ಡಿಕೆ ಶಿವಕುಮಾರ್ ಜೊತೆ ಯಡಿಯೂರಪ್ಪ ಕುಟುಂಬದ ವ್ಯವಹಾರ ಸಂಬಂಧ ಇದೆ. ಜೊತೆಯಲ್ಲೇ ಬಿಸಿನೆಸ್ ಮಾಡ್ತಾರೆ. ಇದು ಬಸನಗೌಡ ಪಾಟೀಲ ಯತ್ನಾಳ್ ಅವರು ಮಾಡಿದ್ದ ಆರೋಪ. ಅದರಿಂದ ಅವರು ಇವತ್ತಿಗೂ ಹಿಂದೆ ಸರಿದಿಲ್ಲ. ಈ ಕುರಿತು ಹಾಗೇನೂ ಇಲ್ಲ ಎಂದು ಆರೋಪವನ್ನು ಇಗ್ನೋರ್ ಮಾಡ್ತಿದ್ದ ಯಡಿಯೂರಪ್ಪ ಕುಟುಂಬ ಈಗ ಸ್ಪಷ್ಟನೆ ನೀಡಿದೆ. ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಅವರೇ ಅತ್ಯಂತ ಸ್ಪಷ್ಟವಾಗಿ ಈ ಕುರಿತು ಹೇಳಿದ್ದಾರೆ. ಅಂದಹಾಗೆ ಇಂತಹ ಆರೋಪ ಮಾಡೋವ್ರು ಮುಠ್ಠಾಳರಂತೆ. ಅಂದಹಾಗೆ ಸುದ್ದಿ ಹಬ್ಬಿದ ಬಗೆ ಮತ್ತು ಫ್ಯಾಕ್ಟ್ ಚೆಕ್ ಕೂಡಾ ಮಾಡಿದ ನಂತರ ತಿಳಿದಿದ್ದೇ ಬೇರೆ.
ತಾವು ಡಿ.ಕೆ.ಶಿವಕುಮಾರ್ ಅವರು ವ್ಯವಹಾರ ಪಾಲುದಾರರು ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ʻʻಯಾವ ಮುಠ್ಠಾಳ ಹೇಳುತ್ತಾನೆ ಎಂಬ ಮಾಹಿತಿ ಇಲ್ಲ. ನಾನು ಮತ್ತು ಡಿಕೆಶಿ ಪಾಲುದಾರರು ಎಂಬುದು ಮೂರ್ಖತನದ ಹೇಳಿಕೆ. ಯಾರೋ ಮುಠ್ಠಾಳರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರ ಜೊತೆಯೂ ಯಾವುದೇ ರೀತಿಯ ಉದ್ಯಮ ವ್ಯವಹಾರಗಳನ್ನು ಇಟ್ಟುಕೊಂಡಿಲ್ಲʼʼ ಎಂದು ನೇರವಾಗಿ ಉತ್ತರ ಕೊಟ್ಟಿದ್ಧಾರೆ.
ಈ ಹಿಂದೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರ ರಾಜಕೀಯ ವಿರೋಧಿಗಳು, “ಶಾಸಕರ ಖರೀದಿ ವ್ಯವಹಾರ ಮತ್ತು ಆಂತರಿಕ ಹೊಂದಾಣಿಕೆ ರಾಜಕೀಯ ಡಿ. ಕೆ. ಶಿವಕುಮಾರ್ ಹಾಗೂ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತು” ಎಂದು ಆರೋಪಿಸಿದ್ದರು.
ಫ್ಯಾಕ್ಟ್ ಚೆಕ್ ಏನು ಹೇಳಿತ್ತು..?
ಹಳೆಯ ವಿಡಿಯೋ ಸಂದರ್ಶನವೊಂದರ ತುಣುಕನ್ನು ತಪ್ಪಾಗಿ ಅರ್ಥೈಸಿ, ವಿಜಯೇಂದ್ರ ಅವರೇ ಡಿಕೆಶಿ ಜೊತೆ ಬಿಸಿನೆಸ್ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಫ್ಯಾಕ್ಟ್-ಚೆಕ್ (ನಿಜಾಂಶ ಪರಿಶೀಲನೆ) ಮೂಲಕ ಅದು ಸುಳ್ಳು ಎಂದು ಸಾಬೀತಾಗಿತ್ತು. ‘Yatnal Brigade – ಯತ್ನಾಳ ಬ್ರಿಗೇಡ್’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಒಂದನ್ನು ಹಾಕಲಾಗಿತ್ತು. ಅದರಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್‌ನ ಪ್ರಶಾಂತ್ ನಾತು ಅವರೊಂದಿಗೆ ನಡೆಸಿದ್ದ ಬಿವೈ ವಿಜಯೇಂದ್ರ ಅವರ ಸಂದರ್ಶನದ ಕ್ಲಿಪ್ಪಿಂಗ್ ಇತ್ತು. ಜೊತೆಗೆ, “ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಬಿಜಿನೆಸ್ ಪಾರ್ಟ್‌ನರ್ ಅಂತೆ, ಸತ್ಯ ಒಪ್ಪಿಕೊಂಡ ವಿಜಯೇಂದ್ರ” ಎಂದು” ಬರೆಯಲಾಗಿತ್ತು. ಆದರೆ ಅದೇ ಸಂದರ್ಶನ ಪೂರ್ತಿ ನೋಡಿದರೆ ವಿಜಯೇಂದ್ರ ಪೂರ್ತಿ ಉತ್ತರ ಬೇರೆಯೇ ಇತ್ತು. ವಿಜಯೇಂದ್ರ ಕೊಟ್ಟ ಉತ್ತರದ ಅರ್ಧ ಭಾಗ ಕಟ್ ಮಾಡಿ ವಿಡಿಯೋ ವೈರಲ್ ಮಾಡಲಾಗಿತ್ತು.
ಇದೀಗ ವಿಜಯೇಂದ್ರ ನೇರವಾಗಿಯೇ ಕೊಟ್ಟಿರುವ ಉತ್ತರ ಆರೋಪ ಮಾಡುವವರು ಮುಠ್ಠಾಳರು ಎಂದಿದೆ. ಯತ್ನಾಳ್ ಟೀಂ ತಮ್ಮ ವಿರುದ್ಧ ವಿನಾಕಾರಣ ಕತ್ತಿ ಮಸೆಯುತ್ತಿದೆ ಎಂದು ತಿರುಗೇಟು ನೀಡಿದ್ಧಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ಪರಸ್ಪರ ವಾಗ್ದಾಳಿ ಪ್ರತಿದಾಳಿ ನಡೆಸುತ್ತಲೇ ಇರುತ್ತಾರೆ.



