ನಟ ದರ್ಶನ್ ಈಗ ಸ್ಟಾರ್ ನಟನಲ್ಲ. ಬಂಧಿತ ಖೈದಿ. ಕಿಲ್ಲಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ದರ್ಶನ್‌ಗೆ ಸಾವಿರಾರು ಅಭಿಮಾನಿಗಳಿರಬಹುದು. ಆದರೆ ಪರಪ್ಪನ ಅಗ್ರಹಾರದಲ್ಲೇ ಇರಬೇಕು. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ 2ನೇ ಬಾರಿ ಜೈಲು ಸೇರಿ ಆಗಸ್ಟ್ 14ಕ್ಕೆ ಸರಿಯಾಗಿ 1 ವರ್ಷ. ಈ ಒಂದು ವರ್ಷ ಮುಗಿಯುವ ಮುನ್ನಾ ದಿನ ದರ್ಶನ್ ಅವರಿಗೆ ಒಟ್ಟು 4 ಶಾಕ್ ಎರಗಿ ಬಂದಿವೆ. ದರ್ಶನ್ ಜೈಲಿಗೆ ಸೇರಿ ಒಟ್ಟಾರೆಯಾಗಿ ಅವರು ಜೈಲಿನಲ್ಲಿ ಕಳೆದ ದಿನಗಳ ಒಟ್ಟು ಲೆಕ್ಕ 496 ದಿನಗಳು (ಸುಮಾರು 1 ವರ್ಷ 4 ತಿಂಗಳು) ಪೂರೈಸಿದ್ದಾರೆ.
ʻದರ್ಶನ್ʼಗೆ ಶಾಕ್ ನಂ. 1
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರಿಗೆ ಇನ್ನೋರ್ವ ಆರೋಪ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಲು ಮುಂದಾಗಿರುವುದರಿಂದ ದರ್ಶನ್ ಎದೆಯಲ್ಲಿ ಢವಢವ ಶುರುವಾಗಿದೆ. ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು 59ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ದರ್ಶನ್ (Darshan) ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಅವರಿಗೆ ಹಿನ್ನಡೆ ಆಗಿದೆ. ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿನಯ್ ಕುಲಕರ್ಣಿ ಕೇಸ್‌ನಲ್ಲಿ ಈಗಾಗಲೇ ಈ ಅಂಶದ ತೀರ್ಮಾನವಾಗಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿದೆ. ಹೀಗಾಗಿ 59ನೇ ಸಿಸಿಹೆಚ್ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ʻದರ್ಶನ್ʼಗೆ ಶಾಕ್ ನಂ. 2
ಪ್ರತಿದಿನ ಮಹತ್ವದ ಸಾಕ್ಷಿಗಳ ವಿಚಾರಣೆ ಮಾಡುವ ಜೊತೆಗೆ, ಹೊಸ-ಹೊಸ ಅರ್ಜಿಗಳ ಕುರಿತಾಗಿಯೂ ವಿಚಾರಣೆ ನಡೆಯುತ್ತಿದೆ. ಆರೋಪಿಗಳೆಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು, ವಿಚಾರಣೆ ವೇಳೆ ಪ್ರತಿಯೊಬ್ಬ ಆರೋಪಿಯೂ ತಾವಿರುವ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಎಲ್ಲರೂ ಸಮಯಕ್ಕೆ ಸರಿಯಾಗಿ ವಿಚಾರಣೆಗೆ ಹಾಜರಾದರು. ಆದರೆ ಪವಿತ್ರಾ ಗೌಡ ಮಾತ್ರ ತುಸು ತಡವಾಗಿ ವಿಚಾರಣೆಗೆ ಬಂದರು. ಆದರೆ ಈ ವೇಳೆ ಅವರು ಹೆಡ್ಫೋನ್ ಧರಿಸಿದ್ದನ್ನು ಜಡ್ಜ್ ಗಮನಿಸಿದರು. ಇದು ಅವರ ಸಿಟ್ಟಿಗೆ ಕಾರಣವಾಯ್ತು? ‘ಯಾಕೆ ತಡವಾಗಿ ಬಂದಿರಿ? ಹೆಡ್ಫೋನ್ಸ್ ಕೊಟ್ಟವರು ಯಾರು?, ಕಾನ್ಫರೆನ್ಸ್ ಸಮಯದಲ್ಲಿ ಹೆಡ್ಫೋನ್ಸ್ ಬಳಕೆಗೆ ಅವಕಾಶ ಇಲ್ಲ ಎಂಬುದು ಗೊತ್ತಿಲ್ಲವೆ?’ ಎಂದು ಸಿಟ್ಟಾದರು. ಆದರೆ ಪವಿತ್ರಾ ಗೌಡ, ತಾವು ಹೆಡ್ಫೋನ್ಸ್ ಬಳಸಿಲ್ಲ ಎಂದರು ಆದರೆ ಜಡ್ಜ್, ತಾವು ಖುದ್ದು, ಪವಿತ್ರಾ, ಹೆಡ್ಫೋನ್ಸ್ ಬಳಸಿದ್ದನ್ನು ಗಮನಿಸಿದ್ದೇನೆ’ ಎಂದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಡ್ಜ್, ‘ಹೆಡ್ಫೋನ್ಸ್ ಕೊಟ್ಟವರು ಯಾರು? ಮಹಿಳಾ ಸೆಲ್ನಲ್ಲಿ ಆರೋಪಿಗಳಿಗೆ ಅಧಿಕಾರಿಗಳು ಹೆಡ್ಫೋನ್ಸ್ ಕೊಡುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದ ಜಡ್ಜ್, ಈ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದು ಸಣ್ಣ ವಿಷಯವೇ ಇರಬಹುದು. ಆರೋಪಿಗಳ ಇಂತಹ ವರ್ತನೆ ಕೂಡಾ ಕೌಂಟ್ ಆಗುತ್ತಿರುತ್ತದೆ.
ʻದರ್ಶನ್ʼಗೆ ಶಾಕ್ ನಂ. 3
ದರ್ಶನ್ ಅವರಿಗೆ ಈ ರೀತಿಯಾಗಿ ಪದೇ ಪದೇ ಹಿನ್ನಡೆ ಆಗುತ್ತಿದ್ದರೆ ಅತ್ತ ವಿಜಯಲಕ್ಷ್ಮಿ ದರ್ಶನ್ ಅವರು ಬಹಿರಂಗವಾಗಿ ಅಸಹಾಯಕತೆ ತೋಡಿಕೊಂಡಿದ್ಧಾರೆ. ದರ್ಶನ್ ಜೈಲಲ್ಲಿ ಈ ಬೆಳವಣಿಗೆಯಿಂದ ಸಂಕಟದಲ್ಲಿ ಒದ್ದಾಡುತ್ತಿದ್ದರೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಎಲ್ಲಾ ವಿಚಾರಗಳು ದೇವರಿಗೆ ಗೊತ್ತು ಅನ್ನೋ ರೀತಿಯಲ್ಲಿ ಮಾರ್ಮಿಕವಾಗಿ ಸೋಶಿಯಲ್ ಮೀಡಿಯಾ ಸರಣಿ ಪೋಸ್ಟ್ ಹಾಕಿದ್ದಾರೆ. ವಿಜಯಲಕ್ಷ್ಮಿ ಕಾಮಾಕ್ಯದೇವಿಯ ಭಕ್ತೆ. ಹಲವು ಬಾರಿ ಭೇಟಿ ಕೊಟ್ಟಿದ್ದುಂಟು. ಇದೀಗ ಅದೇ ದೇವಿಯ ಫೋಟೋಗಳನ್ನ ಹಂಚಿಕೊಂಡು `ದೇವರಿಗೆ ಗೊತ್ತು’ ಎಂದು ನಿಗೂಢವಾಗಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ಗೆ `ಎಲ್ಲಿಗೆ ಓಡುವೆ ಓ ಮನುಜ ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆʼ ಎಂಬ ಹಾಡು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಇನ್ನೊಂದು ಭಾವನಾತ್ಮಕ ಬರಹದಲ್ಲಿ ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡು ಮತ್ತಷ್ಟು ಕುತೂಹಲದ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಹಿನ್ನೆಡೆಯಾದ ಬಳಿಕ ಬಂದಿರುವ ಸ್ಟೋರಿ ಪೋಸ್ಟ್ ಇದು.
ʻದರ್ಶನ್ʼಗೆ ಶಾಕ್ ನಂ. 4
ಈ ಎಲ್ಲ ಶಾಕ್‌ಗಳ ಮಧ್ಯೆ ದರ್ಶನ್ ಜೈಲಿಗೆ ಸೇರಿ ಒಟ್ಟಾರೆಯಾಗಿ ಅವರು ಜೈಲಿನಲ್ಲಿ ಕಳೆದ ದಿನಗಳ ಒಟ್ಟು ಲೆಕ್ಕ 496 ದಿನಗಳು (ಸುಮಾರು 1 ವರ್ಷ 4 ತಿಂಗಳು). ಮೊದಲ ಹಂತದ ಜೈಲುವಾಸ (131 ದಿನಗಳು): ಜೂನ್ 11, 2024 ರಂದು ಮೈಸೂರಿನಲ್ಲಿ ಮೊದಲ ಬಾರಿಗೆ ದರ್ಶನ್ ಬಂಧನಕ್ಕೊಳಗಾಗಿದ್ದರು. ನಂತರ ಅವರಿಗೆ ಬೆನ್ನುನೋವಿನ ಚಿಕಿತ್ಸೆಗಾಗಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಅಕ್ಟೋಬರ್ 30, 2024 ರಂದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಅವಧಿಯಲ್ಲಿ ಅವರು 131 ದಿನಗಳ ಕಾಲ ಜೈಲಿನಲ್ಲಿದ್ದರು. ಎರಡನೇ ಹಂತದ ಜೈಲುವಾಸ (365 ದಿನಗಳು) ಆಗಸ್ಟ್ 14, 2025 ರಂದು ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸಿ ತಕ್ಷಣವೇ ಶರಣಾಗಲು ಆದೇಶಿಸಿತು. ಅಂದಿನಿಂದ ಇಂದಿನವರೆಗೆ (ಆಗಸ್ಟ್ 14, 2026) ದರ್ಶನ್ ಅವರು ಜೈಲಿನಲ್ಲೇ ಮುಂದುವರಿದಿದ್ದು, ಈ ಎರಡನೇ ಅವಧಿಯಲ್ಲಿ ನಿಖರವಾಗಿ 365 ದಿನಗಳನ್ನು (ಒಂದು ವರ್ಷ) ಪೂರೈಸಿದ್ದಾರೆ. ಇದೀಗ ಮೊದಲ ಬಾರಿಗೆ ದರ್ಶನ್ ಹೈಕೋರ್ಟಿಗೆ ವಿಚಾರಣೆಗೆ ಹಾಜರಾಗಬಹುದು.



