ಕರ್ನಾಟಕ ಬಿಜೆಪಿ ವಿಷಯದಲ್ಲಿ ದಶಕಗಳಿಂದಲೂ ನಿಷ್ಕ್ರಿಯವಾಗಿರುವ, ತಾವೇ ನೇಮಿಸಿದವರನ್ನು ದುರ್ಬಲಗೊಳಿಸುವ ಬಿಜೆಪಿ ಹೈಕಮಾಂಡ್ ಆಟ ಜೋರಾಗಿರುವಂತೆ ಕಾಣುತ್ತಿದೆ. ಬಿಜೆಪಿ ಹೈಕಮಾಂಡ್ ವಿಷಯಕ್ಕೆ ರಾಜ್ಯ ಬಿಜೆಪಿ ನಾಯಕರೇ ಬೇಸತ್ತು ಹೋಗುತ್ತಿದ್ದಾರೆ. ಕೆಲವು ನಾಯಕರಂತೂ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ತಮ್ಮ ತಮ್ಮ ಕ್ಷೇತ್ರಕ್ಕೆ ಇನ್ನಷ್ಟು ಸೀಮಿತವಾಗುವ ಆಲೋಚನೆಯಲ್ಲಿದ್ಧಾರೆ. ಇನ್ನೂ ಕೆಲವರಿಗೆ ಬೇರೆ ಪಕ್ಷಕ್ಕೆ ಹೋಗುವುದು ಇಷ್ಟ ಇಲ್ಲ. ಹೀಗಾಗಿ ಪಕ್ಷೇತರರಾಗಿ ನಿಲ್ಲುವುದು, ಪರಿಸ್ಥಿತಿ ಸರಿ ಹೋದಾಗ ಮತ್ತೆ ಬಿಜೆಪಿಗೆ ಬಂದರಾಯಿತು ಎಂಬ ಚಿಂತನೆಯಲ್ಲಿದ್ಧಾರೆ. ಇದು ದೆಹಲಿಯ ನಿಷ್ಕ್ರಿಯ ನಾಯಕರಿಗೆ ಎಚ್ಚರಿಕೆ ಗಂಟೆಯೂ ಹೌದು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ಜೋರಾಗಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಬೇಕು ಎಂಬ ಬೇಡಿಕೆ ಇದೆ. ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿತ್ತು. ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬ ಪರಿಸ್ಥಿತಿಗೆ ಈ ಆಡಿಯೋ ಕೈಗನ್ನಡಿ. ಹಾಗಂತ ವಿಜಯೇಂದ್ರ ಅವರನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಆಗುವುದಿಲ್ಲ. ಅವರಿಗೆ ಹೈಕಮಾಂಡ್ ಕೆಲವು ನಾಯಕರ ಬೆಂಬಲ ಇದೆ. ಆದರೆ ಬೆಂಬಲ ನೀಡುತ್ತಿರುವವರಿಗೆ ರೆಬಲ್ಸ್ ಬಣದ ಮೇಲೆಯೂ ಪ್ರೀತಿ ಇದೆ. ಅವರನ್ನು ಒಪ್ಪದೆ ಇರುವ ತಂಡವೂ ಅಷ್ಟೇ ಬಲಿಷ್ಠವಾಗಿದೆ.
ಮತ್ತೊಂದು ಕಡೆಯಲ್ಲಿ ಡಿವಿ ಸದಾನಂದ ಗೌಡ ವರ್ಸಸ್ ಎಸ್ ಆರ್ ವಿಶ್ವನಾಥ್ ನಡುವಿನ ಜಗಳ ವಿಪರೀತಕ್ಕೆ ಹೋಗುತ್ತಿದೆ. ಎಸ್ ಆರ್ ವಿಶ್ವನಾಥ್ ಅವರನ್ನು ಮುತ್ತಪ್ಪ ರೈ ಬಂಟ ಎಂದಿರುವ ಸದಾನಂದ ಗೌಡ, ಪಕ್ಷದ ನಾಯಕರಿಗೆ ಡ್ಯಾಮೇಜ್ ಮಾಡ್ತಿದ್ದಾರೆ. ಹೈಕಮಾಂಡ್ ಇಲ್ಲಿಯೂ ಮೌನವಾಗಿದೆ. ಹೀಗಾಗಿ ಎಸ್ ಆರ್ ವಿಶ್ವನಾಥ್ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಮತ್ತೊಂದು ಕಡೆಯಲ್ಲಿ ಎಸ್ ಆರ್ ವಿಶ್ವನಾಥ್ ಮತ್ತು ಡಾ. ಕೆ ಸುಧಾಕರ್ ನಡುವೆಯೂ ಗಲಾಟೆ ಜೋರಾಗಿದೆ. ಇಬ್ಬರು ಬಹಿರಂಗವಾಗಿ ಸವಾಲು ಪ್ರತಿ ಸವಾಲು ಹಾಕಿದ್ದಾರೆ. ಯಲಹಂಕದಲ್ಲಿ ಸ್ಪರ್ಧೆ ಮಾಡುವ ಎಚ್ಚರಿಕೆಯನ್ನು ಸುಧಾಕರ್ ನೀಡಿದರೆ, ಸುಧಾಕರ್ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಸ್ಪರ್ಧೆ ಮಾಡುತ್ತಾರೋ ಅಥವಾ ಸಂಸದರಾಗಿ ಸ್ಪರ್ಧೆ ಮಾಡುತ್ತಾರೋ ಎಂಬ ಸವಾಲನ್ನು ವಿಶ್ವನಾಥ್ ಎಸೆದಿದ್ದಾರೆ. ಹೀಗಾಗಿ ಈ ಗಲಾಟೆಯೂ ತಾರಕಕ್ಕೇರಿದೆ.
ಅತ್ತ ರೇಣುಕಾಚಾರ್ಯ ಹೈಕಮಾಂಡಿಗೇ ಸವಾಲು ಹಾಕಿದ್ಧಾರೆ. ತಾಕತ್ತಿದ್ದರೆ ವಿಜಯೇಂದ್ರರನ್ನು ಆಚೆ ಹಾಕಿ ಪಕ್ಷ ಕಟ್ಟಿ ಎನ್ನುತ್ತಿದ್ಧಾರೆ. ಇದೆಲ್ಲಾ ಒಂದು ಕಡೆಯಾದರೆ ಬಿಜೆಪಿಯಲ್ಲಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಆದರೆ ಅವರು ಉಚ್ಚಾಟನೆಗೊಂಡರೂ ವಿಜಯೇಂದ್ರ ಮತ್ತು ಅವರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಅವರ ಮಾತುಗಳಿಗೆ ಬಿಜೆಪಿ ರೆಬೆಲ್ ಟೀಂ ಬೆಂಬಲವನ್ನು ನೀಡುತ್ತಿದೆ. ಇದು ಪ್ರತಿನಿತ್ಯದ ಗೋಳಾಟ.
ಅತ್ತ ಡಿವಿ ಸದಾನಂದ ಗೌಡರ ವಿರುದ್ಧ ಹೈಕಮಾಂಡ್ ತುಟಿ ಬಿಚ್ಚಿಲ್ಲ. ವಿಜಯೇಂದ್ರ ಪರ ಶಾಸಕರೂ ಮಾತನಾಡ್ತಿಲ್ಲ. ವಿಜಯೇಂದ್ರ ಏಕಾಂಗಿಯಾಗಿದ್ದಾರೆ. ಈ ನಡುವೆ ವಿ ಸೋಮಣ್ಣ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಅವರು ಕೂಡಾ ಇಲ್ಲ ಎನ್ನುತ್ತಿಲ್ಲ. ಹೈಕಮಾಂಡ್ ಒಪ್ಪಿದರೆ ರೆಡಿ ಎನ್ನುತ್ತಿದ್ಧಾರೆ. ಹೈಕಮಾಂಡ್ ಇದಕ್ಕೂ ತುಟಿ ಬಿಚ್ಚುತ್ತಿಲ್ಲ.
ಹೈಕಮಾಂಡ್ ನಿಷ್ಕ್ರಿಯತೆಗೆ ದುಬಾರಿ ಬೆಲೆ ತೆರಬೇಕಾಗಬಹುದು ಎಂಬ ಎಚ್ಚರಿಕೆಯೂ ಇದೆ. ಹೈಕಮಾಂಡ್ ಯಾವುದಕ್ಕೂ ಮಾತನಾಡುತ್ತಿಲ್ಲ.



