ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳಿರುತ್ತವೆ. ಪ್ರಪಂಚದ ಹಲವು ದೇಶಗಳಲ್ಲಿ 10ಕ್ಕಿಂತ ಕಡಿಮೆ ಅಂಕಿಗಳ (7 ರಿಂದ 9 ಅಂಕಿಗಳ) ಮೊಬೈಲ್ ಸಂಖ್ಯೆಗಳನ್ನು ಬಳಸುವ ಸಿಸ್ಟಂ ಜಾರಿಯಲ್ಲಿದೆ. ಸಿಂಗಾಪುರ, ಹಾಂಕಾಂಗ್, ನಾರ್ವೆ ಮತ್ತು ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ 8 ಅಂಕಿಗಳ ನಂಬರ್ ಸಿಸ್ಟಂ ಇದೆ. ಯುಎಇ (UAE – ದುಬೈ/ಅಬುಧಾಬಿ), ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮೊದಲಾದ ದೇಶಗಳಲ್ಲಿ 9 ನಂಬರ್ ಇರುವ ಮೊಬೈಲ್ ನಂಬರ್ಸ್ ವ್ಯವಸ್ಥೆ ಇದೆ. ನಿಯು (Niue) ಮತ್ತು ಟೋಕೆಲಾವ್ ಮೊದಲಾದ ದೇಶಗಳಲ್ಲಿ ಕೇವಲ 4-5 ಅಂಕಿಗಳಿದ್ದರೆ, ಐಸ್ಲ್ಯಾಂಡ್ (Iceland) ದೇಶದಲ್ಲಿ 7 ನಂಬರ್ ಸಿಸ್ಟಂ ಇದೆ. ಆದರೆ ಭಾರತದಲ್ಲಿ ಅತೀ ಹೆಚ್ಚು ಅಂದರೆ 10 ನಂಬರ್ ಇದೆ. ಯಾಕೆ..?
ನಾವು ಪ್ರತಿದಿನ ಹಲವು ಮಂದಿಗೆ ಫೋನ್ ಮಾಡುತ್ತೇವೆ. ಫೋನ್ ನಂಬರ್ ಒಂದು ನಂಬರ್ ಕಡಿಮೆಯಾದರೂ, ಕರೆ ಕನೆಕ್ಟ್ ಆಗೋದಿಲ್ಲ. ನಂಬರ್ ತಪ್ಪಾಗಿದೆ ಎಂದು ತೋರಿಸುತ್ತದೆ. ಮ್ಮ ದೇಶದಲ್ಲಿ ಮೊಬೈಲ್ ನಂಬರ್ 08 ಅಥವಾ 09 ಅಂಕಿಗಳು ಅಲ್ಲದೇ, 10 ಅಂಕಿಗಳು ಮಾತ್ರ ಯಾಕೆ? ಇದರ ನಿರ್ಣಯ ಯಾರು ಮಾಡಿದ್ದಾರೆ ಎಂದು ಹುಡುಕಾಡಿದರೆ ಸಿಗುವ ಉತ್ತರ ಗಣಿತ.
ಜಾಗತಿಕ ನಿಯಮವೇನು?
ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ITU) E.164 ನಿಯಮದ ಪ್ರಕಾರ, ಪ್ರಪಂಚದ ಯಾವುದೇ ದೇಶದ ಮೊಬೈಲ್ ಸಂಖ್ಯೆಯು ದೇಶದ ಕೋಡ್ (Country Code) ಸೇರಿದಂತೆ ಗರಿಷ್ಠ 15 ಅಂಕಿಗಳನ್ನು ಮೀರಬಾರದು. ಆದರೆ ಕನಿಷ್ಠ ಇಷ್ಟೇ ಇರಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಆಯಾ ದೇಶಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ 7, 8, 9 ಅಥವಾ 10 ಅಂಕಿಗಳನ್ನು ನಿಗದಿಪಡಿಸಿಕೊಳ್ಳುತ್ತವೆ. ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳನ್ನು ಹೊಂದಿರಲು ಮುಖ್ಯ ಕಾರಣ ದೇಶದ ಜನಸಂಖ್ಯೆ ಮತ್ತು ಗಣಿತದ ಲೆಕ್ಕಾಚಾರ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮತ್ತು ಟ್ರಾಯ್ (TRAI) ‘ರಾಷ್ಟ್ರೀಯ ನಂಬರಿಂಗ್ ಪ್ಲಾನ್’ ಅನ್ವಯ ಈ ನಿಯಮವನ್ನು ಜಾರಿಗೆ ತಂದಿವೆ.
ಗಣಿತದ ನಿಯಮಗಳ ಪ್ರಕಾರ, ನಾವು ಬಳಸುವ 0 ಇಂದ 9 ರವರೆಗಿನ ಅಂಕಿಗಳನ್ನು ಇಟ್ಟುಕೊಂಡು ಎಷ್ಟು ವಿಭಿನ್ನ ಫೋನ್ ನಂಬರ್‌ಗಳನ್ನು ರಚಿಸಬಹುದು ಎಂಬುದು ಅಂಕಿಗಳ ಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ.
9 ಅಂಕಿಯ ನಂಬರ್ ಇದ್ದರೆ: ಗರಿಷ್ಠ 100 ಕೋಟಿ (1 ಬಿಲಿಯನ್) ವಿಭಿನ್ನ ನಂಬರ್‌ಗಳನ್ನು ಮಾತ್ರ ತಯಾರಿಸಲು ಸಾಧ್ಯ. ಆದರೆ ಪ್ರಸ್ತುತ ಭಾರತದ ಜನಸಂಖ್ಯೆಯೇ 140 ಕೋಟಿಗೂ ಹೆಚ್ಚಾಗಿದೆ. ಹಾಗಾಗಿ ದೇಶದ ಎಲ್ಲರಿಗೂ ಒಂಬತ್ತು ಅಂಕಿಯ ನಂಬರ್ ನೀಡಲು ಸಾಧ್ಯವಾಗುತ್ತಿರಲಿಲ್ಲ
8 ಅಂಕಿಯ ನಂಬರ್ ಇದ್ದರೆ: ಕೇವಲ 10 ಕೋಟಿ ವಿಭಿನ್ನ ನಂಬರ್‌ಗಳನ್ನು ಮಾತ್ರ ಸೃಷ್ಟಿಸಬಹುದು. ಇದು ಭಾರತದಂತಹ ದೊಡ್ಡ ದೇಶಕ್ಕೆ ತೀರಾ ಕಡಿಮೆಯಾಯಿತು.
10 ಅಂಕಿಯ ನಂಬರ್ ಇರುವುದರಿಂದ: ಒಟ್ಟು 1000 ಕೋಟಿ (10 ಬಿಲಿಯನ್) ವಿಭಿನ್ನ ನಂಬರ್‌ಗಳನ್ನು ಸೃಷ್ಟಿಸುವ ಅವಕಾಶ ಸಿಗುತ್ತದೆ. ಇದರಿಂದ ಭವಿಷ್ಯದಲ್ಲಿ ಎಷ್ಟು ಜನ ಹೊಸ ಸಿಮ್ ಕಾರ್ಡ್ ಖರೀದಿಸಿದರೂ ನಂಬರ್‌ಗಳ ಕೊರತೆ ಎದುರಾಗುವುದಿಲ್ಲ
ನಮ್ಮ ದೇಶದಲ್ಲಿ ಎಲ್ಲಾ 10 ಅಂಕಿಗಳನ್ನು ನಂಬರ್ ಮಾಡಲು ಬಳಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಸಂಖ್ಯೆಯ ಆರಂಭದ ಅಂಕಿಗೂ ಒಂದೊಂದು ಅರ್ಥವಿದೆ. 0: ಬೇರೆ ರಾಜ್ಯಗಳಿಗೆ ಕರೆ ಮಾಡಲು (STD) ಮೀಸಲಾಗಿದ್ದರೆ, 1: ತುರ್ತು ಸೇವೆಗಳಿಗೆ (ಪೊಲೀಸ್-100, ಅಗ್ನಿಶಾಮಕ-101, ಆಂಬ್ಯುಲೆನ್ಸ್-108) ಮೀಸಲಿಡಲಾಗಿದೆ. 2, 3, 4, 5: ಇವುಗಳನ್ನು ದೇಶಾದ್ಯಂತ ಲ್ಯಾಂಡ್‌ಲೈನ್ (ಸ್ಥಿರ ದೂರವಾಣಿ) ನಂಬರ್‌ಗಳಿಗಾಗಿ ಬಳಸಲಾಗುತ್ತದೆ. 6, 7, 8, 9 : ಈ ಅಂಕಿಗಳನ್ನು ಮಾತ್ರ ಮೊಬೈಲ್ ಸಂಖ್ಯೆಗಳ ಆರಂಭಕ್ಕೆ ಬಳಸಲು ಅನುಮತಿ ನೀಡಲಾಗಿದೆ.
ಬೇಕಾದರೆ ನಿಮ್ಮ ಮೊಬೈಲ್ ನಂಬರ್ ಚೆಕ್ ಮಾಡಿಕೊಳ್ಳಿ. +91 (ಇಂಡಿಯಾ ಕೋಡ್) ನಂತರ ನಿಮ್ಮ ಮೊಬೈಲ್ ನಂಬರ್ ಸ್ಟಾರ್ಟಿಂಗ್ ನಂಬರ್ 6, 7, 8, 9 ಮಾತ್ರ ಇರುತ್ತದೆ.
1990ರ ಅವಧಿಯಲ್ಲಿ ನಮ್ಮ ದೇಶದಲ್ಲಿ ಲ್ಯಾಂಡ್ ಲೈನ್ ನಂಬರ್ 6 ರಿಂದ 7 ಅಂಕಿಗಳು ಮಾತ್ರವೇ ಇದೆ. ಆದರೆ 2000 ಇಸವಿಗೆ ಬಂದ ಬಳಿಕ ದೇಶದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿತ್ತು. ಬಳಕೆದಾರರ ಸಂಖ್ಯೆ ಭಾರೀ ಪ್ರಯಾಣದಲ್ಲಿ ಹೆಚ್ಚಾದ ಕಾರಣ ಹಳೆಯ ವಿಧಾನ ಸಾಕಾಗುವುದಿಲ್ಲ. ಇದರಿಂದ ಭಾರತದ ಟೆಲಿಕಾಂ ನಿಯಂತ್ರಣ ಸಂಸ್ಥೆ (ಟ್ರಾಯ್) ‘ನೇಷನಲ್ ನಂಬರಿಂಗ್ ಪ್ಲ್ಯಾನ್ 2003’ರ ಅನ್ವಯ ದೇಶದಾದ್ಯಂತ 10 ಅಂಕಿಗಳ ಮೊಬೈಲ್ ನಂಬರ್ ವಿಧಾನವನ್ನು ಅಧಿಕೃತವಾಗಿ ಜಾರಿಗೆ ಬಂತು.



