ಕಾಂಗ್ರೆಸ್ ನಾಯಕ ಯಂಗ್ ಟರ್ಕ್ ಪ್ರದೀಪ್ ಈಶ್ವರ್ ಅವರು ಸದಾ ಸುದ್ದಿಯಲ್ಲಿರ್ತಾರೆ. ಅವರು ಎದುರಾಳಿಗಳನ್ನು ಮುಖ ಮೂತಿ ನೋಡದೆ ಮುಲಾಜಿಲ್ಲದೆ ಮಾತನಾಡ್ತಾರೆ. ಭಾಷೆಯಲ್ಲಿ ಹಿಡಿತ ಇರೋದಿಲ್ಲ. ಬಹುತೇಕ ಬಾರಿ ಅದು ಪರ್ಸನಲ್ ಹಂತಕ್ಕೆ ಹೋಗುತ್ತದೆ. ಪ್ರತಾಪ್ ಸಿಂಹ ವಿರುದ್ಧದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯದಲ್ಲಿ ಮತ್ತೆ ಮತ್ತೆ ಹಿನ್ನಡೆ ಅನುಭವಿಸುತ್ತಿರುವ ಪ್ರದೀಪ್ ಈಶ್ವರ್, ಈ ಬಾರಿ ಕುಮಾರಸ್ವಾಮಿ ಅವರನ್ನು ಕೆಣಕಿ ತಪ್ಪು ಮಾಡಿದ್ದಾರಾ.. ಇದು ಕಾಂಗ್ರೆಸ್ಸಿನಲ್ಲೇ ಚರ್ಚೆಯಾಗುತ್ತಿರುವ ಮಾತು. ಪ್ರದೀಪ್ ಈಶ್ವರ್ ಕಾಂಗ್ರೆಸ್ ನಾಯಕರ ಪಾಲಿಗೆ ಒಂದು ವಿಶೇಷ ಬ್ರಹ್ಮಾಸ್ತ್ರ. ಯಾರ ಯಾರ ವಿರುದ್ಧ ಕೌಂಟರ್ ಕೊಡುವುದಕ್ಕೆ ಆಗುವುದಿಲ್ಲವೋ.. ಆಗೆಲ್ಲ ಆ ನಾಯಕರನ್ನು ಅಟ್ಯಾಕ್ ಮಾಡುವುದು ಪ್ರದೀಪ್ ಈಶ್ವರ್. ಆಮೇಲೆ ವಿಷಯ ಸೈಡಿಗೆ ಹೋಗುತ್ತದೆ. ಅದು ಟೆಕ್ನಿಕ್ಕು. ಆದರೆ ಈ ಬಾರಿ ಹಾಗಾಗಿಲ್ಲ.
ಕುಮಾರಸ್ವಾಮಿ ಅವರನ್ನು ಬಿಡದಿ ಭೂ ಸ್ವಾಧೀನ ವಿಚಾರದಲ್ಲಿ ಕೆಣಕಿದ್ದ ಪ್ರದೀಪ್ ಈಶ್ವರ್ ʻʻಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಬಳಿ 85 ವಾಚುಗಳಿಗೆ. ಇದರ ಒಟ್ಟು ಮೌಲ್ಯ 10 ರಿಂದ 20 ಕೋಟಿ ಆಗುತ್ತದೆ. ಕುಮಾರಸ್ವಾಮಿ ಬೇರೆಯವರ ಬಗ್ಗೆ ಆರೋಪ ಮಾಡುತ್ತಾರೆ? ಅವರ ಬಳಿಕ ಇಷ್ಟೊಂದು ಮೊತ್ತ ಎಲ್ಲಿಂದ ಬಂತು ʼʼ ಎಂದು ಕೆಣಕಿದ್ದರು.
ಇದಕ್ಕೆ ಉತ್ತರ ಕೊಟ್ಟಿದ್ದ ಕುಮಾರಸ್ವಾಮಿ ʻʻನಿಮ್ಮದೇ ಸರ್ಕಾರ ಇದೆ, ಎಸ್‌ಐಟಿ ರಚನೆ ಮಾಡಿಸಿ ತನಿಖೆ ಮಾಡಿಸಿʼʼ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು. ಆದರೆ ಕುಮಾರಸ್ವಾಮಿ ಟೀಂ ಎಷ್ಟು ಆಕ್ಟಿವ್ ಎಂದರೆ ಬಹುತೇಕರು ಮರೆತೇ ಹೋಗಿದ್ದ ಪ್ರದೀಪ್ ಈಶ್ವರ್ ಸಿಎ ಸೈಟು ವಿವಾದವನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ್ದಾರೆ.
ಏನಿದು ಪ್ರದೀಪ್ ಈಶ್ವರ್ ಸಿಎ ಸೈಟು ವಿವಾದ..?
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರವು (CUDA) ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಬೀಡಗಾನಹಳ್ಳಿ ಗ್ರಾಮದಲ್ಲಿರುವ 2,484 ಚದರ ಮೀಟರ್ ವಿಸ್ತೀರ್ಣದ ಮೂರು ಪ್ರಮುಖ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿತ್ತು. 2026ರ ಜನವರಿ 14 ರಂದು ಸಿಯುಡಿಎ (CUDA) ಈ ನಿವೇಶನಗಳನ್ನು ಪ್ರದೀಪ್ ಈಶ್ವರ್ ಅವರ ಟ್ರಸ್ಟ್‌ಗೆ ನೀಡಲು ಅಧಿಕೃತ ನಿರ್ಣಯ ಅಂಗೀಕರಿಸಿತ್ತು. ಗುಜರಾತ್ ಮೂಲದ ಬಿಜಾಪುರ ಮೂಲದ ಸಾರ್ವಜನಿಕ ಸಂಸ್ಥೆಯಾದ ‘ಪದ್ಮ ವಿಜಯ ಫೌಂಡೇಷನ್’ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸೈಟು ನೀಡಿದ್ದನ್ನು ಪ್ರಶ್ನೆ ಮಾಡಿತ್ತು. ಅರ್ಜಿ ಸಲ್ಲಿಸಲು ಪ್ರಾಧಿಕಾರ ನಿಗದಿಪಡಿಸಿದ್ದ ಅಂತಿಮ ದಿನಾಂಕ ಮುಗಿಯುವ ಮುನ್ನವೇ, ಶಾಸಕರು ತಮ್ಮ ರಾಜಕೀಯ ಪ್ರಭಾವ ಬಳಸಿ ಏಕಪಕ್ಷೀಯವಾಗಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠವು, ಹಂಚಿಕೆಯಾದ ಜಾಗದಲ್ಲಿ ಯಥಾಸ್ಥಿತಿ (Status Quo) ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿದ್ದು, ಸರ್ಕಾರ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪ್ರದೀಪ್ ಈಶ್ವರ್ ಅವರ ಟ್ರಸ್ಟ್‌ಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಪ್ರದೀಪ್ ಈಶ್ವರ್ ಅವರು ತಮ್ಮ ‘ಪರಿಶ್ರಮ’ ಕಾಲೇಜಿಗಾಗಿ ಕಾನೂನುಬಾಹಿರವಾಗಿ ಈ ಸಿಎ ಸೈಟುಗಳನ್ನು ಲೂಟಿ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, “ನಾನು ಈ ಸೈಟುಗಳನ್ನು ಪುಕ್ಕಟೆಯಾಗಿ ಪಡೆದಿಲ್ಲ, 5 ಕೋಟಿ ರೂಪಾಯಿ ಪಾವತಿಸಿ 30 ವರ್ಷಗಳ ಅವಧಿಗೆ ಲೀಸ್ (ಬಾಡಿಗೆ) ಮೇಲೆ ನಿಯಮಬದ್ಧವಾಗಿ ಪಡೆದಿದ್ದೇನೆ. ಶಿಕ್ಷಣ ಸಂಸ್ಥೆ ನಡೆಸಲು ನಾನು ಅರ್ಹನಾಗಿದ್ದೇನೆ” ಎಂದು ಸಮರ್ಥಿಸಿಕೊಂಡಿದ್ದರು. ಸದ್ಯ ಈ ಪ್ರಕರಣವು ನ್ಯಾಯಾಲಯದ ಅಧೀನದಲ್ಲಿದ್ದು, ಹೈಕೋರ್ಟ್ ಮುಂದಿನ ವಿಚಾರಣೆಯನ್ನು ನಡೆಸಲಿದೆ.



