ಮಾಜಿ ಸಿಎಂ ಸಿದ್ದರಾಮಯ್ಯ ಈಗ ಏಕಾಂಗಿಯಾಗುತ್ತಿದ್ದಾರೆಯೇ ಅಥವಾ ಏಕಾಂಗಿಯಾಗಬಹುದು ಎಂದು ಅನಿಸುತ್ತಿದೆಯೇ.. ರಾಜಕೀಯದಲ್ಲಿ ಇಂಥಾದ್ದೊಂದು ಚರ್ಚೆಯಂತೂ ಶುರುವಾಗಿದೆ. ಏಕೆಂದರೆ ಸಿದ್ದರಾಮಯ್ಯ ಬಣದಲ್ಲಿದ್ದ, ಸಿದ್ದು ಅವರಿಗಾಗಿ ಬಹಿರಂಗವಾಗಿ ಬಡಿದಾಡುತ್ತಿದ್ದವರೇ ಈಗ ಸಿದ್ದು ವಿರುದ್ಧ ಮುನಿಸಿಕೊಂಡಿದ್ಧಾರೆ. ಸಿದ್ದರಾಮಯ್ಯ ಅವರು ತಮ್ಮನ್ನು ನಡುನೀರಿನಲ್ಲಿ ಕೈಬಿಟ್ಟರು ಎಂಬ ಆಕ್ರೋಶ ಅವರ ಮಾತು, ವರ್ತನೆಯಲ್ಲಿ ಕಾಣುತ್ತಿದೆ. ಅದನ್ನು ಕೆಲವು ಆಪ್ತರು, ಅತ್ಯಂತ ನೇರವಾಗಿ ಸಿದ್ದರಾಮಯ್ಯ ಅವರಿಗೆ ಹೇಳಿಯೇ ಮನೆಯಿಂದ ಹೊರ ಬಂದಿದ್ದಾರೆ.
ಸಿದ್ದು ವಿರುದ್ಧ ಮುನಿಸಿಗೆ ಕಾರಣ ನಂ.1 : ಯತೀಂದ್ರ ಸಿದ್ದರಾಮಯ್ಯ
ವಿಧಾನಪರಿಷತ್ ಸಭಾನಾಯಕರಾಗಿಯೂ ಆಯ್ಕೆಯಾಗಿರುವ ಯತೀಂದ್ರ ಸಿದ್ಧರಾಮಯ್ಯ ಮೊದಲ ಬಾರಿಗೆ ಸಚಿವ. ವರುಣಾದಿಂದ ಕಳೆದ ಬಾರಿ ಗೆದ್ದು ವಿಧಾನಸಭೆಗೆ ಬಂದಿದ್ದ ಯತೀಂದ್ರ, 2ನೇ ಬಾರಿ ತಂದೆಗೆ ತ್ಯಾಗ ಮಾಡಿ, ಮೇಲ್ಮನೆಗೆ ಬಂದರು. ಆಕ್ಚುವಲಿ ತ್ಯಾಗ ಮಾಡಿದ್ದವರು ಬಾದಾಮಿ ಕ್ಷೇತ್ರದವರೇ ಹೊರತು, ಯತೀಂದ್ರ ಅಲ್ಲ. ಈಗ ಮಗ ಯತೀಂದ್ರ ಅವರನ್ನು ಮೇಲ್ಮನೆ ಸಭಾನಾಯಕರನ್ನಾಗಿ ಮಾಡಬೇಕು ಹಾಗೂ ಮೈಸೂರು ಜಿಲ್ಲೆಯಲ್ಲಿ ಯತೀಂದ್ರ ಒಬ್ಬರೇ ಸಚಿವರಾಗಿರಬೇಕು ಎಂಬ ಪುತ್ರ ಪ್ರೇಮಕ್ಕೆ ಮೈಸೂರು ಜಿಲ್ಲೆಯ ಆಪ್ತರು ಮುನಿದಿದ್ದಾರೆ.
ಮೈಸೂರು ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ದಿಢೀರ್ ರಹಸ್ಯ ಸಭೆ ನಡೆಸಿರುವುದು ರಹಸ್ಯವೇನಲ್ಲ. ಮೂವರೂ ಹಿರಿಯ ನಾಯಕರಿಗೆ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ದಿಢೀರ್ ಭೇಟಿ ನೀಡಿ, ಅತೃಪ್ತ ಹಿರಿಯ ನಾಯಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿದ್ದ ಸತೀಶ್ ಜಾರಕಿಹೊಳಿ ಅವರು ಪ್ರಸ್ತುತ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿಯೂ ತಮ್ಮ ಪ್ರಭಾವಿ ಸಚಿವ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಹಿಡಿತ ಸಡಿಲವಾಗುತ್ತಿರುವ ಹಿನ್ನೆಲೆಯಲ್ಲಿ ಅಹಿಂದ (AHINDA) ನಾಯಕತ್ವವನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇನ್ನು ಜಮೀರ್ ಅಹ್ಮದ್ ಅವರೂ ಅಷ್ಟೇ.. ಸಿದ್ದರಾಮಯ್ಯ ಅವರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಜಮೀರ್ ಅಹಮದ್ ಖಾನ್ ಅವರು ಈಗ ಹೊಸ ಸಚಿವ ಸಂಪುಟದಲ್ಲಿ ಮುಂದುವರಿದಿದ್ದಾರೆ. ಸತೀಶ್ ಮತ್ತು ಜಮೀರ್ ಇಬ್ಬರ ಕುರಿತಂತೆಯೂ ಮುನಿಸು ಎಂಬ ವರದಿಗಳು ಬಂದವು. ಅದನ್ನವರು ನಿರಾಕರಿಸಿದರು. ಆದರೆ ಮಾಧ್ಯಮಗಳ ಪ್ರಕಾರ ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ ಎನ್ನುವುದು ಸತ್ಯ. ಆಗಿರುವುದೂ ಸತ್ಯ.
ಕೊಪ್ಪಳ ಭಾಗದ ಸಿದ್ದರಾಮಯ್ಯ ಬಣದ ಕಟ್ಟಾ ಬೆಂಬಲಿಗ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಸದ್ಯಕ್ಕೆ ಅವರಿಗೆ ಸಚಿವ ಸ್ಥಾನ ಸಿಗದಿದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಬಣದ ಅಸ್ತಿತ್ವ ಉಳಿಸಲು ಆಂತರಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಅವರ ಬಣದ ನಾಯಕರು ಒಂದೆಡೆ ಸಚಿವ ಸ್ಥಾನ ವಂಚಿತರಾಗಿ ಅಸಮಾಧಾನ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ತಮ್ಮ ಅಸ್ತಿತ್ವ ಮತ್ತು ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರತ್ಯೇಕ ಸಭೆ ಹಾಗೂ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ.



