ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ (ಕಸ ವಿಲೇವಾರಿ) ಟೆಂಡರ್ ಪ್ರಕ್ರಿಯೆಯಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯಪಾಲರು ಮತ್ತು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದಾರೆ. ಇದು 39 ಸಾವಿರ ಕೋಟಿ ಹಗರಣ ಎನ್ನುವುದು ಆರ್ ಅಶೋಕ್ ಅವರ ಆರೋಪ. ಅಂದಹಾಗೆ ಈ ಗುತ್ತಿಗೆ ಪಡೆದಿರುವುದು Ramky ಗ್ರೂಪ್ ಸಂಸ್ಥೆ. ಈ ಸಂಸ್ಥೆಯ ಇತಿಹಾಸ ಕೆದಕಿದರೆ ಕೆಲವು ವಿಶೇಷ ಮಾಹಿತಿಗಳು ಹೊರಬೀಳುತ್ತವೆ. ಅಂದಹಾಗೆ ಈ ಸಂಸ್ಥೆಯ ಮಾಲೀಕರ ಹೆಸರು ಅಲ್ಲಾ ಆಯೋಧ್ಯ ರಾಮಿ ರೆಡ್ಡಿ.
ಆರ್ ಅಶೋಕ್ ಆರೋಪ ಏನು..?
ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಯ ೩೦ ವರ್ಷಗಳ ದೀರ್ಘಾವಧಿ ಟೆಂಡರ್ ಅನ್ನು ದೆಹಲಿ ಮೂಲದ ಎಂಎಸ್‌ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ (ರಾಮ್‌ಕಿ ಕಂಪನಿ)ಗೆ ನಿಯಮ ಬಾಹಿರವಾಗಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಡಿದೆ. ಟೆಂಡರ್ ಪಡೆದರುವ ಸಂಸ್ಥೆ 1 ಟನ್ ಕಸ ವಿಲೇವಾರಿಗೆ 2151 ರೂ. ಇದ್ದದ್ದನ್ನು 9,292 ರೂ.ಗೆ ಹೆಚ್ಚಿಸಲು ಅನುಮತಿ ಪಡೆದುಕೊಂಡಿದೆ. ಇದು ಈಗಿರುವ ದರದ 430 ಪಟ್ಟು ಹೆಚ್ಚು. ಈ ಕಂಪೆನಿಯನ್ನು ಈ ಹಿಂದೆ ಶ್ವಬ್ಯಾಂಕ್ ಹಾಗೂ ಹಲವು ಮಹಾನಗರ ಪಾಲಿಕೆಗಳು ಕಪ್ಪು ಪಟ್ಟಿಗೆ ಸೇರಿಸದ್ದವು. ಬೆಂಗಳೂರಿನ ಜನರಿಂದ ಕಸ ಬಳಕೆದಾರರ ಶುಲ್ಕ ಎಂದು 10 ರೂ.ನಿಂದ 400 ರೂ.ವರೆಗೆ ವಸೂಲಿ ಮಾಡಿ, ಆ ಹಣವನ್ನು ಈ ಕಂಪೆನಿಗೆ ನೀಡಲಾಗುತ್ತದೆ. ಅಲ್ಲದೆ ಈ ಕಂಪೆನಿಗೆ ಸರ್ಕಾರವೇ 100 ಎಕರೆ ಭೂಮಿ ಕೊಟ್ಟಿದೆ.
ಸರ್ಕಾರದ ಉತ್ತರ ಏನು..?
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದು, “ಕೆಲವು ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಹಣಕ್ಕಾಗಿ ಕಸದ ಲಾರಿಗಳನ್ನು ತಡೆದು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಈ ಆರೋಪಗಳು ಹೊಸದಲ್ಲ. ಆರೋಪ ಮಾಡುತ್ತೀದ್ದಾರೆಯೇ ಹೊರತು, ಕಸ ಸಮಸ್ಯೆಗೆ ಪರಿಹಾರ ಹುಡುಕಿಲ್ಲ. ನಾನು ಬೇರೆ ಬೇರೆ ನಗರಗಳ ಕಸ ವಿಲೇವಾರಿ ಅಧ್ಯಯನ ಮಾಡಿ, ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಆರೋಪಗಳಲ್ಲಿ ಅರ್ಥ ವಿಲ್ಲ” ಎಂದು ಹೇಳಿದ್ಧಾರೆ.
ರಾಮ್ ಕೀ ಸಂಸ್ಥೆಯ ಇತಿಹಾಸ ಏನು..?”
ಇದು ಭಾರತದಲ್ಲಿ ವೈಜ್ಞಾನಿಕವಾಗಿ ಕಸ ಸಂಗ್ರಹಣೆ, ಮರುಬಳಕೆ (Recycling) ಮತ್ತು ತ್ಯಾಜ್ಯ ಸಂಸ್ಕರಣೆ ಮಾಡುವಲ್ಲಿ ನಂ.1 ಕಂಪೆನಿ. ಕಸ ವಿಲೇವಾರಿ ಮಾತ್ರವಲ್ಲದೆ ಹೆದ್ದಾರಿಗಳು, ಸೇತುವೆಗಳು, ಜಲ ಸಂಸ್ಕರಣಾ ಘಟಕಗಳು (STP), ವಸತಿ ಸಮುಚ್ಚಯಗಳು (Real Estate) ಮತ್ತು ಫಾರ್ಮಾ (ಔಷಧೀಯ) ವಲಯದ ಮೂಲಸೌಕರ್ಯ ನಿರ್ಮಾಣದಲ್ಲೂ ತೊಡಗಿಸಿಕೊಂಡಿದೆ. ಇದು ಆರ್ ಅಶೋಕ್ ಆರೋಪಿಸಿರುವಂತೆ ದೆಹಲಿಯ ಸಂಸ್ಥೆ ಅಲ್ಲ. ರಾಮ್‌ಕಿ ಗ್ರೂಪ್‌ನ ಮುಖ್ಯ ಕಚೇರಿ ತೆಲಂಗಾಣ ದ ಹೈದರಾಬಾದ್ ನಲ್ಲಿದೆ. ಭಾರತದಾದ್ಯಂತ ೫೫ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದುಬೈ ಮತ್ತು ಸಿಂಗಾಪುರದಲ್ಲೂ ತನ್ನ ಶಾಖೆಗಳನ್ನು ಹೊಂದಿದೆ
ರಾಮ್‌ಕಿ ಸಂಸ್ಥೆಯ (Ramky Group) ಮುಖ್ಯ ಮಾಲೀಕರು ಮತ್ತು ಸಂಸ್ಥಾಪಕರು ಅಲ್ಲಾ ಆಯೋಧ್ಯ ರಾಮಿ ರೆಡ್ಡಿ (Alla Ayodhya Rami Reddy). ಇವರ ಜೊತೆಗೆ ಅವರ ಕುಟುಂಬ ಮತ್ತು ಪ್ರಮುಖ ಹೂಡಿಕೆದಾರರು ಸಂಸ್ಥೆಯ ಮಾಲೀಕತ್ವವನ್ನು ಹೊಂದಿದ್ದಾರೆ. ಇವರು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ (YSRCP) ಪಕ್ಷದ ರಾಜ್ಯಸಭಾ ಸಂಸದರೂ ಹೌದು. ಭಾರತದ ಅತ್ಯಂತ ಶ್ರೀಮಂತ ಸಂಸದರಲ್ಲಿ ಇವರೂ ಒಬ್ಬರಾಗಿದ್ದಾರೆ. ಎರಡೂವರೆ ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇವರ ಹೆಸರಿನಲ್ಲೇ ಇದೆ. ಸಂಸ್ಥೆ ಬ್ಲಾಕ್ ಲಿಸ್ಟ್‌ನಲ್ಲಿ ಇದ್ದದ್ದು ಖಚಿತ ಮಾಹಿತಿ. ಆದರೆ, ಅದು ಈಗಲೂ ಕಂಟಿನ್ಯೂ ಆಗಿದೆಯೋ.. ಇಲ್ಲವೋ ಗೊತ್ತಿಲ್ಲ.



