ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಅವರು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ. ನಿಮಗ್ಯಾಕೆ ಉತ್ತರ ಹೇಳಲಿ, ಹೈಕಮಾಂಡ್ ಕೇಳಿದರೆ ಉತ್ತರ ನೀಡುತ್ತೇನೆ ಎಂದಿರುವ ಡಿವಿಎಸ್, ಆ ಮೂಲಕ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿರುವಂತೆ ಕಾಣುತ್ತಿದೆ. ಇಷ್ಟಾದರೂ ಕೆಲವು ಉತ್ತರ ಸಿಗದ ಪ್ರಶ್ನೆಗಳಂತೂ ಇವೆ. ಇವುಗಳಲ್ಲಿ ಮೊದಲನೆ ಪ್ರಶ್ನೆ ಏನು ಗೊತ್ತೇ.. ಲೀಕ್ ಆಗಿರುವ ಆಡಿಯೋದಲ್ಲಿ ಬಿಎಲ್‌ಎಸ್ ಹೆಸರೂ ಇದೆ. ಜೋಶಿ ಹೆಸರೂ ಇದೆ. ಆದರೆ ಚರ್ಚೆಯೇ ಆಗುತ್ತಿಲ್ಲ.
ಮೊದಲನೆಯ ಪ್ರಶ್ನೆ ವಿಜಯೇಂದ್ರ ಅವರಿಗೆ ಬಹಿರಂಗವಾಗಿ ಬೆಂಬಲಕ್ಕೆ ನಿಂತು ನಿಭಾಯಿಸುತ್ತಿದ್ದವರಲ್ಲಿ ಡಿವಿಎಸ್ ಮೊದಲ ಸ್ಥಾನದಲ್ಲಿದ್ದವರು. ಹಾಗಾದರೆ ವಿಜಯೇಂದ್ರ ಅವರ ಜೊತೆ ಡಬಲ್ ಗೇಮ್ ಆಡಿದರಾ.. ನಿನಗೆ ಹಿರಿಯರಿಂದ ಎದುರಾಗುವ ಸಮಸ್ಯೆಗಳನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದ ಸದಾನಂದ ಗೌಡರು ವಿಜಯೇಂದ್ರ ವಿರುದ್ಧವೇ ಕೆಲಸ ಮಾಡ್ತಿದ್ದರಾ.. ಅದೂ ಗೊತ್ತಿಲ್ಲ. ಏಕೆಂದರೆ ಅಡ್ಡ ಮತದಾನದ ಸಂಚು ನಡೆದಾಗ ವಿಜಯೇಂದ್ರಗೆ ಫೋನ್ ಮಾಡಿದ್ದೆ, ಅವರು ರಿಸೀವ್ ಮಾಡಲಿಲ್ಲ ಎಂದಿದ್ದರು ಡಿವಿಎಸ್. ಆದರೆ ತಮಗೆ ಅಂಥಾದ್ದೊಂದು ಫೋನ್ ಬಂದಿಲ್ಲ, ಬಂದಿರಲಿಲ್ಲ. ಎಲ್ಲ ಮುಗಿದ ಮೇಲೆ ಫೋನ್ ಮಾಡಿದ್ದರು ಎಂದು ವಿಜಯೇಂದ್ರ ಸ್ಪಷ್ಟನೆ ಕೊಟ್ಟಿದ್ದರು. ಇದು ಮೊದಲನೆ ಪ್ರಶ್ನೆ
ಇನ್ನು ಪ್ರದೀಪ್ ಎಂಬುವವರ ಜೊತೆ ಮಾತನಾಡ್ತಾರಲ್ಲ. ಆಗ ಪ್ರದೀಪ್ ಎಂಬುವವರು ಸಂಚಿನಲ್ಲಿ ಬಿಎಲ್‌ಎಸ್, ಜೋಷಿ ಪಾತ್ರ ಇದೆ ಎನ್ನುತ್ತಾರೆ. ಅದಕ್ಕೆ ಡಿವಿಎಸ್ ಹೌದು ಅಥವಾ ಇಲ್ಲ ಎಂದು ಹೇಳುವುದಿಲ್ಲ. ನನಗೆ ದೇವರಲ್ಲಿ ನಂಬಿಕೆ ಇದೆ ಎನ್ನುತ್ತಾರೆ. ಆದರೆ ಈ ಎರಡೂ ಹೆಸರುಗಳ ಬಗ್ಗೆ ಯಾವ ಮಾಧ್ಯಮಗಳಲ್ಲೂ ಪ್ರಸ್ತಾಪ ಇಲ್ಲ. ಬಿಎಲ್‌ಎಸ್ ಎಂದು ಪ್ರಖ್ಯಾತರಾಗಿರುವುದು ಬಿಎಲ್ ಸಂತೋಷ್ ಎಂಬುದು ಬಿಜೆಪಿಯ ಕಟ್ಟ ಕಡೆಯ ಕಾರ್ಯಕರ್ತನಿಗೂ ಗೊತ್ತು. ಜೋಷಿ ಎಂದರೆ ಅದು ಪ್ರಲ್ಹಾದ್ ಜೋಷಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರು ಅಲ್ಲ ಎಂದಾದರೆ ಅದರ ಬಗ್ಗೆಯಾದರೂ ಸ್ಪಷ್ಟನೆ ಬೇಕಲ್ಲ.. ಅದೂ ಇಲ್ಲ.
ಇದರ ಜೊತೆಗೆ ಡಿವಿಎಸ್ ಜೊತೆ ಮಾತನಾಡಿದ ಪ್ರದೀಪ್ ಯಾರು..? ದೆಹಲಿಯಲ್ಲಿ ಪ್ರದೀಪ್ ಎಂಬುವವರು, ಬಿಜೆಪಿಯಲ್ಲಿ ಪ್ರಭಾವಿಗಳು ಎನಿಸಿಕೊಂಡಿರುವವರು ಮೂವರಿದ್ದಾರೆ. ಅವರಲ್ಲಿ ಒಬ್ಬರು ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡ್ತಿದ್ಧಾರೆ. ಇನ್ನೊಬ್ಬರು ಪ್ರಧಾನಿ ಮೋದಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದಾರೆ. ಮೂರನೇ ವ್ಯಕ್ತಿ ಬಿಜೆಪಿ ರಾಷ್ಟ್ರೀಯ ವಕ್ತಾರರು. ಈ ಮೂವರಲ್ಲಿ ಡಿವಿಎಸ್ ಜೊತೆ ಮಾತನಾಡಿರುವ ಪ್ರದೀಪ್ ಯಾರು ಎನ್ನುವುದು ಮುಖ್ಯ ಪ್ರಶ್ನೆ.
ಇದೆಲ್ಲದರ ಜೊತೆಗೆ ದೆಹಲಿ ಹೈಕಮಾಂಡ್ ರಾಜ್ಯ ನಾಯಕರ ಸಂಚುಗಳಿಗೆ ಹಾಲೆರೆಯುತ್ತಾ ಪಕ್ಷವನ್ನೇ ರಾಜ್ಯದಲ್ಲಿ ವೀಕ್ ಮಾಡಿತಾ ಎಂಬ ಪ್ರಶ್ನೆಯೂ ಭುಗಿಲೇಳುವಂತೆ ಮಾಡಿದೆ. ಏಕೆಂದರೆ ದೆಹಲಿ ನಾಯಕರು ಬಂದರು.. ಹೋದರು.. ಅಷ್ಟೇ ಹೊರತು ಯಾವ ನಾಯಕರೂ ಸೈಲೆಂಟ್ ಆಗಿಲ್ಲ. ಯಾವ ನಾಯಕರೂ ವೈಮನಸ್ಸು ಮರೆತು ಒಂದಾಗಿಲ್ಲ. ಇದೆಲ್ಲದರ ಮಧ್ಯೆ ಇಂತಹ ಸಂಚುಗಳು ನಡೆಯುತ್ತಲೇ ಇವೆ. ಹಾಗಾದರೆ ಇಂತಹವುಗಳಿಗೆ ಬಿಜೆಪಿ ಹೈಕಮಾಂಡ್ ನೀರೆರೆಯುತ್ತಿದೆಯಾ.. ದೆಹಲಿ ನಾಯಕರಿಗೆ ರಾಜ್ಯ ಮಟ್ಟದಲ್ಲಿ ಬಿಜೆಪಿ ಪ್ರಬಲವಾಗಿರುವುದು ಇಷ್ಟ ಇಲ್ವಾ.. ಇಂತಹ ಪ್ರಶ್ನೆಗಳಂತೂ ಮೂಡುತ್ತಿವೆ.



