ಭಾರತದಲ್ಲಿ ಮುಸ್ಲಿಮರಿಗೆ ಮಾತ್ರ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ ಇದೆ. ಮುಸ್ಲಿಮರು ಮುಸ್ಲಿಂ ಪರ್ಸನಲ್ ಲಾ ಷರಿಯತ್ ಅಪ್ಲಿಕೇಷನ್ ಆಕ್ಟ್-1937 ಪ್ರಕಾರ ಗರಿಷ್ಠ 4 ಮದುವೆ ಆಗಬಹುದು. ಹಿಂದೂ, ಸಿಖ್, ಜೈನ್ ಮತ್ತು ಬೌದ್ಧರು ಹಿಂದೂ ಕಾಯ್ದೆ ಅಡಿಯಲ್ಲೇ ಬರುತ್ತಾರೆ. ಕ್ರಿಶ್ಚಿಯನ್ ಮತ್ತು ಪಾರ್ಸಿಗಳಲ್ಲಿ ಅವರ ವೈಯಕ್ತಿಕ ಕಾನೂನಿನಲ್ಲೇ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲ. ಇದೀಗ ಬೆಂಗಳೂರು ಹೈಕೋರ್ಟ್ ಈ ಕಾನೂನಿನ ಮುಖ್ಯವಾದ ಅಂಶವೊಂದನ್ನು ಸ್ಪಷ್ಟವಾಗಿ ಹೇಳಿದೆ. ಮುಸ್ಲಿಂ ವ್ಯಕ್ತಿಯ ಮೊದಲ ವಿವಾಹ ರದ್ದಾಗದಿದ್ದರೆ, ವಿಶೇಷ ವಿವಾಹ ಕಾಯಿದೆಯಡಿ ಮಾಡಿಕೊಳ್ಳುವ ಎರಡನೇ ವಿವಾಹ ಅನೂರ್ಜಿತಗೊಳ್ಳುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆದರೆ ಇದು ಎಲ್ಲ ಮುಸ್ಲಿಂ ವಿವಾಹಗಳಿಗೂ ಅನ್ವಯವಾಗುವುದಿಲ್ಲ ಎನ್ನವುದು ವಿಶೇಷ.
ಬಳ್ಳಾರಿಯ ಮೀನಾಕುಮಾರಿ ಎನ್ನುವವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರು. ಅವರು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. 2008ರಲ್ಲಿ ಮೀನಾ ಕುಮಾರಿ ಅವರು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರೊಡನೆ ಕಾನೂನು ಬದ್ಧವಾಗಿ 2ನೇ ಪತ್ನಿಯಾಗಿ ಮದುವೆಯಾಗಿದ್ದರು. ಆ ವ್ಯಕ್ತಿಯ ಆಸ್ತಿಗೆ ತಮ್ಮನ್ನೂ ಉತ್ತರಾಧಿಕಾರಿ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೀನಾ ಕುಮಾರಿ ಅವರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಮೀನಾ ಕುಮಾರಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ವಿಶೇಷ ವಿವಾಹ ಕಾಯ್ದೆ ಎಂದರೆ..
ವಿಶೇಷ ವಿವಾಹ ಕಾಯ್ದೆ 1954 (Special Marriage Act, 1954) ಭಾರತದಲ್ಲಿ ಧರ್ಮದ ಮಿತಿಗಳಿಲ್ಲದೆ ಮದುವೆಯಾಗಲು ಅವಕಾಶ ನೀಡುವ ಕಾನೂನು. ಯಾವುದೇ ಧರ್ಮದವರು, ತಮ್ಮ ತಮ್ಮ ಧರ್ಮ ಬದಲಾಯಿಸದೆ ಈ ಕಾಯ್ದೆಯಡಿ ಮದುವೆಯಾಗಬಹುದು. ಹುಡುಗನಿಗೆ 21 ವರ್ಷ ಮತ್ತು ಹುಡುಗಿಗೆ 18 ವರ್ಷ ತುಂಬಿರಬೇಕು, ಅಷ್ಟೇ. ಈ ಕಾಯ್ದೆಯಡಿ ಮದುವೆಯಾಗುವ ವ್ಯಕ್ತಿಗೆ ಈಗಾಗಲೇ ಜೀವಂತ ಸಂಗಾತಿ ಇರಬಾರದು. ಮುಸ್ಲಿಂ ಪುರುಷರು ಈ ಕಾಯ್ದೆಯಡಿ ಮದುವೆಯಾದರೆ, ಅವರು ಮತ್ತೊಂದು ಮದುವೆಯಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಮದುವೆಗೆ 30 ದಿನಗಳ ಮುನ್ನ ಮದುವೆ ನೋಂದಣಾಧಿಕಾರಿಗೆ (Marriage Registrar) ಅರ್ಜಿ ಸಲ್ಲಿಸಬೇಕು.
ಮೀನಾ ಕುಮಾರಿ ಪ್ರಕರಣದಲ್ಲಿ ಏನಾಯ್ತು..?
ಮೀನಾ ಕುಮಾರಿ ಕೇಸಿನಲ್ಲಿ ಮದುವೆಯಾಗಿದ್ದು ಒಬ್ಬ ಮುಸ್ಲಿಂ ವ್ಯಕ್ತಿಯನ್ನು. ಆತನಿಗೆ ಈಗಾಗಲೇ ಮದುವೆಯಾಗಿತ್ತು. ಮೊದಲನೇ ಪತ್ನಿ ಜೀವಂತವಾಗಿದ್ದರು. ಹೀಗಾಗಿ ವಿಶೇಷ ಕಾಯ್ದೆ ಅಡಿಯಲ್ಲಿ ಮದುವೆಯಾದರೂ, ಅವರ ಮದುವೆ ಊರ್ಜಿತವಾಗುವುದಿಲ್ಲ. ಕಾನೂನು ಪ್ರಕಾರ ಅವರ ಮದುವೆಗೆ ಯಾವುದೇ ಕಾನೂನಿನ ಮಾನ್ಯತೆ ಇರುವುದಿಲ್ಲ.
ಹೈಕೋರ್ಟ್ ಹೇಳಿದ್ದು ಏನು..?
ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದರೆ ಮಾತ್ರ ಈ ಕಾನೂನು ಮಾನ್ಯತೆ ನೀಡುತ್ತದೆ. ಆದರೆ ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆಯಡಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಅವರಿಗೆ ಈ ಕಾಯ್ದೆಯ ಅಡಿಯಲ್ಲಿ ಮದುವೆಯಾಗುವ ಅಧಿಕಾರವೇ ಇರುವುದಿಲ್ಲ. ಮೊದಲ ಮದುವೆ ರದ್ದಾಗದೇ ಇದ್ದಾಗವಿಶೇಷ ವಿವಾಹ ಕಾಯಿದೆ ಸೆಕ್ಷನ್ 4(ಎ) ಪ್ರಕಾರ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಹಿಂದಿನ ವಿವಾಹ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿ ನಡೆದ ವಿವಾಹವು ಅನೂರ್ಜಿತ ಎಂದು ಹೇಳಿದೆ.



