ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯ ಕರ್ನಾಟಕದ ಮಾಜಿ ಸಿಎಂ ಅಷ್ಟೇ. ಹೀಗಿರುವಾಗಲೇ ನಡೆದಿರುವ ಎರಡು ಬೆಳವಣಿಗೆಗಳು ಅಚ್ಚರಿ ಹುಟ್ಟಿಸುತ್ತಿವೆ. ಏಕೆಂದರೆ ಸಿದ್ದರಾಮಯ್ಯ ಯಾರನ್ನು ಬಲವಾಗಿ ನಂಬಿದ್ದರೋ.. ಅವರು ಸಿದ್ದುಗೆ ನಂಬಿಕೆ ದ್ರೋಹ ಮಾಡಿದ್ದಾರಂತೆ. ಇತ್ತ ಸಿದ್ದರಾಮಯ್ಯ ಅವರನ್ನು ನಂಬಿದ್ದವರಿಗೆ ಏನೂ ಮಾಡೋಕೆ ಆಗದ ಅಸಹಾಯಕ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ದಿನಗಳಲ್ಲಿ ತುಂಬಾ ನಂಬಿದ್ದವರಲ್ಲಿ ಜಮೀರ್ ಅಹ್ಮದ್ ಕೂಡಾ ಒಬ್ಬರು. ಅವರು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷಕ್ಕೇ ದ್ರೋಹ ಮಾಡಿದರು ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ಸಿದ್ದರಾಮಯ್ಯ ಅವರೇನೋ ಸಿಟ್ಟಾಗಿದ್ದಾರೆ. ಗದರಿದ್ದಾರೆ. ಬೈದಿದ್ದಾರೆ. ಆದರೆ.. ಈಗ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿದೆ. ದಾವಣಗೆರೆ ಗೆದ್ದರೂ ಮುಸ್ಲಿಮರ ಮತಗಳನ್ನು ಸೆಳೆಯಲು ಅಥವಾ ಬೇರೆ ಕಡೆ ಶಿಫ್ಟ್ ಮಾಡೋಕೆ ಸಾಧ್ಯ ಇದೆ ಎಂಬ ಸಂದೇಶ ಹೋಗಿದೆ. ಕಾಂಗ್ರೆಸ್ಸಿನೊಳಗೇ ಕಾಂಗ್ರೆಸ್ಸಿಗೆ ದ್ರೋಹ ಮಾಡಿದ ಆರೋಪ ಹೊತ್ತಿರುವುದು ಸಿದ್ದರಾಮಯ್ಯ ಬಲಗೈ ಬಂಟ ಎಂದೇ ನಂಬಲಾಗಿದ್ದ ಜಮೀರ್ ಅಹ್ಮದ್.
ಇನ್ನೊಬ್ಬರು ಸತೀಶ್ ಜಾರಕಿಹೊಳಿ. ಸಿದ್ದರಾಮಯ್ಯ ಅಧಿಕಾರದಲ್ಲಿ ಇಲ್ಲದೇ ಇದ್ದಾಗ, ಜೆಡಿಎಸ್‌ನಿಂದ ಮುನಿಸಿಕೊಂಡು ಹೊರಬಿದ್ದಾಗ ಸಿದ್ದರಾಮಯ್ಯ ದೇಖರೇಖಿಗಳನ್ನು ನೋಡಿಕೊಂಡವರಲ್ಲಿ ಜಾರಕಿಹೊಳಿಯುವರೂ ಒಬ್ಬರು. ಮತ್ತೊಬ್ಬರು ಸಂತೋಷ್ ಲಾಡ್. ಇನ್ನೊಬ್ಬರು ಸಿಎಂ ಇಬ್ರಾಹಿಂ. ಇದರಲ್ಲಿ ಹೆಚ್ಚಿನ ಪಾಲು ಜಾರಕಿಹೊಳಿ ಅವರದ್ದು. ಆದರೆ ಈಗ ಅವರ ಮೇಲೆ ಸಿದ್ದರಾಮಯ್ಯ ವಿರುದ್ಧವೇ ಸಹಿ ಸಂಗ್ರಹ ಮಾಡಿದ ಆರೋಪ ಕೇಳಿ ಬಂದಿದೆ. ಏಕೆ ಎಂದರೆ.. ಕೊನೆ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ನಡೆಗಳು ಸತೀಶ್ ಜಾರಕಿಹೊಳಿ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ.
ಅದೆಲ್ಲದಕ್ಕಿಂತ ಹೆಚ್ಚಾಗಿ ಸಿದ್ದು ನಂಬಿದ್ದ ನಾಯಕ ಕೆಸಿ ವೇಣುಗೋಪಾಲ್. ಕೇರಳದಲ್ಲಿ ವಿಡಿ ಸತೀಶನ್ ಅವರು ಸಿಎಂ ಆದರಲ್ಲ, ಆಗ ಪೈಪೋಟಿಯಲ್ಲಿದ್ದವರು ಇದೇ ಕೆಸಿ ವೇಣುಗೋಪಾಲ್. ಅಲ್ಲಿಯೂ ಎರಡೂವರೆ ವರ್ಷ-ಎರಡೂವರೆ ವರ್ಷ ಅಗ್ರಿಮೆಂಟ್ ಎನ್ನಲಾಗುತ್ತಿದೆ. ಸಿದ್ದುಗೆ ಕುರ್ಚಿ ಹಿಡಿದುಕೊಟ್ಟಿದ್ದ ವೇಣುಗೋಪಾಲ್ ಅವರಿಗೆ ತಮ್ಮ ಹುದ್ದೆಯ ನೆನಪಾಗಿದೆ. ಈಗ ಸಿದ್ದು ಕಂಟಿನ್ಯು ಆಗೋಕೆ ಒಪ್ಪಿಕೊಂಡರೆ ನಾಳೆ ತಾವು ಸಿಎಂ ಆಗೋದು ಕಷ್ಟ ಎನ್ನುವುದು ಅರಿವಾಗುತ್ತಿದ್ದಂತೆಯೇ ವೇಣುಗೋಪಾಲ್ ಕೈ ಎತ್ತಿಬಿಟ್ಟಿದ್ಧಾರೆ. ಸಿದ್ದು ಅತಿಯಾಗಿ ನಂಬಿಕೊಂಡಿದ್ದ ಹೈಕಮಾಂಡ್ ನಾಯಕ ವೇಣುಗೋಪಾಲ್.
ಇನ್ನು ಸಿದ್ದರಾಮಯ್ಯ ಪರವಾಗಿ ಬಲವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆಎನ್ ರಾಜಣ್ಣ ಅವರು ಸಚಿವ ಸ್ಥಾನವನ್ನೇ ಕಳೆದುಕೊಳ್ಳಬೇಕಾಗಿದ್ದು ವಿಶೇಷ. ಬಹಿರಂಗವಾಗಿ ಡಿಕೆ ಶಿವಕುಮಾರ್ ಅವರನ್ನೂ ಎದುರು ಹಾಕಿಕೊಂಡ ರಾಜಣ್ಣ, ಈಗ ಆರ್ಡಿನರಿ ಶಾಸಕ. ಅಷ್ಟೇ. ಕೆಎನ್ ರಾಜಣ್ಣ ಅವರನ್ನು ಸಿದ್ದರಾಮಯ್ಯ ದೂರ ಮಾಡಿದರು ಎಂಬ ಆರೋಪವೂ ಇದೆ. ರಾಜಣ್ಣ ಮನೆಗೆ ಬಂದು ಊಟ ಮಾಡಿದರೆ ಆಗಿರುವ ನಷ್ಟ ಸರಿ ಹೋಗುವುದಿಲ್ಲ.
ಮತ್ತೊಬ್ಬರು ಸಂತೋಷ್ ಲಾಡ್. ಮೂಲಗಳ ಪ್ರಕಾರ ಡಿಕೆ ಕ್ಯಾಬಿನೆಟ್ಟಿನಲ್ಲಿ ಸ್ಥಾನ ಸಿಗುವುದೇ ಕಷ್ಟ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಜೊತೆ ಬಲವಾಗಿ ನಿಂತಿದ್ದಕ್ಕೆ ಸಂತೋಷ್ ಲಾಡ್ ಬೆಲೆ ತೆರಬೇಕು ಎನ್ನಲಾಗಿದೆ. ಹೆಚ್ ಸಿ ಮಹದೇವಪ್ಪ ಅವರ ಪರಸ್ಥಿತಿಯೂ ಭಿನ್ನವೇನಲ್ಲ.
ಇನ್ನು ಸಿಎಂ ಆದ ಮೇಲೆ ಸಿದ್ದು ಆಪ್ತರ ಬಳಗ ಸೇರಿಕೊಂಡಿದ್ದ ಜಾರ್ಜ್, ಭೈರತಿ ಸುರೇಶ್, ಕೊನೆಯ ದಿನಗಳಲ್ಲಿ ಸಿದ್ದು ಟೀಂಗೆ ಸೇರಿದ್ದ ಬಿಕೆ ಹರಿಪ್ರಸಾದ್, ಪರಮೇಶ್ವರ್ ಅವರಿಗೆ ಸಮಸ್ಯೆ ಏನೂ ಇಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಯಾರನ್ನು ನಮ್ಮವರು ಎಂದು ನಂಬಿದ್ದರೋ.. ಅವರು ನಮ್ಮವರಲ್ಲ ಎನ್ನುವಂತೆ ಮಾಡಿದೆ ರಾಜಕೀಯ. ನಮ್ಮ ಲೀಡರ್ ಸಿದ್ದರಾಮಯ್ಯ ಎಂದು ನಂಬಿದ್ದ ನಾಯಕರಿಗೆ ಅದೇ ರೀತಿಯ ಅನುಭವ ಆಗಿದೆ. ಏಕೆಂದರೆ ಅವರ ಕಷ್ಟಕಾಲದಲ್ಲಿ ನೆರವು ನೀಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದ್ದಂತಿಲ್ಲ. ನೆರವು ನೀಡುವ ಶಕ್ತಿ ಇದ್ದ ವೇಳೆ ಸಿದ್ದರಾಮಯ್ಯ ನೆರವು ನೀಡಲಿಲ್ಲ.
ಇದೆಲ್ಲದರ ನಡುವೆ ಲಾಭವಾಗುತ್ತಿರುವುದು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಾತ್ರ.



