ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದು ಜೂನ್ 3ರ ನಂತರ. ಅದೂವರೆಗೆ ಅವರೇ ಸಿಎಂ ಆಗಿದ್ದರು. ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ಮಾಡಿದ್ದ ಕಾಂಗ್ರೆಸ್, ಅವರ ಮಾತನ್ನೇ ಕೇಳುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ. ಆಗಿರುವುದು ಏನೆಂದರೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಅವರು ಕೇಳಿದಂತೆ ಮಂತ್ರಿಗಿರಿ ಕೊಡಿಸುವುದಕ್ಕೆ ಆಗುತ್ತಿಲ್ಲ. ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇದ್ದರೂ, ಹೈಕಮಾಂಡ್ ಸಿದ್ದು ಟೀಂನ ಶಾಸಕರನ್ನು ಒಪ್ಪುತ್ತಿಲ್ಲ. ಅಂತಹ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತರೇ ಹೆಚ್ಚಿರುವುದು ವಿಶೇಷ. ಎಲ್ಲವೂ ಸಿದ್ದರಾಮಯ್ಯ ಹೇಳಿದಂತೆ ನಡೆಯಬೇಕೆಂದರೆ ಹೇಗೆ.. ಆಗ ʻಸಿದ್ದರಾಮಯ್ಯ ಸಂಪುಟದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿʼ ಎಂದು ಲೇವಡಿ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದೆಯಂತೆ ಹೈಕಮಾಂಡ್.
ಹೆಚ್ ಸಿ ಮಹದೇವಪ್ಪ : ಸಿದ್ದು ಮತ್ತು ಮಹದೇವಪ್ಪನವರ ಫ್ರೆಂಡ್ ಶಿಪ್‌ಗೆ ಸುಮಾರು 40 ವರ್ಷಗಳ ಇತಿಹಾಸ ಇದೆ. ಡಿಕೆ ಕ್ಯಾಬಿನೆಟ್ ಭಾಗ-01ರಲ್ಲಿ ಮಹದೇವಪ್ಪ ಅವರಿಗೆ ಜವಾಬ್ದಾರಿ ಸಿಕ್ಕಿರಲಿಲ್ಲ. ಜನತಾದಳ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ 4 ಬಾರಿ ಮಂತ್ರಿಯಾಗಿದ್ದ ಮಹದೇವಪ್ಪನವರ ಬಗ್ಗೆ ಹೈಕಮಾಂಡ್ ಹ್ಯಾಪಿ ಇಲ್ಲ. 2018ರಲ್ಲಿ ಪಕ್ಷದ ಹಿನ್ನಡೆಗೆ ಮಹದೇವಪ್ಪನವರೂ ಕಾರಣ. ಅವರು ಸ್ವಲ್ಪ ಕೆಲಸ ಮಾಡಿದ್ದರೆ ಗೆಲ್ಲಬಹುದಿತ್ತು ಎಂಬ ನಂಬಿಕೆ ಹೈಕಮಾಂಡ್‌ಗೆ ಇವತ್ತಿಗೂ ಇದೆ. 2023ರಲ್ಲಿ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಹಠ ಹಿಡಿದು ಮಹದೇವಪ್ಪ ಅವರನ್ನು ಮಂತಿ ಮಾಡಿದ್ದರು. ಆದರೆ ಡಿಕೆ ಸಂಪುಟ ಸೇರ್ಪಡೆ ಬಗ್ಗೆ ಹೈಕಮಾಂಡ್ ಸ್ಪಷ್ಟವಾಗಿ ನೋ ಎನ್ನುತ್ತಿದೆ. ಸಿದ್ದರಾಮಯ್ಯ ಪ್ರಯತ್ನ ಬಿಟ್ಟಿಲ್ಲ.
ಬಸವರಾಜ ರಾಯರೆಡ್ಡಿ : ರಾಯರೆಡ್ಡಿ ವಿಷಯದಲ್ಲೂ ಸಿದ್ದೃರಾಮಯ್ಯ ಅವರಿಗೆ ಜಯ ಸಿಕ್ಕಿಲ್ಲ. ಸಿದ್ದರಾಮಯ್ಯ ಏನೇ ಹೇಳಿದರೂ, ತಮಗೆ ಇರುವ ಇನ್ನೊಂದು ರಿಪೋರ್ಟ್ ಮುಂದಿಡುತ್ತಿರುವ ಹೈಕಮಾಂಡ್, ಸಿದ್ದರಾಮಯ್ಯ ಅವರ ಕೈ ಕಟ್ಟಿ ಹಾಕುತ್ತಿದೆ.
ಇನ್ನು ತಮ್ಮ ಸಂಪುಟದಲ್ಲಿ ಸ್ಥಾನ ಕೊಡದೇ ಇದ್ದ ಕೆಲವರಿಗೆ ಡಿಕೆ ಸಂಪುಟದಲ್ಲಿ ಸ್ಥಾನ ಕೊಡಿಸಬೇಕು ಎಂಬ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ, ಸಿದ್ದರಾಮಯ್ಯ ಅವರ ಆಪ್ತ ವಲಯದ ಪ್ರಭಾವ ಹೆಚ್ಚಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಮುನ್ನ ಅವರ ಆಪ್ತ ಕಾರ್ಯದರ್ಶಿಗಳು ಹಾಗೂ ಪ್ರಮುಖ ಆಡಳಿತಾತ್ಮಕ ಅಧಿಕಾರಿಗಳನ್ನು ಸರ್ಕಾರದ ಇತರೆ ನಿಗಮ ಹಾಗೂ ಪ್ರಮುಖ ಹುದ್ದೆಗಳಿಗೆ ಸುರಕ್ಷಿತವಾಗಿ ವರ್ಗಾವಣೆ ಮಾಡಲಾಗಿದೆ.
ಹೀಗಿರುವಾಗ ಎಲ್ಲವೂ ನೀವು ಹೇಳಿದಂತೆಯೇ ನಡೆಯಬೇಕು ಎಂದರೆ ಹೇಗೆ.. ಪಕ್ಷ ಸಂಘಟನೆಯೂ ಮುಖ್ಯ. ಮಹದೇವಪ್ಪ, ರಾಯರೆಡ್ಡಿ ಮೊದಲಾದವರು ಪಕ್ಷದ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳಲಿ ಎನ್ನುವುದು ಹೈಕಮಾಂಡ್ ಸಲಹೆ. ಅಂದಹಾಗೆ ಸಿದ್ದರಾಮಯ್ಯ ಬಣದಲ್ಲಿರುವ ಬಹುತೇಕ ನಾಯಕರು ಪಕ್ಷದ ಸಂಘಟನೆ ಜವಾಬ್ದಾರಿ ಎಂದ ಕೂಡಲೇ ದೂರ ಸರಿಯುವುದು ಹೊಸದೇನಲ್ಲ. ಈ ನಡುವೆ ಸಿದ್ದರಾಮಯ್ಯ ತಮ್ಮ ಕುಟುಂಬ, ಮಗನ ಬಗ್ಗೆ ಮಾತ್ರ ಹೊಣೆ ಹೊತ್ತುಕೊಂಡರು, ಉಳಿದವರನ್ನು ಕೈಬಿಟ್ಟರು ಎಂಬ ಆಕ್ರೋಶವೂ ಅವರ ಬಣದಲ್ಲೇ ಕೇಳಿ ಬರ್ತಾ ಇದೆ.



