ಸುದೀರ್ಘ ಕಾಲ ರಾಜ್ಯವನ್ನು ಆಳಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಗಿಫ್ಟ್ ನೀಡಿದೆ. ಇದು ಸರಳ ಉಡುಗೊರೆ ಅಲ್ಲ. ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭೆ ಆಫರ್ ತಿರಸ್ಕರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಮಹತ್ವದ ಹುದ್ದೆಯನ್ನು ನೀಡಿದೆ. ಉದಾರ ಅಂತಕರಣದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (congress working committee )ಸದಸ್ಯ ಸ್ಥಾನ ನೀಡಲಾಗಿದೆ. ಈ ಹುದ್ದೆ ಏನೂ ಸಾಮಾನ್ಯವಾದ ಹುದ್ದೆ ಅಲ್ಲ.
ಸಿದ್ದರಾಮಯ್ಯನವರನ್ನು CWC ಸದಸ್ಯರಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕಾರಿ ಸಮಿತಿ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿಯಾಗಿದ್ದು, ಪಕ್ಷದ ಪ್ರಮುಖ ರಾಜಕೀಯ ಕಾರ್ಯತಂತ್ರಗಳ ಅಂತಿಮ ನಿರ್ಧಾರ ಈ ಸಮಿತಿ ಸಭೆಯಲ್ಲಿ ಆಗಲಿದೆ. ದೇಶದ ಪ್ರಮುಖ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ಪಕ್ಷದ ಅಂತಿಮ ನಿಲುವನ್ನು ಈ ಸಮಿತಿಯೇ ನಿರ್ಧರಿಸುತ್ತದೆ. ಕಾಂಗ್ರೆಸ್ ಪಕ್ಷದ ಆಂತರಿಕ ನಿಯಮಗಳು ಅಥವಾ ಸಂವಿಧಾನವನ್ನು ಬದಲಾಯಿಸುವ ಅಥವಾ ಅದಕ್ಕೆ ಅಂತಿಮ ವಿವರಣೆ ನೀಡುವ ಸಂಪೂರ್ಣ ಅಧಿಕಾರ ಸಿಡಬ್ಲ್ಯೂಸಿಗೆ ಇರುತ್ತದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಉಸ್ತುವಾರಿ ಮಾಡುವುದು ಮತ್ತು ಅಗತ್ಯ ಬಿದ್ದರೆ ಅಧ್ಯಕ್ಷರನ್ನು ಹುದ್ದೆಯಿಂದ ತೆಗೆದುಹಾಕುವ ಅಥವಾ ಹಂಗಾಮಿ ಅಧ್ಯಕ್ಷರನ್ನು ನೇಮಿಸುವ ಅಧಿಕಾರ ಇದಕ್ಕಿದೆ. ಅಂದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಖರ್ಗೆ ಅವರೇ ಇರಲಿ, ರಾಹುಲ್ ಗಾಂಧಿಯೇ ಇರಲಿ.. ಅವರ ನಿಯಂತ್ರಣ ಹೊಂದಿರುವುದು ಈ ಸಿಡಬ್ಲ್ಯೂಸಿ.
ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ: ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದ ನಾಯಕರು, ಸಿಡಬ್ಲ್ಯೂಸಿ ಸದಸ್ಯರಾಗುವ ಮೂಲಕ ರಾಷ್ಟ್ರೀಯ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ ಮತ್ತು ದೇಶದಾದ್ಯಂತ ಪಕ್ಷದ ಪ್ರಚಾರ ಹಾಗೂ ತಂತ್ರಗಾರಿಕೆಯಲ್ಲಿ ಭಾಗಿಯಾಗುತ್ತಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಮತ್ತು ರಾಜ್ಯ ಘಟಕಗಳ (PCC) ಕಾರ್ಯವೈಖರಿಯನ್ನು ಈ ಸಮಿತಿಯೇ ನಿಯಂತ್ರಿಸುತ್ತದೆ. ಈ ಸಮಿತಿಯ ಸದಸ್ಯರನ್ನು ನೇರವಾಗಿ “ಕಾಂಗ್ರೆಸ್ ಹೈಕಮಾಂಡ್” ನ ಭಾಗ ಎಂದೇ ಪರಿಗಣಿಸಲಾಗುತ್ತದೆ.
ಖುದ್ದು ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಆಫರ್ ನೀಡಿ ಸಿಎಂ ಸ್ಥಾನ ಬಿಟ್ಟು ಕೊಡುವಂತೆ ಕೇಳಿಕೊಂಡಿದ್ದರು. ಆದ್ರೆ, ಸಿದ್ದರಾಮಯ್ಯನವರು ರಾಜ್ಯಸಭೆ ಆಫರ್ ನಿರಾಕರಿಸಿ ನೇರವಾಗಿ ದೆಹಲಿಯಿಂದ ಬಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯಸಭೆ ಆಫರ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೇ ರಾಜ್ಯಸಭೆಗೆ ಹೋಗಲ್ಲ ಎಂದು ಹೈಕಮಾಂಡ್ ಆಫರ್ ತಿರಸ್ಕರಿಸಿದ್ದರು. ಹೀಗಾಗಿ ಅವರನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಅವರಿಗೆ ಈ ಸ್ಥಾನ ನೀಡಿರುವುದರಿಂದ, ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ನಿರ್ಧಾರದಲ್ಲೂ ತಮ್ಮ ಧ್ವನಿ ಮತ್ತು ಪ್ರಭಾವವನ್ನು ಬೀರಲು ನೇರ ಅವಕಾಶ ಸಿಕ್ಕಂತಾಗಿದೆ



