಆಡಿಯೋ ಅಸಲಿತನ ಪತ್ತೆಗೆ ದಾವಣಗೆರೆ ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ಧಾರೆ. ದೂರುದಾರ ಮೊಹಮ್ಮದ್ ಸಿರಾಜ್ ಅವರನ್ನು ವಿಚಾರಣೆ ನಡೆಸಲು ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಆಡಿಯೋ ವೈರಲ್ ಮಾಡಿದ್ದ ಕರ್ನಾಟಕ ಕಾಕ್ರೋಚ್ ಖಾತೆಯ ಮೂಲ ಪತ್ತೆಗೂ ಸಹ ಸಹ ಪೊಲೀಸರು ಮುಂದಾಗಿದ್ದಾರೆ. ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.



