ಕಿಡ್ನಿಯಲ್ಲಿ ಕಲ್ಲಿದೆಯಂತೆ.. ಒಂದಾನೊಂದು ಕಾಲಕ್ಕೆ ಅದರಷ್ಟು ದೊಡ್ಡ, ಗಂಭೀರವಾದ ಸಮಸ್ಯೆ ಇರಲೇ ಇಲ್ಲ. ಕಿಡ್ನಿ ಸ್ಟೋನ್ ಎಂದ ಕೂಡಲೇ ಜನ ಹೆದರುತ್ತಿದ್ದರು. ಏಕೆಂದರೆ ಕೆಲವೇ ವರ್ಷಗಳ ಹಿಂದೆ ಕಿಡ್ನಿ ಸ್ಟೋನ್ ಎನ್ನುವುದು ಅಪರೂಪದ ಕಾಯಿಲೆಯಾಗಿತ್ತು. 10 ಸಾವಿರಕ್ಕೊಬ್ಬರಿಗೆ ಪ್ರಾಬ್ಲಂ ಬಂದರೆ ಹೆಚ್ಚು.. ಎಂಬಂತೆ ಇದ್ದ ಪರಿಸ್ಥಿತಿ ಈಗ ಬದಲಾಗಿದೆ. 50 ದಾಟಿದ ಮೇಲೆ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆ ಈಗ 25-30ರಲ್ಲೇ ಬರುತ್ತಿದೆ. 40-45ರಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಇದಕ್ಕೆಲ್ಲ ಕಾರಣ ಏನು..? ಕಾಲ ಕೆಟ್ಟು ಹೋಗಿದೆ ಎನ್ನಬೇಡಿ. ಕೆಟ್ಟಿರುವುದು ಕಾಲ ಅಲ್ಲ. ನಾವು. ಮೂತ್ರಕೋಶದಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ (Kidney Stone) ಸಮಸ್ಯೆ ಒಂದು. ರಾಷ್ಟ್ರೀಯ ಮಧುಮೇಹ, ಜೀರ್ಣಕಾರಿ ಮತ್ತು ಮೂತ್ರಪಿಂಡ ರೋಗಗಳ ಸಂಸ್ಥೆ(NIDDK)ಯ ವರದಿ ಪ್ರಕಾರ, ಭಾರತದಲ್ಲಿ ಸುಮಾರು 8 ರಿಂದ 12 ರಷ್ಟು ಜನರಿಗೆ ಕಿಡ್ನಿ ಸ್ಟೋನ್‌ಗಳು ಇವೆ. ಕಿಡ್ನಿ ಸ್ಟೋನ್ ಸಣ್ಣ ಕಾಯಿಲೆಯಲ್ಲ. ಪ್ರತಿ ವರ್ಷ ಸುಮಾರು 20 ಲಕ್ಷ ಭಾರತೀಯರಿಗೆ ನರಕ ದರ್ಶನ ತೋರಿಸುತ್ತಿದೆ ಕಿಡ್ನಿ ಸ್ಟೋನ್.
ಕಿಡ್ನಿ ಸ್ಟೋನ್ಸ್ಗೆ ಕಾರಣವೇನು?
ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದಂತಹ ಖನಿಜಗಳು ಹೆಚ್ಚು ಸಾಂದ್ರತೆಯಲ್ಲಿ ಸೇರಿ ಮೂತ್ರಪಿಂಡಗಳಲ್ಲಿ ಗಟ್ಟಿ ಹರಳುಗಳಂತೆ ನಿಕ್ಷೇಪವಾದಾಗ. ಕಿಡ್ನಿ ಸ್ಟೋನ್ ಸಮಸ್ಯೆ ಆಗುತ್ತದೆ. ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಬದಲಾಗಿರುವ ಜೀವನ ಶೈಲಿಯೂ ಕಾರಣವಾಗಿದೆ.
ಹೆಚ್ಚು ನೀರು ಕುಡಿಯಲ್ಲ..!
ನೀರು ಕುಡಿದರೆ ಅರ್ಧಕ್ಕರ್ಧ ಸಮಸ್ಯೆ ಇತ್ಯರ್ಥವಾಗಬಹುದು. ಆದರೆ ಈಗಿನ ಜನರೇಷನ್ನಿನವರಂತೂ ನೀರು ಕುಡಿಯೋದೇ ಕಡಿಮೆ. ಕಾರ್ಮಿಕರು, ಚಾಲಕರು ಮತ್ತು ಹೊರಗೆ ಕೆಲಸ ಮಾಡುವವರು ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದರಿಂದ ಈ ಸಮಸ್ಯೆಗೆ ಹೆಚ್ಚು ಅಪಾಯವಿರುತ್ತದೆ. ಅಲ್ಲದೆ, ನಗರ ಮತ್ತು ಗ್ರಾಮಗಳಲ್ಲಿ ಶುದ್ಧ ನೀರು ಸಿಗುವುದು ಕಷ್ಟ. ಕಸದಿಂದ ತುಂಬಿದ ನೀರು ಕುಡಿದರೆ ಕಿಡ್ನಿ ಸ್ಟೋನ್‌ಗಳು ಬರುವ ಸಾಧ್ಯತೆ ಹೆಚ್ಚು. ಆರೋಗ್ಯವಂತ ವ್ಯಕ್ತಿ ಪ್ರತಿದಿನ 3-4 ಲೀಟರ್ ನೀರು ಕುಡಿಯಬೇಕು. ನೀರನ್ನೇ ಕುಡಿಯದಿದ್ದರೆ ಕಿಡ್ನಿ ಸ್ಟೋನ್ ಪತ್ತೆಯಾದಾಗ ಲಕ್ಷ ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕು.
ಮಾಂಸಾಹಾರ ಸೇವನೆ ಹೆಚ್ಚು..!
ಮೊದಲೆಲ್ಲ ಮಾಂಸಾಹಾರ ಸೇವನೆ ಕಡಿಮೆ ಇತ್ತು. ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ನಾನ್ ವೆಜ್ ತಿನ್ನುತ್ತಿದ್ದ ಕಾಲ ಹೋಗಿ, ಈಗ ಡೈಲಿ ನಾನ್ ವೆಜ್ ಎಂಬಲ್ಲಿಗೆ ಬಂದು ನಿಂತಿದೆ. ಮನುಷ್ಯನ ದೇಹಕ್ಕೆ ಹೀಗೆ ತಿನ್ನುವ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದೆಯೇ ಎಂದು ನೋಡಿದರೆ ಅದೂ ಇಲ್ಲ. ಹೆಚ್ಚು ಹೆಚ್ಚು ನಾನ್ ವೆಜ್ ತಿನ್ನೋದ್ರಿಂದ ಯೂರಿಕ್ ಆಮ್ಲ ಹೆಚ್ಚಾಗಿ, ಕಿಡ್ನಿ ಸ್ಟೋನ್‌ಗಳು ಬರಬಹುದು ಎಂದು ವೈದ್ಯಕೀಯ ಅಧ್ಯಯನಗಳು ಹೇಳುತ್ತವೆ. ನಾವು ಕುಡಿಯುವ ತಂಪು ಪಾನೀಯಗಳು ಮತ್ತು ಸಕ್ಕರೆ ಪಾನೀಯಗಳಲ್ಲಿರುವ ಫ್ರಕ್ಟೋಸ್‌ನಿಂದ ಕಿಡ್ನಿ ಸ್ಟೋನ್‌ಗಳ ಅಪಾಯ ಎರಡು ಪಟ್ಟು ಹೆಚ್ಚಾಗುತ್ತದೆ. ಇದರಿಂದಲ್ಲೇ ಬೊಜ್ಜು ಮತ್ತು ಮಧುಮೇಹ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಮಧುಮೇಹದಿಂದ ಮೂತ್ರದ ರಾಸಾಯನಿಕ ಸಂಯೋಜನೆ ಬದಲಾಗಿ, ಕಿಡ್ನಿ ಸ್ಟೋನ್‌ಗಳು ಸುಲಭವಾಗಿ ರೂಪುಗೊಳ್ಳುತ್ತವೆ.
ವ್ಯಾಯಾಮವೇ ಇಲ್ಲ..!
ಭಾರತದಲ್ಲಿ 20 ರಿಂದ 30 ವರ್ಷ ವಯಸ್ಸಿನ ಯುವಜನರು ಈ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಇನ್ನೊಂದು ದೊಡ್ಡ ಕಾರಣ ವ್ಯಾಯಾಮವೇ ಇಲ್ಲದಿರುವುದು. ಕೆಟ್ಟ ಜೀವನಶೈಲಿ. ಹೆಚ್ಚು ಸಮಯ ಕುಳಿತುಕೊಳ್ಳುವುದು, ವ್ಯಾಯಾಮ ಮಾಡದಿರುವುದು, ನೀರು ಕುಡಿಯುವ ಬದಲು ಪ್ಯಾಕ್ ಮಾಡಿದ ಜ್ಯೂಸ್ ಮತ್ತು ಕೋಲ್ಡ್ ಡ್ರಿಂಕ್‌ಗಳನ್ನು ಹೆಚ್ಚು ಸೇವಿಸುವುದು, ಚಿಕ್ಕ ವಯಸ್ಸಿನಿಂದಲೇ ಜಂಕ್ ಫುಡ್ ತಿನ್ನುವುದು. ಇತ್ಯಾದಿ ಇತ್ಯಾದಿಗಳೂ ಕೂಡಾ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತಿವೆ. ತಿಂದಿದ್ದು ಜೀರ್ಣವಾಗದೆ ಹೋದರೆ ಏನಾಗುತ್ತದೆ.. ಎಲ್ಲೋ ಒಂದು ಕಡೆ ಯಾವುದೋ ಒಂದು ರೂಪದಲ್ಲಿ ಸ್ಟೋರೇಜ್ ಆಗಬೇಕಲ್ಲವೇ.. ಅದು ಕಿಡ್ನಿ ಸ್ಟೋನ್ ಆಗಿ ಕನ್ವರ್ಟ್ ಆಗಿ ದೇಹದ ಒಳಗೇ ಕುಳಿತುಕೊಳ್ಳುತ್ತದೆ. ಅಷ್ಟೆ.
ಇದೆಲ್ಲದರ ಜೊತೆಗೆ ಭಾರತದಲ್ಲಿ ಬೇಸಿಗೆಯಲ್ಲಿ ತುಂಬಾ ಬಿಸಿ ಇರುತ್ತದೆ. ಈ ತೀವ್ರ ಶಾಖದಿಂದ ದೇಹ ಬೆವರಿನ ಮೂಲಕ ಹೆಚ್ಚು ನೀರು ಕಳೆದುಕೊಳ್ಳುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಆಗುತ್ತದೆ. ಮೂತ್ರ ದಪ್ಪವಾಗುತ್ತದೆ. ಮೂತ್ರ ದಪ್ಪವಾದಾಗ ಅದರಲ್ಲಿರುವ ಖನಿಜಗಳು ಸುಲಭವಾಗಿ ಕಲ್ಲುಗಳಾಗಿ ರೂಪುಗೊಳ್ಳುತ್ತವೆ.
ಇಲ್ಲಿ ಸಮಸ್ಯೆಗಳನ್ನು ವಿವರಿಸಲಾಗಿದೆ. ಅದರಲ್ಲೇ ಪರಿಹಾರವೂ ಇದೆ.



