ಶಾಂತಿ ಕ್ರಾಂತಿ. ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಫ್ಲಾಪ್ ಚಿತ್ರಗಳಲ್ಲಿ ಒಂದು. ಸುಮಾರು 10 ಕೋಟಿ ಬಜೆಟ್ಟಿನಲ್ಲಿ ನಿರ್ಮಾಣವಾಗಿದ್ದ ಸಿನಿಮಾ, 90ರ ದಶಕದಲ್ಲೇ ಭಾರತ ಚಿತ್ರರಂಗದಲ್ಲೇ ದೊಡ್ಡ ಬಜೆಟ್ಟಿನ ಸಿನಿಮಾ. ಇತ್ತೀಚೆಗೆ ರವಿಚಂದ್ರನ್ ಅಭಿಮಾನಿಗಳು ಶಾಂತಿ ಕ್ರಾಂತಿ ರೀ-ರಿಲೀಸ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಹಾಕ್ತಿದ್ದಾರೆ. ಆದರೆ ಶಾಂತಿ ಕ್ರಾಂತಿ ಮತ್ತೆ ಬಿಡುಗಡೆ ಆಗ್ತಾ ಇಲ್ಲ. ಅದಕ್ಕೆ ಕಾರಣಗಳೂ ಇವೆ. ನಂ.1 ಕಾರಣ ಚಿತ್ರದ ಹಕ್ಕು ರವಿಚಂದ್ರನ್ ಅವರ ಬಳಿ ಇಲ್ಲ. ಅವರ ತಮ್ಮ ಬಾಲಾಜಿ ಅವರ ಕೈಲಿದೆ. ಅಷ್ಟೇ ಅಲ್ಲ.. ನೆಗೆಟಿವ್ಸ್ ಡ್ಯಾಮೇಜ್ ಆಗಿದೆ.
ರವಿಚಂದ್ರನ್ (Ravichandran) ಅವರ ಸಹೋದರ ಬಾಲಾಜಿ ಡೀಟೈಲ್ ಆಗಿ ಈ ಬಗ್ಗೆ ಮಾತನಾಡಿದ್ಧಾರೆ.‘ನೀವೆಲ್ಲರೂ ಶಾಂತಿ ಕ್ರಾಂತಿ ಸಿನಿಮಾಗೆ, ನಮ್ಮ ಅಣ್ಣನಿಗೆ ಹಾಗೂ ನಮಗೆ ತೋರಿಸಿರುವ ಪ್ರೀತಿ ಅಪಾರವಾದದ್ದು. ಅದಕ್ಕೆ ನಾವು ಯಾವಾಗಲೂ ಚಿರಋಣಿ ಆಗಿರುತ್ತೇವೆ. ನಿಮ್ಮ ಈ ಪ್ರೀತಿ ಶುರುವಾದ ಎರಡೇ ದಿನಗಳಲ್ಲಿ ನಾನು ಹಾಗೂ ನಮ್ಮ ಅಣ್ಣ ಶಾಂತಿ ಕ್ರಾಂತಿ ಮರುಬಿಡುಗಡೆ ಬಗ್ಗೆ ಮಾತುಕಥೆ ಮಾಡಿದೆವು. ಅಂದೇ ನಮ್ಮ ಪ್ರಯತ್ನ ಶುರು ಆಯ್ತು. ಶಾಂತಿ ಕ್ರಾಂತಿ ನೆಗೆಟಿವ್ಸ್ ಮೆಲ್ಟ್ ಆಗಿ ಹೋಗಿದೆ. ಅದನ್ನು ನಾವು ಇಂದಿನ ತಂತ್ರಜ್ಞಾನಕ್ಕೆ ತಂದು ಬಿಡುಗಡೆ ಮಾಡುವುದು ತುಂಬಾ ಕಷ್ಟ. ಬೇರೆ ಮೂಲಗಳನ್ನು ನಾವು ಇನ್ನೂ ಹುಡುಕುತ್ತಿದ್ದೇವೆ. ಒಂದು ವೇಳೆ ಸಿಕ್ಕರೆ ಆ ಚಿತ್ರವನ್ನು ಮರು ಬಿಡುಗಡೆ ಮಾಡುವ ಆಸೆ ನಮ್ಮೆಲ್ಲರಿಗೂ ಇದೆ. ಒಂದು ವೇಳೆ ಯಾವುದೇ ಮೂಲ ಸಿಕ್ಕಿದರೂ ಕೂಡ, ನಾಳೆಯೇ ಆ ಕೆಲಸ ಶುರು ಮಾಡಿದರೂ ಅದಕ್ಕೆ ಬಹಳ ಸಮಯ ಹಿಡಿಯುತ್ತದೆ’ ಎಂದು ವಿವರಿಸಿದ್ದಾರೆ ಬಾಲಾಜಿ.
ಬಾಲಾಜಿ ಅವರ ಪ್ರಕಾರ ಶಾಂತಿ ಕ್ರಾಂತಿ ನೆಗೆಟಿವ್ಸ್ ಸಿಕ್ಕರೂ ಕೂಡಾ ಕಲರಿಂಗ್, ರೀ-ರೆಕಾರ್ಡಿಂಗ್, ಮ್ಯೂಸಿಕ್, ಎಫೆಕ್ಟ್ಸ್, ಡಿಐ, ಸೆನ್ಸಾರ್ ಎಲ್ಲವನ್ನೂ ಹೊಸದಾಗಿಯೇ ಮಾಡಿಸಬೇಕು. ಆ ದಿನಗಳಲ್ಲೇ ಅದ್ಭುತ ಗುಣಮಟ್ಟದಲ್ಲಿ ಕೊಟ್ಟ ಸಿನಿಮಾ ಶಾಂತಿ ಕ್ರಾಂತಿ. ಡಾಲ್ಬಿ, ಅಟ್ಮಾಸ್, ಡಿಟಿಎಸ್ ಮಾಡಿಸಿ ಬಿಡುಗಡೆ ಮಾಡುವುದಕ್ಕೆ ಕನಿಷ್ಠ 8 ತಿಂಗಳಿಂದ 1 ವರ್ಷ ಬೇಕು. ಅದು ವಾಸ್ತವ.
‘ಇನ್ನೊಂದು ಸ್ಪಷ್ಟನೆ ಕೊಡುತ್ತೇನೆ. ಮಾಧ್ಯಮದವರು, ಕಲಾರಸಿಕರು, ಅಭಿಮಾನಿಗಳು, ಸ್ನೇಹಿತರು ನಮಗೆ ಕರೆ ಮಾಡುತ್ತಿದ್ದಾರೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೀರಾ ಅಂತ ಕೇಳುತ್ತಿದ್ದಾರೆ. ಅದು ಸುಳ್ಳು. ಸದ್ಯಕ್ಕಂತೂ ನಮ್ಮ ಕೈಯಲ್ಲಿ ರಿಲೀಸ್ ಮಾಡೋಕೆ ಆಗಲ್ಲ. ಸೋರ್ಸ್ ಸಲುವಾಗಿ ನಾವು ಹುಡುಕಾಟ ಮಾಡುತ್ತಿದ್ದೇವೆ. ಅದು ಸಿಕ್ಕ ಕೂಡಲೇ ನಿಮಗೆ ಹೇಳಿಯೇ ಅದಕ್ಕೆ ಓಂಕಾರ ಹಾಕುತ್ತೇವೆ’ ಎಂದು ವಿವರಿಸಿದ್ದಾರೆ ಬಾಲಾಜಿ.
ಶಾಂತಿ ಕ್ರಾಂತಿ ಆಗಿನ ಕಾಲಕ್ಕೇ 10 ಕೋಟಿಯಲ್ಲಿ ತಯಾರಾಗಿದ್ದ ಸಿನಿಮಾ. ವಿ ರವಿಚಂದ್ರನ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಸಿನಿಮಾ ನಿರ್ದೇಶಿಸಿ ನಿರ್ಮಾಣ ಮಾಡಿದ್ದರು. ಕನ್ನಡದಲ್ಲಿ ಹೀರೋ ಕಂ ಡೈರೆಕ್ಟರ್. ಕನ್ನಡದಲ್ಲಿ ರಮೇಶ್ ಅವರು ಮಾಡಿದ್ದ ಪಾತ್ರವನ್ನು ಬೇರೆ ಭಾಷೆಗಳಲ್ಲಿ ರವಿಚಂದ್ರನ್ ಮಾಡಿದ್ದರು. ಸುಮಾರು ವರ್ಷ ಪ್ರೊಡಕ್ಷನ್‌ನ ವಿವಿಧ ಹಂತಗಳಲ್ಲಿ ತಯಾರಾಗಿದ್ದ ಚಿತ್ರಕ್ಕೆ ವಿಲನ್ ಆಗಿದ್ದವರು ಅನಂತ ನಾಗ್. ಹೀರೋಯಿನ್ ಆಗಿ ಜೂಹಿ ಚಾವ್ಲಾ ಮತ್ತು ಖುಷ್ ಬೂ ಇದ್ದರು. ಆದರೆ 5 ಭಾಷೆಗಳಲ್ಲಿ 10 ಕೋಟಿ ಹಣ ಸುರಿದು ನಿರ್ಮಿಸಿದ್ದ ಸಿನಿಮಾದ ಒಟ್ಟಾರೆ ಕಲೆಕ್ಷನ್ 8 ಕೋಟಿ, ಅಷ್ಟೇ. ಕನ್ನಡ ಮತ್ತು ತಮಿಳಿನಲ್ಲಿ ಮಾತ್ರ ಥಿಯೇಟರ್ ಶೇರ್ ವಾಪಸ ಆಗಿತ್ತು. ಮಲಯಾಳಂ, ತೆಲುಗು, ಹಿಂದಿಯಲ್ಲಿ ಪ್ರಚಾರದ ಖರ್ಚೂ ಹುಟ್ಟಲಿಲ್ಲ. ಅಂದಹಾಗೆ ಚಿತ್ರದ ಮರು ಬಿಡುಗಡೆಗೆ ರವಿಚಂದ್ರನ್ ಅವರೂ ನೋ ಎಂದಿದ್ದಾರಂತೆ.



